ತುಮಕೂರು: ಜಿಲ್ಲೆಯ ಸಮಗ್ರ ದೃಷ್ಟಿಕೋನದೊಂದಿಗೆ ಯೋಜನೆಗಳ ಸಮರ್ಪಕ ಅನುಷ್ಟಾನ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದ ಸಂಕಲ್ಪದೊಂದಿಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅಭಿವೃದ್ಧಿಯ ಸಂಕಲ್ಪ ಪತ್ರದೊಂದಿಗೆ ಭರವಸೆ ನೀಡಿದ್ದಾರೆ.
ಭಾನುವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತಿತರ ಮುಖಂಡರು ಅಭ್ಯರ್ಥಿ ಸೋಮಣ್ಣ ಅವರ ಅಭಿವೃದ್ಧಿಯ ಸಂಕಲ್ಪ ಪತ್ರ ಬಿಡುಗಡೆ ಮಾಡಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಅವರು ಸಂಕಲ್ಪ ಪತ್ರದ ವಿವರ ನೀಡಿ, ಜಿಲ್ಲೆಯ ರೈತರಿಗೆ ನೆರವಾಗುವ ಆಶಯದಿಂದ ಅಡಿಕೆ ಸಂಸ್ಕರಣಾ ಘಟಕ ಸ್ಥಾಪನೆ, ತೆಂಗು ಆಧಾರಿತ ಉತ್ಪನ್ನಗಳ ಬೃಹತ್ ಕೈಗಾರಿಕೆ ಹಾಗೂ ಬೆಂಬಲ ಬೆಲೆಯಲ್ಲಿ ಶಾಶ್ವತ ಕೊಬ್ಬರಿ ಖರೀದಿ ಕೇಂದ್ರ ಸ್ಥಾಪನೆ, ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಕೋಕೋನಟ್ ಸ್ಪೆಷಲ್ ಎಕಾನಾಮಿಕ್ ಝೋನ್ ಸ್ಥಾಪನೆ, ರೇಷ್ಮೆ, ಶೇಂಗಾ ಬೆಳೆಗಳ ಉಪ ಉತ್ಪನ್ನ ತಯಾರಿಕಾ ಘಟಕಗಳ ಸ್ಥಾಪನೆ, ತುಮಕೂರು ವಿವಿಯಲ್ಲಿ ಕೃಷಿ ಹಾಗೂ ತೊಟಗಾರಿಕೆಗೆ ಸಮಗ್ರ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಒಣ ಬೇಸಾಯ ಸಂಶೋಧನಾ ಸಂಸ್ಥೆ ಸ್ಥಾಪನೆ, ಚಿಕ್ಕನಾಯಕನಹಳ್ಳಿಯಲ್ಲಿ ಸಿರಿಧಾನ್ಯ ಮತ್ತು ಆರ್ಗಾನಿಕ್ ಫಾರ್ಮಿಂಗ್ ಕ್ಲಸ್ಟರ್ ಸ್ಥಾಪನೆ, ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಉಗ್ರಾಣ ಮತ್ತು ಶೈಥಲೀಕರಣ ಘಟಕ ನಿರ್ಮಾಣ, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ, ನ್ಯಾನೋ ಪಾರ್ಕ್ ಸ್ಥಾಪನೆ, ನ್ಯಾನೋ ಗೊಬ್ಬರವನ್ನು ಕೃಷಿಗೆ ಬಳಿಸಿಕೊಳ್ಳವಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವುದು, ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆ, ಕೈಮಗ್ಗ ಉದ್ಯಮದ ಅಭಿವೃದ್ಧಿ, ಸುಧಾರಣೆ, ಬೆಂಬಲ ಮತ್ತು ನೇರ ಮಾರುಕಟ್ಟೆಯ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಘೋಷಿತವಾಗಿರುವ 5300 ಕೋಟಿ ರೂ. ಹಣ ಬಿಡುಗಡೆಗೊಳಿಸಿ ಶೀಘ್ರ ಅನುಷ್ಠಾನ, ಎತ್ತಿನಹೊಳೆ ಯೋಜನೆಯನ್ನು ಜಲಜೀವನ್ ಮಿಷನ್ ಕಾರಿಡಾರ್ ಆಗಿ ಘೋಷಣೆ ಮಾಡಿಸಿ ಶೀಘ್ರ ಅನುಷ್ಠಾನ, ತುಮಕೂರು ಕ್ಷೇತ್ರದ ಎಲ್ಲಾ ಕೆರೆಗಳಿಗೆ ನದಿ ನೀರಿನ ಸೌಲಭ್ಯ ಕಲ್ಪಿಸುವ ಪ್ರಯತ್ನ, ಕ್ಷೇತ್ರ ವ್ಯಾಪ್ತಿಯ ಎಲ್ಲಾ ನಗರಗಳಿಗೆ 24X7 ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಿ.ಸೋಮಣ್ಣ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ತುಮಕೂರಿನಲ್ಲಿ ಐಐಟಿ ಸ್ಥಾಪನೆಗೆ ಒತ್ತು ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆ, ಮಧುಗಿರಿ, ತಿಪಟೂರು ವಿಭಾಗಗಳಲ್ಲಿ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯಗಳ ಸ್ಥಾಪನೆಗೆ ಕ್ರಮ, ನ್ಯಾಷನಲ್ ಸೋಲಾರ್ ಎನರ್ಜಿ ಇನ್‌ಸ್ಟಿಟ್ಯೂಟ್ ಸ್ಥಾಪನೆ, ಜಿಲ್ಲೆಗೊಂದು ಸೈನಿಕ್ ಶಾಲೆ ಸ್ಥಾಪನೆ, ತುಮಕೂರಿನಲ್ಲಿ ಸ್ಥಾಪಿತವಾಗಿರುವ ಹೆಚ್‌ಎಎಲ್ ಮತ್ತು ಇಸ್ರೋ ಏರೋಸ್ಪೇಸ್/ಏರೋನಾಟಿಕ್ ಪದವಿ ಅಥವಾ ಪಾಲಿಟೆಕ್ನಿಕ್ ಸ್ಥಾಪನೆ, ಆರ್ಟಿಫಿಷಿಯಲ್ ಇಂಟಿಲಿಜೆನ್ಸ್ ಆಧಾರಿತ ಕೌಶಲ್ಯ ತರಬೇತಿ ಕೇಂದ್ರ, ಡೈರಿ ಸೈನ್ಸ್ ಟೆಕ್ನಾಲಜಿ ಕಾಲೇಜು, ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಿದ್ಧರಬೆಟ್ಟದ ಸಮೀಪ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸ್ಥಾಪನೆಗೆ ಕ್ರಮ, ಇಎಸ್‌ಐ ಆಸ್ಪತ್ರೆ, ವಸಂತನರಸಾಪುರ ಮತ್ತು ತಿಪಟೂರಿನಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆ, ತುಮಕೂರು ಹೈಟೆಕ್ ಮಹಿಳೆ ಮತ್ತು ನವಜಾತ ಶಿಶುಗಳ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉನ್ನತೀಕರಣ, ಕ್ಷೇತ್ರದ ಎಲ್ಲಾ ಆಸ್ಪತ್ರೆಗಳ ಎಲ್ಲಾ ಬಗೆಯ ಸೌಲಭ್ಯಗಳನ್ನೊಳಗೊಂಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಉನ್ನತೀಕರಣ, ಡಯಾಲಿಸ್ ಆಸ್ಪತ್ರೆ ಉನ್ನತೀಕರಿಸಿ ತುಮಕೂರು 50 ಹಾಸಿಗೆ, ತಿಪಟೂರು 25 ಹಾಸಿಗೆ, ಉಳಿದ ತಾಲ್ಲೂಕು ಆಸ್ಪತ್ರೆಗಳಲ್ಲಿ 10 ಹಾಸಿಗೆ ಸೌಲಭ್ಯ ಒದಗಿಸಲಾಗುವುದು ಎಂದರು.
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ವಸತಿರಹಿತರಿಗೆ ಸೂರು, ತಾಲ್ಲೂಕು ಕೇಂದ್ರಗಳನ್ನು ಸ್ಮಾರ್ಟ್ ಟೌನ್‌ಗಳಾಗಿ ಪರಿವತಿಸಿ ಆಧುನಿಕ ಸೌಕರ್ಯ ಮತ್ತು ಸುಸ್ಥಿರ ಮೂಲಸೌಲಭ್ಯ ನೀಡುವುದು, ವಸಂತನರಸಾಪುರದಲ್ಲಿ ಇಂಡೋರ್ ಮಾದರಿಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ತುಮಕೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಉನ್ನತ ದರ್ಜೆಗೇರಿಸುವುದು, ನೈರ್ಮಲ್ಯ ಗುಣಮಟ್ಟ ಸುಧಾರಿಸಲು ತುಮಕೂರು ನಗರಪಾಲಿಕೆ, ಎಲ್ಲಾ ನಗರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಒಳಚರಂಡಿ ವ್ಯವಸ್ಥೆಗಳ ಅನುಷ್ಠಾನ, ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ವಿಧಾನಸಭಾ ಕ್ಷೇತ್ರಕ್ಕೆ ಸೇವಾ ಪ್ರಮುಖ್‌ನೊಂದಿಗೆ ಒಂದು ಮೊಬೈಲ್ ಸೇವಾ ಕೇಂದ್ರ ಒದಗಿಸುವುದು ಸೋಮಣ್ಣ ಅವರ ಆಶಯವಾಗಿದೆ ಎಂದು ಶಿವಪ್ರಸಾದ್ ಹೇಳಿದರು.
ಬೆಂಗಳೂರಿನಿಂದ ತುಮಕೂರಿನ ವಸಂತನರಸಾಪುರದವರೆಗೆ ಮೆಟ್ರೋ ರೈಲು ಅನುಷ್ಠಾನ, ಬೆಂಗಳೂರು-ತುಮಕೂರು ಎಲಿವೇಟೆಡ್ ಎಕ್ಸ್ಪ್ರೆಸ್ ರಸ್ತೆ ನಿರ್ಮಾಣ, ತುಮಕೂರು-ಬೆಂಗಳೂರು ಸಬ್ ಅರ್ಬನ್ ರೈಲ್ವೆ ಸ್ಥಾಪನೆ, ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವುದು, ತುಮಕೂರು- ಬೆಂಗಳೂರು ನಡುವೆ 4 ಲೇನ್ ರೈಲು ಮಾರ್ಗವಾಗಿ ಪರಿವರ್ತಿಸುವುದು, ರೈಲ್ವೆ ಮೇಲು ಸೇತುವೆ, ಕೆಳ ಸೇತುವೆ ನಿರ್ಮಣಕ್ಕೆ ಆದ್ಯತೆ ನಿಡಲಾಗುವುದು, ಬೆಂಗಳೂರು-ಅರಸಿಕೆರೆ ನಡುವೆ ಹೆಚ್ಚಿನ ರೈಲು ಸೇವೆ ಒದಗಿಸುವುದು, ಬೆಂಗಳೂರು-ಪುಣೆ ರಸ್ತೆಯ ಸಮಗ್ರ ಅಭಿವೃದ್ಧಿ, ಬೆಂಗಳೂರು-ಹಾಸನ ರಸ್ತೆ ಅಭಿವೃದ್ಧಿ, ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ಪಟ್ಟಣಗಳಿಂದ ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದಕ್ಕೆ ಸೋಮಣ್ಣ ಆದ್ಯತೆ ನೀಡಿದ್ದಾರೆ ಎಂದರು.
ತುಮಕೂರಿನಲ್ಲಿ ಅಂತರರಾಷ್ಟಿಯ ಮಟ್ಟದ ವಿಮಾನ ನಿಲ್ದಾಣ ಸ್ಥಾಪನೆ, ಮಾಹಿತಿ ತಂತ್ರಜ್ಞಾನ ಕೇಂದ್ರ ಸ್ಥಾಪನೆ, ತುಮಕೂರಿನ ಇಸ್ರೋ ಘಟಕಕ್ಕೆ ಒತ್ತು, ಹೆಚ್‌ಎಎಲ್ ಘಟಕ ಸುತ್ತಮುತ್ತಲ ಗ್ರಾಮಗಳಲ್ಲಿ ಸಿಆರ್‌ಎಫ್ ಫಂಡ್‌ನಿಂದ ಅಭಿವೃದ್ಧಿ, ಡಿಫೆನ್ಸ್ ಕಾರಿಡಾರ್, ಏರೊಸ್ಪೇಸ್ ಕಾರಿಡಾರ್ ಸ್ಥಾಪನೆ, ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್ ವೇಗ ಮಾಡಲು ಪ್ರಯತ್ನ, ಎಂಎಸ್‌ಎಂಇ ಟೆಕ್ನಾಲಜಿ ಸೆಂಟರ್ ವೇಗ ಮಾಡಲು, ಇಂಡಸ್ಟ್ರಿಯಲ್ ವಿಲೇಜ್ ಸ್ಥಾಪನೆ, ಮೆಗಾ ಡೈರಿ ಯೋಜನೆಗೆ ಹೆಚ್ಚು ಅನುದಾನ ಕೊಡಿಸಲಾಗುವುದು. ತಾಲ್ಲೂಕುವಾರು ಕೈಗಾರಿಕಾ ವಸಾಹತುಗಳ ಪ್ರದೇಶಗಳ ಸ್ಥಾಪನೆ, ಗಾರ್ಮೆಂಟ್ಸ್, ಟೆಕ್ಸ್ಟೈಲ್ಸ್ ಪಾರ್ಕ್ ಸ್ಥಾಪನೆ, ವಸಂತನರಸಾಪುರ ಕೈಗಾರಿಕಾ ಪ್ರದೇಶದ 4,5 ಮತ್ತು 6ನೇ ಹಂತವನ್ನು ಅನುಷ್ಠಾನಗೊಳಿಸುವುದ ಸೋಮಣ್ಣ ಅವರ ಆದ್ಯತೆಯಾಗಿದೆ ಎಂದರು.
ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯ ಒದಗಿಸಿ ಸಮಗ್ರ ಅಭಿವೃದ್ಧಿಪಡಿಸುವುದು, ಮಧುಗಿರಿ ಏಕಶಿಲಾ ಬೆಟ್ಟ ಮತ್ತು ನಾಮದಚಿಲುಮೆ ಕ್ಷೇತ್ರವನ್ನು ಪ್ರವಾಸೋದ್ಯಮಕ್ಕೆ ಅಭಿವೃದ್ಧಿಪಡಿಸಲಾಗುವುದು. ಖೇಲೋ ಇಂಡಿಯಾ ಯೋಜನೆಯಡಿ ಗುಬ್ಬಿ ತಾಲ್ಲೂಕು ನಿಟ್ಟೂರು ಬಳಿ ಸರ್ಕಾರಿ ಜಾಗ 40 ಎಕರೆ ಕ್ರೀಡಾ ಗ್ರಾಮಕ್ಕೆ ಕಾಯ್ದಿರಿಸಿದೆ. ಮಹಿಳಾ ಕ್ರೀಡಾಪಟುಗಳಿಗೆ ಸುಸಜ್ಜಿತ ಕ್ರೀಡಾ ಕೇಂದ್ರ ಸ್ಥಾಪನೆ, ಅಭಿವೃದ್ಧಿ ಹೆಸರಿನಲ್ಲಿ ಕಡಿದಿರುವ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಡುವುದು, ಕೆರೆ, ನದಿ ಮೂಲಗಳ ಸಂರಕ್ಷಣೆ, ತಲಪರಿಕೆಗಳ ಪುನಶ್ಚೇತನ ಮತ್ತು ಮಣ್ಣಿನ ಸವಕಳಿ ತಡೆಯುವುದು, ಕಾಡಿನ ಸಂರಕ್ಷಣೆ, ಜಲಚರ, ಎಲ್ಲಾ ಜೀವ ಸಂಕುಲ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಸೋಮಣ್ಣ ಅವರು ತಮ್ಮ ಸಂಕಲ್ಪ ಪತ್ರದಲ್ಲಿ ಹೇಳಿದ್ದಾರೆ ಎಂದು ಶಿವಪ್ರಸಾದ್ ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಂಕಲ್ಪ ಪತ್ರ ಸಮಿತಿ ಸಂಚಾಲಕರಾದ ಬಿ.ಹೆಚ್.ಅನಿಲ್‌ಕುಮಾರ್, ಸುರೇಶ್, ಮುಖಂಡರಾದ ಭೈರಣ್ಣ, ಟಿ.ಆರ್.ಸದಾಶಿವಯ್ಯ, ಜೆ.ಜಗದೀಶ್, ತುಂಬಾಡಿ ದೇವರಾಜು ಹಾಜರಿದ್ದರು.