ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರ ಹಾಗೂ ಶಿಕ್ಷಕರ ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಾನೂನಿನ ಹೋರಾಟಕ್ಕಾಗಿ ರೂಪುರೇಷೆ ಅಂತಿಮಗೊಳಿಸಲಾಗಿದೆ ಎಂದು ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದರು.
ಅವರು ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಕಾಲ್ಪನಿಕ ವೇತನಕ್ಕೆ ಸರ್ಕಾರ ಸುಗ್ರೀವಾಜ್ಞೆ ತರುವ ಮೂಲಕ ಅನ್ಯಾಯ ಮಾಡಿದ್ದು, ಈ ಸಂಬಂಧ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ನ್ಯಾಯ ದೊರೆಕಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಕಾಲ್ಪನಿಕ ವೇತನಕ್ಕಾಗಿ ಹೋರಾಟ ನಡೆಸಿದ್ದ ಮುಖಂಡರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಿ ನ್ಯಾಯಾಲಯದಲ್ಲಿ ಹೂಡಿರುವ ದಾವೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕೆಲವು ಶಿಕ್ಷಕ ಸಂಘಟನೆಗಳೂ ಸಹ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಹಲವಾರು ಕಾರಣಗಳಿಂದ ಅವು ಯಶಸ್ಸು ಕಂಡಿರಲಿಲ್ಲ. ಆದ್ದರಿಂದ ದಾವೆ ಹೂಡಿರುವ ಶಿಕ್ಷಕರಿಗೂ ಸಹ ವಕೀಲರಿಂದ ನಿರಪೇಕ್ಷಣಾ ಪ್ರಮಾಣ ಪತ್ರ ಪಡೆದು ರೂಪ್ಸ ಕರ್ನಾಟಕ ಸಂಘಟನೆಗೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ ಎಂದರು.
ಇದೀಗ ಕಾಲ್ಪನಿಕ ವೇತನದ ಕಾನೂನಿನ ಹೋರಾಟಕ್ಕೆ ರಾಜ್ಯದ ಹಿರಿಯ ಕಾನೂನು ತಜ್ಞ ಹಾಗೂ ವಕೀಲರಾದ ಕೆ.ವಿ. ಧನಂಜಯರವರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸಿದ್ದು, ಇದೇ ಏಪ್ರಿಲ್ 24ರಂದು ಸುಪ್ರೀಂ ಕೋರ್ಟ್’ನ ಹಿರಿಯ ವಕೀಲರ ತಂಡದೊಂದಿಗೆ ರೂಪ್ಸ ಕರ್ನಾಟಕ ಸಭೆಯನ್ನು ಆಯೋಜಿಸಿದ್ದು, ಅಂದು ಅಂತಿಮವಾಗಿ ಕಾನೂನಿನ ಹೋರಾಟಕ್ಕೆ ಅಡಿಯಿಡಲಿದೆ ಎಂದು ತಿಳಿಸಿದರು.