ತುಮಕೂರು : ತುಮಕೂರು ಜಿಲ್ಲೆಗೆ ಹಂಚಿಕೆಯಾಗಿದ್ದ 24.5 ಟಿಎಂಸಿ ಹೇಮಾವತಿ ನೀರನ್ನು ಎಕ್ಸ್ ಪ್ರೆಸ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಗೆ ಕೊಂಡೊಯ್ಯುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದ್ದು, ಆ ಬಗ್ಗೆ ಮಾಜಿ ಸಚಿವರಾದ ಸೊಗಡು ಶಿವಣ್ಣರವರು ಕಳೆದ 20 ದಿನಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ, ಇದರ ಬೆನ್ನ ಹಿನ್ನಲೆಯಲ್ಲಿಯೇ ಇಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಮನೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲು ಉದ್ದೇಶಿಸಲಾಗಿತ್ತು.
ಅದರಂತೆ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದ ಸೊಗಡು ಶಿವಣ್ಣ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಸೇರಿದಂತೆ ಇನ್ನಿತರೆ ಹಲವಾರು ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಪ್ರಸಂಗ ಇಂದು ನಡೆಯಿತು.
ಇದರ ಬೆನ್ನಲ್ಲೇ ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾಗಿರುವ ಧನೀಯಾ ಕುಮಾರ್ ರವರು ನಾವು ಇಂದು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಪೊಲೀಸರನ್ನು ಮುಂದಿಟ್ಟುಕೊಂಡು ನಮ್ಮನ್ನು ವಶಕ್ಕೆ ಪಡೆಯುವ ಹುನ್ನಾರ ನಡೆದಿದೆ, ಆದುದರಿಂದ ರೈತಪರ ಸಂಘಟನೆಗಳು, ಕನ್ನಡ ಪರ ಹೋರಾಟಗಾರರು, ಜನಪ್ರತಿನಿಧಿಗಳು ಸೇರಿದಂತೆ ಹಲವಾರು ಮುಖಂಡರು ಸೊಗಡು ಶಿವಣ್ಣರವರ ನೇತೃತ್ವದಲ್ಲಿ ಜೂನ್ 03 ರ ಸೋಮವಾರದಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ತುಮಕೂರು ಬಂದ್ ಮಾಡಲಾಗುವುದು (ಶಾಂತಿಯುತ ಬಂದ್) ಎಂದು ಧನೀಯಾ ಕುಮಾರ್ ರವರು ತಿಳಿಸಿದರು.