ಪರಿಷತ್ ಫೈಟ್: ಲೋಕೇಶ್ ತಾಳಿಕಟ್ಟೆ ಪರ ಹೆಚ್ಚಿದ ಶಿಕ್ಷಕರ ಒಲವು

 

ಲೋಕಸಭಾ ಚುನಾವಣೆಯ ಕಾವು ಕಡಿಮೆಯಾಗುತ್ತಿದ್ದಂತೆ ಇದೀಗ ವಿಧಾನಪರಿಷತ್ ಚುನಾವಣೆಯ ಕಣ ರಂಗೇರುತ್ತಿದ್ದು ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಪರ ಶಿಕ್ಷಕರ ಒಲವು ಹೆಚ್ಚಾಗುತ್ತಿರುವುದು ಕಂಡುಬರುತ್ತಿದ್ದು ಚುನಾವಣೆ ದಿನದಿಂದ ದಿನಕ್ಕೆ ವಿಭಿನ್ನ ತಿರುವ ಪಡೆಯುತ್ತಿದೆ.

 

 

 

ಶಿಕ್ಷಣ ವ್ಯವಸ್ಥೆಯ ಸುಧಾರಣೆ, ಹಾಗೂ ಆಮೂಲಾಗ್ರ ಬದಲಾವಣೆ ಮಾಡುವ ನಿಟ್ಟಿನಲ್ಲಿ ವಿಧಾನಪರಿಷತ್ತಿಗೆ ಶಿಕ್ಷಕರ ಕ್ಷೇತ್ರದ ಸ್ಥಾನವನ್ನು ಮೀಸಲಿರಿಸಿದ್ದು, ಇದುವರೆಗೂ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರಾಗಿ ದುಡಿದ ಹಾಗೂ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನವುಳ್ಳ ವ್ಯಕ್ತಿ ವಿಧಾನಪರಿಷತ್’ಗೆ ಆಯ್ಕೆಯಾದ ನಿದರ್ಶನಗಳಿಲ್ಲ. ಇದನ್ನು ಕಂಡ ಶಿಕ್ಷಕರ ಸಮೂಹ ಹಾಗೂ ಶಿಕ್ಷಣ ಸಂಸ್ಥೆಗಳ ಸದಸ್ಯರು, ಶಿಕ್ಷಕರೇ ಈ ಕ್ಷೇತ್ರವನ್ನು ಪ್ರತಿನಿಧಿಸಬೇಕೆಂಬ ನಿರ್ಧಾರ ಮಾಡಿ ರೂಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆಯವರನ್ನು ಪಕ್ಷೇತರವಾಗಿ ಕಣಕ್ಕೆ ಇಳಿಸಿದ್ದು, ಇದೀಗ ಶಿಕ್ಷಕ ಸಮೂಹ ಲೋಕೇಶ್ ತಾಳಿಕಟ್ಟೆ ಬೆಂಬಲಕ್ಕೆ ನಿಂತಿರುವುದು ಈ ಬಾರಿಯ ಚುನಾವಣೆ ಲಯ ವಿಶೇಷವಾಗಿದೆ.

 

 

 

ತುಮಕೂರು, ದಾವಣಗೆರೆ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ. ಬಹುತೇಕ ಖಾಸಗೀ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಐದು ಜಿಲ್ಲೆಗಳ ಖಾಸಗೀ ಶಾಲಾ ಶಿಕ್ಷಕರ ಸಂಘ ಲೋಕೇಶ್ ತಾಳಿಕಟ್ಟೆ ಬೆನ್ನಿಗೆ ನಿಂತಿರುವುದು ಅವರ ಗೆಲುವಿನ ಹಾದಿ ಸುಗಮಗೊಳಿಸಿದೆ.

 

 

 

 

ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಐದು ಜಿಲ್ಲೆಗಳ ಪೈಕಿ ತುಮಕೂರು ಜಿಲ್ಲೆಯಲ್ಲಿ ಅತ್ಯಧಿಕ ಮತದಾರರಿದ್ದು, ವಿಶೇಷವಾಗಿ ಖಾಸಗೀ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರ ಮತಗಳೇ ಅಧಿಕವಾಗಿದ್ದು, ಪ್ರತೀ ಬಾರಿ ವೈ.ಎ. ನಾರಾಯಣಸ್ವಾಮಿಯವರ ಬೆಂಬಲಕ್ಕೆ ನಿಲ್ಲುತ್ತಿದ್ದವರು ಈ ಬಾರಿ ಲೋಕೇಶ್ ತಾಳಿಕಟ್ಟೆ ಬೆಂಬಲಕ್ಕೆ ನಿಂತು ಸಂಘಟಿತ ಹೋರಾಟ ನಡೆಸುತ್ತಿದ್ದಾರೆ‌.

 

 

 

 

 

ಖಾಸಗೀ ಶಾಲಾ ಶಿಕ್ಷಕರ ವೇತನ ತಾರತಮ್ಯ, ಶಿಕ್ಷಕರ ಕಲ್ಯಾಣನಿಧಿಯಲ್ಲಿ ಸದಸ್ಯತ್ವದ ವಿಚಾರ ಹಾಗೂ ಶಿಕ್ಷಕರ ನೇಮಕಾತಿ ಸಂಬಂಧ ವೈ.ಎ.ನಾರಾಯಣಸ್ವಾಮಿ ಸದನದಲ್ಲಿ ಒಂದು ದಿನವೂ ಧ್ವನಿ ಮಾಡಿಲ್ಲವೆಂದು ಆರೋಪಿಸುತ್ತಿರುವ ಖಾಸಗೀ ಶಾಲಾ ಶಿಕ್ಷಕರು ನಮ್ಮಿಂದ ಮತ ಪಡೆದು ನಮಗೆ ಅನುಕೂಲ ಕಲ್ಪಿಸದವರಿಗೆ ಈ ಬಾರಿ ಮತ ನೀಡುವುದಿಲ್ಲವೆಂದು ಹಲವುಬಾರಿ ಪ್ರತಿಕಾಗೋಷ್ಟಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

 

 

 

ಸರ್ಕಾರಿ ಶಾಲಾ ಶಿಕ್ಷಕರ ಟೈಮ್ ಬಾಂಡ್, ಓಪಿಎಸ್, ಅನುದಾನಿತ ಶಾಲಾ ಶಿಕ್ಷಕರ ಕಾಲ್ಪನಿಕ ವೇತನ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಈ ಚುನಾವಣೆಯಲ್ಲಿ ಹೆಚ್ಚು ಚರ್ಚೆಗೆ ಬರುತ್ತಿದ್ದು, ಈ ವಿಷಯಗಳ ಕುರಿತಾಗಿ ಈಗಾಗಲೇ ಕಾನೂನಿನ ಹೋರಾಟ ನಡೆಸುತ್ತಿರುವುದಾಗಿ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

 

 

 

 

ಇತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಕೆಲವು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಸೇರಿದ್ದು, ಅಲ್ಲಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಬೆಂಬಲ ಕೋರುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳ ಒಡೆಯರಾಗಿರುವ ಡಿ.ಟಿ.ಶ್ರೀನಿವಾಸ್ ಶೈಕ್ಷಣಿಕ ಹೋರಾಟದಲ್ಲಿ ಭಾಗಿಯಾಗಿಲಗಲವೆಂಬುದರ ಬಗ್ಗೆ ಶಿಕ್ಷಕರ ವಲಯದಲ್ಲಿ ಅಲ್ಲಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮಿಂಚಿನಂತೆ ಬಂದು ಎರಡನೇ ಸ್ಥಾನ ಪಡೆದು ಮತ್ತೆ ಮಾಯವಾದರು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ‌.

 

 

 

 

ಒಟ್ಟಾರೆ ಕ್ಷೇತ್ರದ ಮಟ್ಟಿಗೆ ವಿಶ್ಲೇಷಣೆ ನಡೆಸಿದಾಗ ಒಂದಲ್ಲ ಒಂದು ಹೋರಾಟದ ಮೂಲಕ ಶಿಕ್ಷಕರ ಗಮನ ಸೆಳೆಯುತ್ತಿರುವ ಲೋಕೇಶ್ ತಾಳಿಕಟ್ಟೆಗೆ ಶಿಕ್ಷಕರ ಬೆಂಬಲ ಹೆಚ್ಚುತ್ತಿರುವುದು ಕಂಡುಬರುತ್ತಿದ್ದು ಮತದಾರ ಶಿಕ್ಷಕ ಪ್ರಭುಗಳು ಯಾವ ತೀರ್ಮಾನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!