ಕನಿಷ್ಟ ವಿದ್ಯಾರ್ಥಿಗಳ ಸಂಖ್ಯೆಯ ನೆಪವೊಡ್ಡಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವೇತನ ತಡೆ ಹಿಡಿದಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದರು.
ಅವರು ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಒಂದು ತರಗತಿಗೆ ಕನಿಷ್ಠ 40 ವಿದ್ಯಾರ್ಥಿಗಳಿರಬೇಕೆಂಬ ನಿಯಮವನ್ನು ಮಾಡಿ 40ಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳನ್ನೊಳಗೊಂಡ ಕಾಲೇಜುಗಳ ಮಾನ್ಯತೆ ನವೀಕರಣ ತಿರಸ್ಕರಿಸಿ ನೋಟಿಸ್ ಜಾರಿ ಮಾಡಿದೆ. ಇದೇ ಕಾರಣಕ್ಕಾಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಎರಡು ತಿಂಗಳಿನಿಂದ ವೇತನ ತಡೆ ಹಿಡಿಯಲಾಗಿದೆ. ಸರ್ಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನೀತಿಯಿಂದಾಗಿ ಇಂದು ಉಪನ್ಯಾಸಕರ ಕುಟುಂಬ ವರ್ಗ ಸಂಕಷ್ಟಕ್ಕೆ ಸಿಲುಕಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಮನಸ್ಸು ಇಚ್ಛೆ ಕಾಲೇಜುಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ ಫಲವಾಗಿ ಇಂದು ರಾಜ್ಯದಾದ್ಯಂತ ಸಾವಿರಾರು ಖಾಸಗಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅನವಶ್ಯಕವಾಗಿ ಕಾಲೇಜುಗಳಿಗೆ ಅನುಮತಿ ನೀಡಿದ್ದರ ಕಾರಣದಿಂದಾಗಿ ಇಂದು ಈ ಪರಿಸ್ಥಿತಿ ಒಳಗಿದ್ದು ಇದಕ್ಕೆ ಮೂಲ ಕಾರಣ ಅಧಿಕಾರಿಗಳ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿತನ ಎಂದು ಬೇಸರ ವ್ಯಕ್ತಪಡಿಸಿದರು.
ಅನುದಾನಿತ ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿದ್ದು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ತಮ್ಮದೇ ಆದ ಕೊಡುಗೆಯನ್ನು ಈ ದೇಶಕ್ಕೆ ನೀಡಿದೆ ಇಂತಹ ಕಾಲೇಜುಗಳಿಗೆ ಅವೈಜ್ಞಾನಿಕವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಮೂಲವಾಗಿಸಿಕೊಂಡು ಮಾನ್ಯತೆ ನವೀಕರಣ ತಿರಸ್ಕರಿಸುವುದು ವೇತನ ತಡೆ ಹಿಡಿಯುವುದು ಎಷ್ಟು ಸರಿ? 2015ನೇ ಇಸವಿಯಿಂದ ನಿವೃತ್ತಿಯಿಂದ ತೆರವಾಗಿರುವ ಉಪನ್ಯಾಸಕ ಹುದ್ದೆಯನ್ನು ಸರ್ಕಾರ ತುಂಬಿಕೊಳ್ಳದೆ ಇರುವುದು ಸಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದ್ದು ಇದನ್ನು ಯಾರು ಪ್ರಶ್ನಿಸಬೇಕು? ಇದು ಮೂಲಭೂತ ಹಕ್ಕಿನ ಹರಣವಲ್ಲವೇ? ಇಂದು ಪ್ರಶ್ನಿಸಿದರು.
ಈ ಬಗ್ಗೆ ಯಾವೊಬ್ಬ ವಿಧಾನಪರಿಷತ್ ಸದಸ್ಯ ಅಥವಾ ಜನಪ್ರತಿನಿಧಿ ಸೊಲ್ಲುತ್ತದೆ ಇರುವುದು ಸಹ ದುರ್ದೈವದ ಸಂಗತಿಯಾಗಿದ್ದು ರೂಪ್ಸ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ಕೂಡಲೇ ಈ ಅವೈಜ್ಞಾನಿಕ ಕ್ರಮವನ್ನು ಕೈ ಬಿಟ್ಟು ಉಪನ್ಯಾಸಕರಿಗೆ ತಡೆ ಹಿಡಿದಿರುವ ಎರಡು ತಿಂಗಳ ವೇತನವನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದೆ. ಅಧಿಕಾರಿಗಳು ತಮ್ಮ ಮಣ್ಣುತನವನ್ನು ಬಿಟ್ಟು ಸರಿಯಾದ ರೀತಿಯಲ್ಲಿ ಕ್ರಮವಹಿಸದೆ ಹೋದಲ್ಲಿ ತಾವು ಕಾನೂನಿನ ಹೋರಾಟಕ್ಕೂ ಸಹ ಸಿದ್ಧವಿರುವುದಾಗಿ ತಿಳಿಸಿದರು.