ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ, ಜೆಡಿಎಸ್‌ನಿಂದ ರಸ್ತೆ ತಡೆ

ಸರ್ಕಾರದ ಜನವಿರೋಧಿ ಧೋರಣೆಗೆ ಮುಖಂಡರ ಆಕ್ರೋಶ ತುಮಕೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡಿಸಿ ಗುರುವಾರ ನಗರದ ಸ್ವಾತಂತ್ರ್ಯ ಚೌಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಅಶೋಕ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆ ತಡೆ ಕೈಬಿಡುವಂತೆ ಕೇಳಿಕೊಂಡಾಗ ಪ್ರತಿಭಟನಾಕಾರರು ಒಪ್ಪದ ಕಾರಣ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು ವ್ಯಾನ್‌ಗಳನ್ನು ಕೂರಿಸಿಕೊಂಡು ಕರೆದೊಯ್ದರು.

 

 

ಪ್ರತಿಭಟನೆ ವೇಳೆ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ, ರೈತ ವಿರೋಧಿ ಸರ್ಕಾರ. ಬೆಲೆ ಏರಿಕೆ ಮಾಡಿ ಜನರಿಗೆ ಎಲ್ಲಾ ರೀತಿಯಲ್ಲೂ ಬರೆ ಎಳೆಯುವ ಕೆಲಸ ಮಾಡುತ್ತಿದೆ ಪರಿಶಿಷ್ಟಜಾತಿ, ವರ್ಗ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂ.ಅವ್ಯವಹಾರ ನಡೆದಿದೆ ಎಂದರು.

 

 

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಮಾನ್ಯ ಜನರಿಗೆ ಹೊರೆಯಾಗಿದೆ. ತೈಲ ಬೆಲೆ ಏರಿಕೆಯಿಂದ ಇತರೆ ಪದಾರ್ಥಗಳ ಬೆಲೆಯೂ ಏರಿಕೆಯಾಗಿ ಎಲ್ಲಾ ಕ್ಷೇತ್ರಗಳಿಗೂ ಪರಿಣಾಮ ಬೀರಲಿದೆ. ಕೆಎಸ್‌ಆರ್‌ಟಿಸಿ ಪ್ರಯಾಣ ದರ ಏರಿಸುವ ಸುಳಿವನ್ನು ಸಚಿವರು ನೀಡಿದ್ದಾರೆ. ನೀರಿನ ದರ ಹೆಚ್ಚಿಸುವ ಪ್ರಯತ್ನ ನಡೆದಿದೆ, ಈಗಲೇ ಹೆಚ್ಚಾಗಿರುವ ಹಾಲಿನ ದರ ಮತ್ತಷ್ಟು ಹೆಚ್ಚಾಉ ಮಾಡಬಹುದು, ಜೆಲ್ಲಿ, ಮರಳಿನಿಂದ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸರ್ಕಾರ ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿ ಜನರು ವಿಷ ಕುಡಿಯುವ ಭಾಗ್ಯ ನೀಡಲಿದೆ ಎಂದುಆಕ್ರೋಶ ವ್ಯಕ್ತಪಡಿಸಿದ ಶಾಸಕ ಜ್ಯೋತಿಗಣೇಶ್, ರಾಜ್ಯ ಸರ್ಕಾರ ತನ್ನ ಕೆಟ್ಟ ನಿರ್ಧಾರಗಳನ್ನು ವಾಪಸ್ ಪಡೆದು ಜನಪರ ಕಾರ್ಯಕ್ರಮಗಳನ್ನು ಕೊಡಬೇಕು ಎಂದು ಒತ್ತಾಯಿಸಿದರು.

 

 

 

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಅಭಿವೃದ್ಧಿ ಕಾರ್ಯ ಮರೆತು ಬೆಲೆ ಏರಿಕೆ ನಿರ್ಧಾರಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ರಾಜ್ಯ ಸರ್ಕಾರದ ಬೆಲೆ ಏರಿಕೆ ನಿರ್ಧಾಗಳ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯಾದ್ಯಂತ ಹೋರಾಟ ನಡೆಸಿವೆ. ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ವಿಧಾನಸಭಾ ಕ್ಷೇತ್ರವಾರು ಎರಡೂ ಪಕ್ಷಗಳಿಂದ ರಸ್ತೆ ತಡೆದು ಹೋರಾಟ ಮಾಡಲಾಗುತ್ತಿದೆ ಎಂದರು.

 

 

ಹಾಲು ಉತ್ಪಾದಕರಿಗೆ ನೀಡಬೇಕಾದ ಸುಮಾರು ೭೦೦ ಕೋಟಿ ರೂ.ಗಳ ಹಾಲಿನ ಪ್ರೋತ್ಸಾಹಧನವನ್ನು ಸರ್ಕಾರ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ. ವಿದ್ಯುತ್ ದರ, ಹಾಲಿನ ದರ, ಮುದ್ರಾಂಕ ಶುಲ್ಕ ಸೇರಿದಂತೆ ವಿವಿಧ ಸೇವಾ ಶುಲ್ಕಗಳನ್ನು ವಿಪರೀತವಾಗಿ ಏರಿಕೆ ಮಾಡಿ ಸರ್ಕಾರ ತನ್ನ ಗ್ಯಾರೆಂಟಿ ಯೋಜನೆಗಳಿಗೆ ಹಣ ಸಂಗ್ರ್ರಹಿಸಲು ಜನರ ಮೇಲೆ ಹೊರೆ ಹೇರುತ್ತಿದೆ. ಪೆಟ್ರೋಲ್, ಡೀಸೆಲ್ ಮೇಲೆ ಏರಿಸಿರುವ ಬೆಲೆಯನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲಿಸದಿರಲು ತೀರ್ಮಾನ ಮಾಡಲಾಗಿದೆ, ಹೋಬಳಿ, ಪಂಚಾಯ್ತಿ ಮಟ್ಟದಲ್ಲೂ ಹೋರಾಟ ಮಾಡುವುದಾಗಿ ಹೇಳಿದರು.

 

 

ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಮುಖಂಡ ದೊಡ್ಡಮನೆ ಗೋಪಾಲಗೌಡ, ಜೆಡಿಎಸ್ ಮುಖಂಡ ಶ್ರೀನಿವಾಸ್‌ಪ್ರಸಾದ್ ಮೊದಲಾದವರು ಮಾತನಾಡಿ ರಾಜ್ಯ ಸರ್ಕಾರದ ಜನವಿರೋಧಿ ನೀಡಿ ಖಂಡಿಸಿ, ಪೆಟ್ರೋಲ್, ಡೀಸೆಲ್‌ನ ಏರಿಕೆ ಹಿಂಪಡೆಯಲು ಒತ್ತಾಯಿಸಿದರು.
ಜಿಲ್ಲಾ ಜೆಡಿಎಸ್ ಕಾಯಾಧ್ಯಕ್ಷ ಟಿ.ಆರ್.ನಾಗರಾಜು, ಬಿಜೆಪಿ ನಗರ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ಯುವ ಮೋರ್ಚಾ ಅಧಕ್ಷ ನವಚೇತನ್, ಮುಖಂಡರಾದ ರುದ್ರೇಶ್, ನಂದೀಶ್, ಗಣೇಶ್‌ಪ್ರಸಾದ್, ಸತ್ಯಮಂಗಲ ಜಗದೀಶ್, ಟಿ.ಜಿ.ನರಸಿಂಹರಾಜು, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಮಹೇಶ್, ಪುಟ್ಟರಾಜು, ಧನುಷ್ ನಾಯಕ್, ಸೋಲಾರ್ ಕೃಷ್ಣಮೂರ್ತಿ, ನಂಜುಂಡಸ್ವಾಮಿ, ಜ್ಯೋತಿತಿಪ್ಪೆಸ್ವಾಮಿ, ಲೀಲಾವತಿ, ವೆಂಕಟೇಶಾಚಾರ್, ಕೆಂಪರಾಜು, ನಂದಿನಾಥ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!