ತುಮಕೂರು : ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಾಗಲೆಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಚುನಾವಣಾ ರಾಯಭಾರಿಗಳನ್ನಾ ಗುರುತಿಸಲಾಗಿದೆ. ರಾಯಭಾರಿಗಳು ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ಮನವಿ ಮಾಡಿಕೊಂಡರು.
ನಗರದ ಗ್ರಂಥಾಲಯ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಎಸ್ ವಿ ಸ್ವಾಮಿ, ಮಂಗಳಗೌರಮ್ಮ, ರಾಷ್ಟ್ರಮಟ್ಟದ ಕ್ರೀಡಾ ಪಟು ಕುಮಾರಿ ಸನಿಕಾ ಸುಲ್ತಾನ, ಅಥ್ಲೆಟಿಕ್ ಆಟಗಾರರಾದ ಕ್ರಿಶಿಕ್ , ಗಾಯಕರಾದ ಕಂಬದ ರಂಗಯ್ಯ, ಹರಿಕಥೆ ಮತ್ತು ಕೀರ್ತನಕಾರರಾದ ಲಕ್ಷ್ಮಣ ದಾಸ್ ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವುದು ನಮ್ಮ ನಿಮ್ಮೆಲ್ಲರ ಭಾಗ್ಯ ಮತ್ತು ಹೆಮ್ಮೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ನಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಲೇಬೇಕು. ಜಿಲ್ಲೆಯಲ್ಲಿ ಈಗಾಗಲೇ ಒಂದುವರೆ ಲಕ್ಷ ಮಕ್ಕಳು ತಮ್ಮ ಪೋಷಕರಿಗೆ ಪತ್ರ ಬರೆಯುವ ಮೂಲಕ ಮತದಾನದ ಜಾಗೃತಿಯನ್ನು ಮೂಡಿಸಿದ್ದಾರೆ. ಚುನಾವಣಾ ರಾಯಭಾರಿಗಳನ್ನು ಆಯ್ಕೆ ಮಾಡಿದ್ದು ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯುವ ಸಮಯದಲ್ಲಿ ರಾಯಭಾರಿಗಳನ್ನು ಆಹ್ವಾನಿಸಿ ಜಾಗೃತಿ ಮೂಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ರಾಯಭಾರಿಗಳಾಗಿ ಆಯ್ಕೆಯಾಗಿರುವ ಎಲ್ಲಾ ಸಾಧಕರಿಗೂ ಅಭಿನಂದನೆಗಳು ಎಂದರು.
ಮುಂದುವರೆದು ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ ಈ ಭಾರಿ ಅತೀ ಹೆಚ್ಚು ಶೇಕಡವಾರು ಮತದಾನ ಮಾಡಿಸಲು ಇವರುಗಳು ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಪ್ರೇರಣಾಪೂರ್ವಕವಾಗಿ ಕೆಲಸ ನಿರ್ವಹಿಸಲಿದ್ದಾರೆಂದರು. ಜೊತೆಗೆ ಆರೂ ಜನರು ಸಹ ವಿವಿಧ ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ಜನರಿಗೆ ಮಾದರಿಯಾಗಲಿದ್ದಾರೆಂದರು, ಇವರುಗಳನ್ನೊಳಗೊಂಡ ತಂಡವು ಮನೆ ಮನೆಗೆ ತೆರಳಿ ಮತದಾನದ ಕುರಿತು ಅರಿವು ಮೂಡಿಸುವುದು, ಹಿರಿಯ ನಾಗರೀಕರು ಮತ್ತು ವಿಕಲಚೇತನರು ಮನೆಯಿಂದಲೇ ಮತದಾನ ಮಾಡಬಹುದಾದ ಕುರಿತಂತೆ ಜಾಗೃತಿಯನ್ನು ಮೂಡಿಸಲಿದ್ದಾರೆ, ಇವರುಗಳಿಗೆ ಸಹಕಾರಿಗಳಾಗಿ ಸ್ಥಳೀಯ ಬಿ.ಎಲ್.ಓ. ಮತ್ತು ಚುನಾವಣಾ ಅಧಿಕಾರಿಗಳು ಸಹಕಾರಿಗಳಾಗಲಿದ್ದಾರೆಂದು ಹೇಳಿದರು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಉದ್ಘಾಟಿಸಿ ರಾಯಭಾರಿಗಳನ್ನು ಅಭಿನಂದಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತುಮಕೂರು ಮಹಾನಗರ ಪಾಲಿಕೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾರ್ಮಿಕರಿಂದ ಮತದಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಟೋ ಚಾಲಕರು ಜೊತೆಯಾಗಿದ್ದು ವಿಶೇಷವಾಗಿತ್ತು.
ಕಾರ್ಮಿಕ ಇಲಾಖೆಯ ತೇಜಾವತಿರವರು ಕಾರ್ಯಕ್ರಮದ ಕುರಿತು ಮಾತನಾಡಿ ಈ ಒಂದು ಕಾರ್ಯಕ್ರಮವು ಯಶಸ್ವಿಪೂರ್ಣವಾಗಿ ನಡೆಯಲು ನಮ್ಮ ಕಾರ್ಮಿಕ ಇಲಾಖೆಯ ಎಲ್ಲಾ ಸಹುದ್ಯೋಗಿಗಳು, ಕಾರ್ಮಿಕ ಮುಖಂಡರು, ಜಿಲ್ಲೆಯ ಸಮಸ್ತ ಕಾರ್ಮಿಕ ಬಾಂಧವರು ಸೇರಿದಂತೆ ವಿಶೇಷವಾಗಿ ಆಟೋ ಚಾಲಕರು ಹಾಗೂ ಆಟೋ ಚಾಲಕರ ಸಂಘದವರು ಸಹಕರಿಸಿದ್ದು ನನಗೆ ಅತ್ಯಂತ ಸಂತಸ ತಂದುಕೊಟ್ಟಿದೆ ಎಂದರು, ಈ ಭಾರಿ ಚುನಾವಣೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾನವಾಗಲು ನಾವು ಶ್ರಮಿಸುತ್ತಿದ್ದು, ಈ ಒಂದು ಪವಿತ್ರ ಹಬ್ಬದಲ್ಲಿ ಪ್ರತಿಯೊಬ್ಬ ನಾಗರೀಕರ ಕೊಡುಗೆ ಅಪಾರವಾಗಿದ್ದು, ಪ್ರತಿಯೊಬ್ಬ ಮತದಾರರು ಮತ ಚಲಾಯಿಸುವುದರೊಂದಿಗೆ ತಮ್ಮ ಸಂವಿಧಾನಿತ ಹಕ್ಕನ್ನು ಪಡೆಯುವಂತಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ವೆಂಕಟೇಶ ಬಾಬುರವರು ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಮತದಾನ ಜಾಗೃತಿ ಅಭಿಯಾನದಲ್ಲಿ ಕೃಷಿ ಉಪ ನಿರ್ದೇಶಕರಾದ ಅಶೋಕ್, ರೇಷ್ಮೆ ಉಪ ನಿರ್ದೇಶಕರಾದ ಬಾಲಕೃಷ್ಣಪ್ಪ, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ತೇಜಾವತಿ, ವೆಂಕಟೇಶ ಬಾಬು ಸೇರಿದಂತೆ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕರು ಭಾಗಿಯಾಗಿದ್ದರು.