ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ ಇ ಎ) ಬೋರ್ಡ್ ನಿಂದ ನಡೆದ ಈ ವರ್ಷದ ಸಿ ಇ ಟಿ ಪರೀಕ್ಷಾ ಪ್ರಶ್ನೆ ಪತ್ರಿಕೆಗಳಲ್ಲಿ ಸುಮಾರು 53 ಅಂಕಗಳಷ್ಟು ಪ್ರಶ್ನೆಗಳು ಈಗಾಗಲೇ ಕೈ ಬಿಟ್ಟ ಪಠ್ಯಗಳಿಂದ ಆರಿಸಿದ ಕಾರಣ ರಾಜ್ಯ ಪಠ್ಯ ಕ್ರಮ ಅನುಸರಿಸುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗಿದ್ದು ಅವರ ಮುಂದಿನ ವಿದ್ಯಾಭ್ಯಾಸದ ಮೇಲೆ ಘೋರ ಪರಿಣಾಮ ಬೀರಲಿದೆ. ಇದು ಅತ್ಯಂತ ಅಘಾತಕಾರಿ ಹಾಗು ಅನ್ಯಾಯದ ವಿಷಯವಾಗಿದೆ ಎಂದು ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಕಳೆದ ವರ್ಷ ಕೆ ಇ ಎ ಹಾಗೂ ಪಿ ಯು ಬೋರ್ಡ್ ಗಳು ಕೇಂದ್ರ ಪಠ್ಯ ಕ್ರಮದಲ್ಲಿಯ ಕೆಲವು ಪಾಠಗಳನ್ನು ಕೈ ಬಿಡಲು ಆದೇಶಿಸಿದ್ದವು. ಯಾವ ಉದ್ದೇಶದಿಂದ ಈ ಪಾಠಗಳನ್ನು ಕೈ ಬಿಡಲಾಯಿತು ಎಂಬ ಬಗ್ಗೆ ಸಂಬಂದಿಸಿದ ಅಧಿಕಾರಿಗಳಿಂದಾಗಲೀ , ಅಥವಾ ಸರ್ಕಾರದಿಂದಾಗಲಿ ಸಮರ್ಪಕ ಉತ್ತರ ಸಿಗಲಿಲ್ಲ. ಆದರೆ ಸರ್ಕಾರದ ಈ ತೀರ್ಮಾನ ಕೇಂದ್ರ ಪಠ್ಯ ಕ್ರಮ ಅನುಸರಿಸುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯವಾಗದ ಕಾರಣ ಆ ವಿದ್ಯಾರ್ಥಿಗಳಿಗೆ ನಿಗದಿತ ಪಠ್ಯವಸ್ತು ಅನ್ವಯ ಎಲ್ಲಾ ಪಾಠಗಳನ್ನು ಮಾಡಲಾಗಿದೆ. ಹೀಗಾಗಿ, ಕೇಂದ್ರ ಪಠ್ಯ ಕ್ರಮ ಅನುಸರಿಸುತ್ತಿರುವ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ಸಿ.ಇ. ಟಿ., ನೀಟ್ ಮತ್ತು ಇತರೆ ವೃತ್ತಿಪರ ಅರ್ಹತಾ ಪರೀಕ್ಷೆಗಳನ್ನು ಸುಲಭವಾಗಿ ಬರೆಯುತ್ತಾರೆ. ಆದರೆ, ರಾಜ್ಯ ಪಠ್ಯ ಕ್ರಮ ಆಯ್ಕೆ ಮಾಡಿಕೊಂಡ ಲಕ್ಷಾಂತರ ಪಿಯು ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಮಧ್ಯಮ ಹಾಗು ಬಡ ಮಧ್ಯಮ ವರ್ಗದ ಮಕ್ಕಳಿಗೆ ಇಲಾಖೆ ಮತ್ತು ಸರ್ಕಾರದ ಈ ಅವೈಜ್ಞಾನಿಕ ಮತ್ತು ವಿವೇಚನಾರಹಿತ ಕ್ರಮದಿಂದ ಘೋರ ಅನ್ಯಾಯ ವಾಗಿದೆ ಎಂದರು.
ಹೆಚ್ಚು ಶುಲ್ಕ ಭರಿಸಲಾಗದ ಬಡ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳು ಮಾತ್ರ ರಾಜ್ಯ ಪಠ್ಯ ಆಧಾರಿತ ಪಿಯು ಮಂಡಳಿ ಬಜೆಟ್ ಕಾಲೇಜುಗಳಿಗೆ ಸೇರುತ್ತಾರೆ. ಈ ವರ್ಗದ ಅಮಾಯಕ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ ರಾಜಕಾರಣಿಗಳು ಹಾಗು ಅಧಿಕಾರದ ದರ್ಪದಲ್ಲಿ ಮೆರೆಯುತ್ತಿರುವ ಅಧಿಕಾರಿಗಳು ಎಸಗುವ ಇಂಥಹ ಪ್ರಮಾದಗಳಿಗೆ ಬಲಿಪಶುಗಳಾಗುತ್ತಾರೆ. ಸರ್ಕಾರದ ಇತ್ತೀಚಿನ ನೀತಿ ಮತ್ತು ಕ್ರಮಗಳಿಂದ ಈ ಕಾಲೇಜುಗಳು ಈಗಾಗಲೆ ಸೊರಗಿ ನೆಲಕಚ್ಚಿವೆ .
ಉದಾಹರಣೆಗೆ,
1. ಹಲವು ವರ್ಷಗಳಿಂದ ಪಿಯು ಕಾಲೇಜು ಗಳಿಗೆ ಪ್ರಾಧ್ಯಾಪಕರನ್ನೇ ನೇಮಿಸಿಲ್ಲ
2. ಸರ್ಕಾರಿ ಶಾಲೆ ಮತ್ತು ಪಿಯು ಕಾಲೇಜುಗಳನ್ನು ಸರ್ಕಾರ ತನ್ನ ದಿವ್ಯ ನಿರ್ಲಕ್ಷ್ಯ ದಿಂದ ನಿರಂತರವಾಗಿ ಮುಚ್ಚುತ್ತಿದೆ
3. ಖಾಸಗಿ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸದೇ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳನ್ನು ವಿನಾಶದ ಅಂಚಿಗೆ ಕೊಂಡೊಯ್ದು ಸರ್ವನಾಶ ಮಾಡುತ್ತಿದೆ
4. ಅನುದಾನಿತ ಶಾಲೆಗಳಿಗೆ ನಿರಂತರ ಕಿರುಕುಳ ನೀಡಿ ಅವುಗಳನ್ನು ಮುಚ್ಚುವ ಹಂತಕ್ಕೆ ತಲುಪಿಸಿದೆ
5. ರಾಜ್ಯ ಪಠ್ಯ ಕ್ರಮ ಅನುಸರಿಸುವ ಬಜೆಟ್ ಶಾಲೆಗಳಿಗೆ ಹೊಸ ಹೊಸ ನಿಯಮಗಳನ್ನು ಹೇರುವ ಮೂಲಕ ಕಿರುಕುಳದ ಬಲೆಯಲ್ಲಿ ಸಿಲುಕಿಸಿ ಅವು ತಾವಾಗಿಯೇ ಮುಚ್ಚುವಂತೆ ಮಾಡುತ್ತಿದೆ
ಈ ಎಲ್ಲಾ ಬೆಳವಣಿಗೆಗಳಿಗೆ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಮತ್ತು ಲಾಭಕ್ಕಾಗಿ ರಚಿಸಿಕೊಂಡಿರುವ ವಿಷವರ್ತುಲವೇ ಕಾರಣ ಎಂಬುದು ನಿಚ್ಚಳವಾಗಿದೆ . ರಾಜಕಾರಣಿಗಳು ಮತ್ತು ಅಧಿಕಾರಿಗಳ ಮಧ್ಯೆ ಅಪವಿತ್ರ ಮೈತ್ರಿ ಇದ್ದು, ಮಕ್ಕಳ ಶಿಕ್ಷಣ ಅವರ ಕೊನೆಯ ಆದ್ಯತೆಯಾಗಿದೆ .
ಈ ಎಲ್ಲಾ ಬೆಳವಣಿಗೆಗಳ ಪರಿಣಾಮ ರಾಜ್ಯದಲ್ಲಿ ಕೇಂದ್ರ ಪಠ್ಯ ಕ್ರಮ ಅನುಸರಿಸುವ ಕಾರ್ಪೋರೇಟ್ ಶಾಲೆಗಳ ಅನಿಯಂತ್ರಿತ ಶುಲ್ಕ , ಅಪವಿತ್ರ ಕ್ರೋನಿ ಬಂಡವಾಳಶಾಹಿ ಮೈತ್ರಿ ಹಾಗೂ ಭ್ರಷ್ಟ ರಾಜಕಾರಣಿಗಳ ಬಂಡವಾಳ ಹೂಡಿರುವ ಸಾವಿರಾರು ಖಾಸಗಿ ಶಾಲೆಗಳು ಲಂಗು-ಲಗಾಮಿಲ್ಲದೆ ಜನರನ್ನು ಲೂಟಿ ಮಾಡುತ್ತಿವೆ . ಇಂದು ಶಿಕ್ಷಣ ಖಾಸಗೀ ಕರಣದಿಂದ ಕಾರ್ಪೋರೇಟರೀಕರಣದತ್ತ ಸಾಗಿದೆ. ಈ ಎಲ್ಲಾ ಬೆಳವಣಿಗೆಗಳು , ರಾಜ್ಯ ಪಠ್ಯಕ್ರಮದ ಮಕ್ಕಳಿಗೆ ಎಲ್ಲಿಲ್ಲದ ಘೋರ ಅನ್ಯಾಯವೆಸಗುತ್ತಿವೆ. ಇದು ಹೀಗೆ ಮುಂದುವರಿದರೆ, ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಶಾಲಾ-ಕಾಲೇಜುಗಳೇ ಇಲ್ಲದಂತಾದರೆ ಆಶ್ಚರ್ಯ ಪಡಬೇಕಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.