ಜಿಲ್ಲೆಯ ವಿವಿಧೆಡೆಗಳಲ್ಲಿ ಬ್ರಹ್ಮಧ್ವಜ ಸ್ಥಾಪನೆಯ ಪ್ರಾತ್ಯಕ್ಷಿಕೆ

ತುಮಕೂರು : ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತುಮಕೂರು ಜಿಲ್ಲೆಯ ಸರಸ್ವತಿಪುರಂನ ಯೋಗ ಭವನದಲ್ಲಿ, ಮಾರುತಿ ದೇವಸ್ಥಾನ, ಬನಶಂಕರಿ, ಮೇಲೆ ಕೋಟೆ ಲಕ್ಷ್ಮಿ ದೇವಸ್ಥಾನದ ಹತ್ತಿರದಲ್ಲಿ ಯುಗಾದಿ ಹಬ್ಬದ ಆಚರಣೆಯ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೆರವೇರಿತು.

 

ಯುಗಾದಿಯೆಂದರೆ ಹಿಂದೂಗಳ ನವ ವರ್ಷ ಆರಂಭದ ದಿನ ಮತ್ತು ಸೃಷ್ಟಿಯ ಆರಂಭ ದಿನ. ಯುಗಾದಿ ಹಬ್ಬದಂದು ಬ್ರಹ್ಮಧ್ವಜವನ್ನು ಸ್ಥಾಪನೆ ಮಾಡುವುದು ಮುಖ್ಯ ಆಚರಣೆ ಆಗಿದೆ. ಈ ನಿಟ್ಟಿನಲ್ಲಿ ಈ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.

 

 

ದೊಡ್ಡ ಬಿದಿರಿನ ತುದಿಗೆ ಹಸುರು ಅಥವಾ ಹಳದಿ ಬಣ್ಣದ ಜರಿಯ ಕಣವನ್ನು ಕಟ್ಟಿ ಅದರ ಮೇಲೆ ಸಕ್ಕರೆಯ ದಂಟು, ಬೇವಿನ ಚಿಗುರೆಲೆ, ಮಾವಿನ ಎಲೆ, ಕೆಂಪು ಹೂಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಸಿಂಗರಿಸಿ ಕೆಳಗಡೆ ಮಣೆಯ ಮೇಲೆ ರಂಗೋಲಿ ಬಿಡಿಸಿ ನಿಲ್ಲಿಸಬೇಕು. ಇದಕ್ಕೆ ‘ಬ್ರಹ್ಮ ಧ್ವಜಾಯ ನಮಃ’ ಎಂದು ಹೇಳಿ ಸಂಕಲ್ಪಪೂರ್ವಕವಾಗಿ ಪೂಜೆ ಮಾಡಬೇಕು. ಬ್ರಹ್ಮದೇವನು ಈ ದಿನ ಸೃಷ್ಟಿಯನ್ನು ನಿರ್ಮಿಸಿದ ಕಾರಣ ಧರ್ಮಶಾಸ್ತ್ರದಲ್ಲಿ ಈ ಧ್ವಜವನ್ನು ಬ್ರಹ್ಮ ಧ್ವಜ ಎಂದು ಕರೆಯಲಾಗುತ್ತದೆ.

 

 

‘ಮರು ದಿನದಿಂದ ಈ ಕಳಶದಲ್ಲಿನ ನೀರು ಕುಡಿಯಲು ತೆಗೆದುಕೊಳ್ಳಬೇಕು. ಬ್ರಹ್ಮಧ್ವಜಕ್ಕೆ ಅರ್ಪಿಸಿದ ಹೂಗಳು ಮತ್ತು ಮಾವಿನ ಎಲೆಗಳನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಈ ರೀತಿಯಾಗಿ ಯುಗಾದಿ ಹಬ್ಬದಂದು ಬ್ರಹ್ಮಧ್ವಜವನ್ನು ಏರಿಸಿ ಶಾಸ್ತ್ರಾನುಸಾರವಾಗಿ ಆಚರಣೆ ಮಾಡಬೇಕು ಎಂದು ತಿಳಿಸಲಾಯಿತು.

 

ನಂತರ ದೇವಸ್ಥಾನಕ್ಕೆ ಬಂದವರಿಗೆ ಯುಗಾದಿ ಹಬ್ಬದ ಮಹತ್ವ ಮತ್ತು ‘ಶ್ರೀ ರಾಮ ಜಯರಾಮ ಜಯ ಜಯ ರಾಮ ‘ ನಾಮಜಪವನ್ನು ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!