ಶಿಕ್ಷಕರ ನೇಮಕಾತಿ ವಿಷಯದಲ್ಲಿ ಸರ್ಕಾರ ಮೌನ: ಲೋಕೇಶ್ ತಾಳಿಕಟ್ಟೆ ಬೇಸರ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ನೇಮಕಾತಿ ಮಾಡಿಕೊಳ್ಳುವಲ್ಲಿ ಸರ್ಕಾರ ಮೌನವಹಿಸಿದ್ದು, ಇದರಿಂದ ಗುಣಾತ್ಮಕ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಬೇಸರ ವ್ಯಕ್ತಪಡಿಸಿದರು.

 

 

 

ಅವರು ಕೊರಟಗೆರೆ ಪಟ್ಟಣದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಬೆಂಬಲ ಕೋರಿದ ನಂತರ ಪ್ರವಾಸಿ ಮಂದಿರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ 20 ವರ್ಷಗಳಿಂದ ನಮ್ಮನ್ನಾಳುತ್ತಿರುವ ಸರ್ಕಾರಗಳು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಯನ್ನು ಭರ್ತಿ ಮಾಡುವಲ್ಲಿ ವಿಳಂಬ ಹಾಗೂ ನಿರ್ಲಕ್ಷ ಧೋರಣೆಯನ್ನು ತಳೆದಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಸುಮಾರು ಸಾವಿರಾರು ಸರ್ಕಾರಿ ಶಾಲೆಗಳನ್ನು ಸರ್ಕಾರ ಈಗಾಗಲೇ ಮುಚ್ಚಿದ್ದು ಖಾಸಗಿಕರಣದ ಹೊನ್ನಾರ ನಡೆಯುತ್ತದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.

 

 

ಕಳೆದ 15 ವರ್ಷಗಳಲ್ಲಿ ಇದುವರೆಗೂ 20 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು 61 ಸಾವಿರ ಇದ್ದ ಸರ್ಕಾರಿ ಶಾಲೆಗಳು ಇದೀಗ 41 ಸಾವಿರಕ್ಕೆ ಬಂದು ನಿಂತಿದೆ. ಗುಣಾತ್ಮಕ ಶಿಕ್ಷಣ ನೀಡದೆ ಇದ್ದಲ್ಲಿ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಬಜೆಟ್ ನಲ್ಲಿಯೂ ಸಹ ಕೇವಲ ಶೇಕಡ 11ರಷ್ಟು ಹಣ ಮೀಸಲಿಟ್ಟಿದ್ದು ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ನಮ್ಮ ರಾಜ್ಯವೇ ಅತಿ ಕಡಿಮೆ ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟಿದೆ. ಇದನ್ನು ಯಾರು ಸಹ ಪ್ರತಿಭಟಿಸುತ್ತಿಲ್ಲ ಶಿಕ್ಷಕರಿಂದ ಆಯ್ಕೆಯಾದ ವಿಧಾನಪರಿಷತ್ತಿನ ಸದಸ್ಯರು ಸಹ ಈ ಬಗ್ಗೆ ಚಕಾರ ಎತ್ತದೆ ಕೇವಲ ಅಧಿಕಾರವನ್ನು ಅನುಭವಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 

 

 

ಇದೀಗ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಎದುರಾಗಿದ್ದು,ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಮತ್ತು ಶಿಕ್ಷಕರನ್ನು ರಕ್ಷಿಸುವ ಕೆಲಸ ಮಾಡುವ ದೃಷ್ಟಿಯಿಂದ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಈಗಾಗಲೇ ಐದು ಜಿಲ್ಲೆ 34 ತಾಲೂಕುಗಳನ್ನು ಪ್ರವಾಸ ಮಾಡಿ ಶಿಕ್ಷಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದು ಈಗಾಗಲೇ ರೂಪ್ಸಾ ಸಂಘಟನೆಯ ವತಿಯಿಂದ ತಾವು ನಡೆಸಿರುವ ಹೋರಾಟದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತಿದ್ದು, ಶಿಕ್ಷಕರೆಲ್ಲರೂ ತಮ್ಮನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ ಜೊತೆಗೆ ಎಲ್ಲ ಜಿಲ್ಲೆಗಳಲ್ಲಿ ಸಹ ಶಿಕ್ಷಕರ ಸಂಘಟನೆ ತಮಗೆ ಬೆಂಬಲ ವ್ಯಕ್ತಪಡಿಸಿವೆ. ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಕೆಲವು ನಿಶ್ಚಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಸುದ್ದಿಗೋಷ್ಠಿಯಲ್ಲಿ ಕೊರಟಗೆರೆ ತಾಲೂಕು ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸದಸ್ಯರಾದ ಪ್ರದೀಪ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!