ವಿಶೇಷ ಅಶೋತ್ತರಗಳನ್ನು ಒಳಗೊಂಡಿರುವ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಲೋಕೇಶ್ ತಾಳಿಕಟ್ಟೆ

ಶೈಕ್ಷಣಿಕ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗಾಗಿ ಶಿಕ್ಷಣ ತಜ್ಞರು ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ ಪ್ರಣಾಳಿಕೆ ಸಿದ್ದಪಡಿಸಲಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದರು.

 

 

 

ಅವರು ನಗರದ ಖಾಸಗೀ ಹೋಟೆಲ್’ನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ತಮ್ಮ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ಇಂದಿಗೂ ಸಹ ಬಗೆಹರಿಯದೆ ಉಳಿದಿದ್ದು, ಅವುಗಳ ನಿವಾರಣೆಗಾಗಿ ರಾಜ್ಯದ ಹಲವಾರು ಶಿಕ್ಷಣ ತಜ್ಞರು ಹಾಗೂ ಶಿಕ್ಷಕರೊಂದಿಗೆ ಸಂವಾದ ಹಾಗೂ ಚರ್ಚೆ ನಡೆಸಿ ಪ್ರಣಾಳಿಕೆ ಸಿದ್ಧಪಡಿಸಿದ್ದು ಅವುಗಳನ್ನು ನೂರು ಪ್ರತಿಶತ ಸಾಧಿಸುವುದಾಗಿ ಆಶ್ವಾಸನೆ ನೀಡಿದರು.

 

 

 

ಈಗಾಗಲೇ ನಾನು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕೋವಿಡ್ ಪ್ಯಾಕೇಜ್ ಕೊಡಿಸಿದ್ದು, ಶಿಕ್ಷಕರ ಕಲ್ಯಾಣ ನಿಧಿ ಸಂಸ್ಥೆಯಲ್ಲಿ ಎಲ್ಲಾ ಶಿಕ್ಷಕರಿಗೂ ನಗದು ರಹಿತ ಆರೋಗ್ಯ ವಿಮಾ ಸೌಲಭ್ಯ ಕೊಡಿಸುವ ಆದೇಶ ಮಾಡಿಸಿದ್ದೇನೆ. ಆದರೆ ಆದೇಶವನ್ನು ಸರ್ಕಾರ ಹಿಂಪಡೆದು ಶಿಕ್ಷಕರ ಪಾಲಿಗೆ ಮರಣ ಶಾಸನ ಬರೆಯಿತು.
ಸರ್ಕಾರಿ ಶಾಲೆಗಳಿಗೆ 15000 ಶಿಕ್ಷಕರನ್ನು ಭರ್ತಿ ಮಾಡಲು ಒತ್ತಾಯಿಸಿ ಹೋರಾಟ ನಡೆಸಿ ಅದರಲ್ಲಿ ಯಶಸ್ಸನ್ನು ಕಂಡಿದ್ದು,
ಹತ್ತು ವರ್ಷಕ್ಕೊಮ್ಮೆ ಮಾನ್ಯತೆನವೀಕರಣ ನೀಡಲು ರಾಜ್ಯ ಹೈಕೋರ್ಟ್ ನಿಂದ ಆದೇಶ ತಂದಿದ್ದೇನೆ.
5, 8 ಹಾಗೂ 9ನೇ ತರಗತಿಯವರೆಗೆ ಯಾವುದೇ ಬೋರ್ಡ್ ಪರೀಕ್ಷೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಲ್ಲಿ ಕಾನೂನಿನ ಹೋರಾಟ ನಡೆಸಿ ತೀರ್ಪು ಅಂತಿಮ ತೀರ್ಪು ಪಡೆದಿದ್ದೇನೆ‌ ಎಂದು ತಿಳಿಸಿದರು.

 

 

ಪ್ರಸ್ತುತ ಹತ್ತು ಹಲವು ಗುರಿಯನ್ನಿರಿಸಿಕೊಂಡಿದ್ದು ಅದರಲ್ಲಿ ಓಪಿಎಸ್ ಅಥವಾ ಪಿಂಚಣಿ ಮುಂಜೂರು ಮಾಡಿಸುವುದು, ಕಾಲ್ಪನಿಕ ವೇತನವನ್ನು ಕೊಡಿಸುವುದು, ಬಡ್ತಿ ಪಡೆದ ಶಿಕ್ಷಕರಿಗೆ ಟೈಮ್ ಬಾಂಡ್ ಮತ್ತು ಇನ್ಕ್ರಿಮೆಂಟ್ ಕೊಡಿಸುವುದು,ವೇತನ ತಾರತಮ್ಯವನ್ನು ಸರಿಪಡಿಸುವುದು.
ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರ ಸೇವಾಭದ್ರತೆ ಹಾಗೂ ಸಮಾನ ವೇತನಕ್ಕೆ ಒತ್ತು ನೀಡುವುದು, 1995 ರ ನಂತರದ ಕನ್ನಡ ಮತ್ತು ಇತರೆ ಭಾಷೆಗಳ ಎಲ್ಲಾ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಎಂದು ಹೇಳಿದರು.

 

ಮುಂದುವರೆದು ಮಾತನಾಡುತ್ತಾ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿರುವ ಎಲ್ಲ ಶಿಕ್ಷಕರಿಗೂ ನಗದು ರಹಿತ ಆರೋಗ್ಯ ವಿಮೆ ಕೊಡಿಸುವುದು,
ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆ ಕಾಲೇಜ್ ಗಳಿಗೆ ಮಾನ್ಯತೆ ನವೀಕರಣವನ್ನು ಭ್ರಷ್ಟಾಚಾರ ಮುಕ್ತ ವಾಗಿಸಿ ಶಾಶ್ವತ ಮಾನ್ಯತೆ ನವೀಕರಣ ಪಡೆಯುವಂತಾಗಿಸುವುದು,
ಶಾಲಾ ಕಾಲೇಜ್ ಗಳಲ್ಲಿ ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಸುವುದು,
ಎಲ್ಲಾ ವರ್ಗದ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸುವುದು.
ಐಟಿಐ, ಡಿಪ್ಲೋಮೋ, ಹಾಗೂ ಬಿಎಡ್ ಮುಂತಾದ ಕಾಲೇಜುಗಳಲ್ಲಿಯ ಶಿಕ್ಷಕರ ಸಮಸ್ಯೆಗಳನ್ನು ಹೋಗಲಾಡಿಸುವುದು,
ಅನುದಾನಿತ ಶಾಲೆಗಳಲ್ಲಿಯ 2015ರ ನಂತರದ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಸುವುದು,
ಅನುದಾನಿತ ಶಾಲಾ ಕಾಲೇಜುಗಳ ತರಗತಿಗಳ ವಿದ್ಯಾರ್ಥಿಗಳ ಮಿತಿಯನ್ನು ಕನಿಷ್ಠ 10ಕ್ಕೆ ಇಳಿಸುವುದು
ಅನುದಾನಿತ ಸಂಸ್ಥೆಗಳ ಶಿಕ್ಷಕರುಗಳಿಗೆ ವಿಳಂಬ ವಿಲ್ಲದೆ ಕಾಲಕಾಲಕ್ಕೆ ಸಂಬಳ ಕೊಡಿಸುವುದು ಸೇರಿಕೊಂಡಂತೆ
ಒಟ್ಟಾರೆ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರ್ಕಾರದಿಂದ, ಮತ್ತು ಅಧಿಕಾರಿಗಳಿಂದ ಕಿರುಕುಳ ಆಗದಂತೆ ನೋಡಿಕೊಳ್ಳುವುದು ನನ್ನ ಮೂಲ ಗುರಿಗಳಾಗಿದ್ದು, ಇವುಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ಹೋರಾಟ ನಡೆಸುತ್ತೇನೆಂದರು.

 

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ರೇಣುಕಯ್ಯ, ಉಪನ್ಯಾಸಕ ಗೋವಿಂದರಾಜು, ಡಾ.ಎಂ.ಆರ್ ರಂಗಸ್ವಾಮಿ, ನಟರಾಜು, ಭೂತರಾಜು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!