ತುಮಕೂರು : ತುಮಕೂರು ಮಹಾನಗರ ಪಾಲಿಕೆ, ಜಿಲ್ಲಾ ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಸ್ವ-ನಿಧಿ ಸೇ ಸಮೃದ್ಧಿ ಮೇಳ ಕಾರ್ಯಕ್ರಮವನ್ನು ತುಮಕೂರು ನಗರದ ಜೆ.ಸಿ.ರಸ್ತೆಯಲ್ಲಿರುವ ವೀರಸೌಧ ಕಟ್ಟಡದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ತೇಜಾವತಿರವರು ಆಗಮಿಸಿ ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ ೪೨ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಆಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಗಳ ಕೆಲಸಗಾರರು ಅಸಂಘಟಿತ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಕಾರ್ಮಿಕರಿಗೆ ಅವರ ಜೀವನ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವಯ ಪ್ರಧಾನಮಂತ್ರಿ ಶ್ರಮ್ ಯೋಗಿ ಮನ್-ಧನ್ (ಪಿಎಂ-ಎಸ್‌ವೈಎಂ) ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುತ್ತದೆ, ಇದನ್ನು ಎಲ್ಲಾ ವರ್ಗದ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಭದ್ರೇಗೌಡ ಮಾತನಾಡಿ ಈ ಯೋಜನೆಯಡಿ ಒಳಪಡುವ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, ೧೮ ರಿಂದ ೪೦ ವರ್ಷದೊಳಗಿರಬೇಕು ಅವರ ಮಾಸಿಕ ಆದಾಯ ರೂ. ೧೫,೦೦೦/- ಅಥವಾ ಅದಕ್ಕಿಂತ ಕಡಿಮೆ ಇರಬೇಕು ಎಂದರು. ಆದಾಯ ತೆರಿಗೆ/ಇ.ಎಸ್.ಐ./ಪಿ.ಎಫ್/ಎನ್.ಪಿ.ಎಸ್. ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು ಎಂದರಲ್ಲದೇ ಅರ್ಹ ಆಸಂಘಟಿತ ಕಾರ್ಮಿಕರು ಹತ್ತಿರದ “ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ.)”ಗಳಲ್ಲಿ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಬಹುದಾಗಿರುತ್ತದೆ. ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ. ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇ.ಎಸ್.ಐ. ಕಾರ್ಪೋರೇಷನ್ ಹಾಗೂ ಭವಿಷ್ಯನಿಧಿ ಸಂಘಟನೆಯ ಕಛೇರಿಗಳು ಹಾಗೂ ಇಲಾಖೆಯ ವೆಬ್ ಸೈಟ್‌ನಲ್ಲಿ ಪಡೆಯಬಹುದಾಗಿರುತ್ತದೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡುತ್ತಾ ಕಾರ್ಮಿಕರು ತಮ್ಮೊಂದಿಗೆ ಆರಂಭಿಕ ವಂತಿಕೆ ಮೊತ್ತ, ಆಧಾರ್ ಕಾರ್ಡ್, ಖಾತೆ ಹೊಂದಿರುವ ಬ್ಯಾಂಕಿನ ಐ.ಎಫ್.ಎಸ್.ಸಿ. ಕೋಡ್ ವಿವರಗಳೊಂದಿಗೆ (ಬ್ಯಾಂಕ್ ಪಾಸ್ ಪುಸ್ತಕ/ಚೆಕ್ ಪುಸ್ತಕ/ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು). ತಮ್ಮ ನಾಮನಿರ್ದೇಶಿತರ ವಿವರಗಳು ಮತ್ತು ಮೊಬೈಲ್ ಹ್ಯಾಂಡ್ ಸೆಟ್ ನೊಂದಿಗೆ “ಕಾಮನ್ ಸರ್ವೀಸ್ ಸೆಂಟರ್”ಗಳಿಗೆ ಬರುವುದು. ಅನುಬಂಧದಲ್ಲಿ ತಿಳಿಸಿರುವಂತೆ ಅನುಗುಣವಾಗಿ ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸುವುದು ಹಾಗೂ ತದ ನಂತರದ ಮಾಸಿಕ ವಂತಿಕೆಯನ್ನು ಅವರ ಖಾತೆಯಿಂದ ಆಟೋ ಡೆಬಿಟ್ ಮೂಲಕ ಕಟಾವು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು ಜೊತೆಗೆ ಈ ಯೋಜನೆಯ ಸೌಲಭ್ಯಗಳ ಕುರಿತಾಗಿ ವಿವರವಾಗಿ ತಿಳಿಸಿದರು.
ಈ ಸಮಾರಂಭದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾಧಿಕಾರಿ ತೇಜಾವತಿ, ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಭದ್ರೇಗೌಡ, ಪುಟ್ಟಣ್ಣ, ವಾಸೀಂ ಅಕ್ರಮ್, ಲಕ್ಷ್ಮಮ್ಮ, ರವಿಕುಮಾರ್, ಮುತ್ತುರಾಜು, ಟಿ.ಎಸ್.ರಾಜಶೇಖರ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.