ಜರ್ಮನಿಗೆ ತೆರಳಿದ್ದ ಅಶ್ಲೀಲ ವೀಡಿಯೊ ಪ್ರಕರಣ ಆರೋಪಿ ಎನ್ನಲಾದ ಹಾಸನ ಹಾಲಿ ಸಂಸದ ಹಾಗೂ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ದುಬೈಗೆ ತೆರಳಿದ್ದು, ಇಂದು ಅಥವಾ ನಾಳೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಸೆಕ್ಸ್ ವೀಡಿಯೊ ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಪ್ರಜ್ವಲ್ ಅವರು ಏ. 26ರಂದು ಚುನಾವಣೆಯಲ್ಲಿ ತಮ್ಮ ವೋಟ್ ಹಾಕುತ್ತಿದ್ದಂತೆ ಯಾರ ಕೈಗೂ ಸಿಗದೆ ಏ. 27ರಂದು ಮುಂಜಾನೆ 2.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಜರ್ಮನಿಗೆ ತೆರಳಿದ್ದರು. ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಎಸ್ ಐಟಿ ವಿಚಾರಣೆಗೆ ಹಾಜರಾಗಲು ಲುಕ್ ಔಟ್ ನೋಟಿಸ್ ನೀಡಿತ್ತು.
ಪ್ರಜ್ವಲ್ ವಕೀಲರು ವಿಚಾರಣೆಗೆ ಹಾಜರಾಗಲು 7 ದಿನ ಕಾಲಾವಕಾಶ ನೀಡುವಂತೆ ವಿಶೇಷ ತನಿಖಾ ತಂಡದ ಬಳಿ ಮನವಿ ಮಾಡಿದ್ದರು. ಈ ನಡುವೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಚಾರಣೆಗೆ ಹಾಜರಾಗದಿದ್ದರೆ, ಪ್ರಜ್ವಲ್ ಅವರನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡಿದ್ದಾರೆ.
ಇದೀಗ ಪ್ರಜ್ವಲ್ ರೇವಣ್ಣ ಬುಧವಾರ ರಾತ್ರಿ ದುಬೈಗೆ ಬಂದ ಹಿನ್ನೆಲೆಯಲ್ಲಿ ಅಲ್ಲಿಂದ ಅವರು ನೇರವಾಗಿ ಬೆಂಗಳೂರಿಗೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.