ತುಮಕೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದಲಿತರ ಕಲ್ಯಾಣವನ್ನು ಗುರಿಯಾಗಿಸಿಕೊಂಡು ಹತ್ತಾರು ಯೋಜನೆಗಳನ್ನು ಜಾರಿಗೆ ತಂದ ಪರಿಣಾಮ ಪರಿಶಿಷ್ಟ ಜಾತಿ, ಪಂಗಡಗಳ ಜನ ಸಮಾಜದ ಮುಖ್ಯವಾಹಿನಿಗೆ ಬರಲು ಕಾರಣವಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಈ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಡಾ.ಚಿ.ನಾ.ರಾಮು ಹೇಳಿದರು.
ಶನಿವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದ ದಲಿತ ವರ್ಗದ ಬದುಕು ಸುಧಾರಣೆ ಆಗಲಿಲ್ಲ, ಮೋದಿಯವರು ಪ್ರಧಾನಿಯಾದ ಮೇಲೆ ದಲಿತರು ಕಾಂಗ್ರೆಸ್ ಶಾಪದಿಂದ ವಿಮುಕ್ತರಾದರು ಎಂದರು.
ಶ್ರೇಷ್ಠ ಸಂವಿಧಾನ ನೀಡಿ ಸರ್ವರಿಗೂ ಸಮಪಾಲು, ಸಮ ಬಾಳು ಎಂದು ಸಾರಿದ ಡಾ.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷದವರು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಅವಮಾನ ಮಾಡಿದರು. ಆದರೆ ಜನಸಂಘ ಬೆಂಬಲ ನೀಡಿ ಅಂಬೇಡ್ಕರ್ ಅವರು ಪಶ್ಚಿಮ ಬಂಗಾಲದಿಂದ ರಾಜ್ಯಸಭೆಗೆ ಆಯ್ಕೆಯಾಗಲು ನೆರವಾದರು. ಅಂಬೇಡ್ಕರ್ ತೀರಿಕೊಂಡಾಗ ದೆಹಲಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಕಾಂಗ್ರೆಸ್‌ನವರು ಜಾಗಕೊಡದೆ ಅವಮಾನ ಮಾಡಿದರು ಎಂದರು.
ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಎಲ್ಲಾ ವರ್ಗದ ಜನರ ಭಾವನೆಯಾಗಿದೆ. ಅದರಂತೆ ಅವರು ಮತ್ತೆ ಪ್ರಧಾನಿ ಆಗುವುದು ಖಚಿತ. ಮೋದಿಯವರಿಗೆ ಶಕ್ತಿ ತುಂಬಲು ತುಮಕೂರಿನಲ್ಲಿ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ವಿ.ಸೋಮಣ್ಣ ಅವರು ಸಮರ್ಥ ಅಭ್ಯರ್ಥಿ. ಅಭಿವೃದ್ಧಿಯ ಹರಿಕಾರ. ಇವರ ಹಿಂದಿನ ಕ್ಷೇತ್ರಗಳಲ್ಲಿ ಇವರು ಮಾಡಿದ ಅಭಿವೃದ್ಧಿ ಕಾರ್ಯಗಳು ಸಾಕ್ಷಿಯಾಗಿವೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಆಂಜನಪ್ಪ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಅಂಜನಮೂರ್ತಿ, ದಲಿತ ವಿಮೋಚನಾ ಸಮಿತಿ ಅಧ್ಯಕ್ಷ ವೆಂಕಟರಮಣ, ಮುಖಂಡರಾದ, ಇಂದ್ರಕುಮಾರ್, ಪ್ರತಾಪ್‌ಕುಮಾರ್, ಜಯಪುರ ಮಂಜುನಾಥ್ ಹಾಜರಿದ್ದರು.