ಬೆಳಧರ ಸರ್ಕಾರಿ ಶಾಲೆಯ ಉಳಿವಿಗಾಗಿ ಠೊಂಕ ಕಟ್ಟಿ ನಿಂತ ಸಂಘ-ಸಂಸ್ಥೆಗಳು

ಬೆಳಧರ ಸರ್ಕಾರಿ ಶಾಲೆ ಉಳಿವಿಗಾಗಿ ಕಾಳಜಿ ಫೌಂಡೇಷನ್ ಮತ್ತು ಭೀಮ್ ಆರ್ಮಿ ಸಂಘಟನೆಯಿಂದ ಇಂದು ಮೌನ ಪ್ರತಿಭಟನಾ ಮೆರವಣಿಗೆಯನ್ನು ನಗರ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಜಿಲ್ಲಾ ಪಂಚಾಯತ್ ಕಛೇರಿಯವರೆಗೆ ನಡೆಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

 

 

ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕು, ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಹೊಂದಿಕೊಂಡಂತೆ ೨ ಎಕರೆ ಜಾಗ ಗ್ರಾಮ ಠಾಣಾಗೆ ಲಗತ್ತಾಗಿದ್ದು, ರಾಜ್ಯ ಸರ್ಕಾರವು ಮಕ್ಕಳಿಗೆ ಆಟದ ಉದ್ದೇಶಕ್ಕಾಗಿ ಮಂಜೂರು ಮಾಡಿರುವ ಜಾಗವಾಗಿರುತ್ತದೆ. ಈ ಜಾಗಕ್ಕೆ ಸುಮಾರು ೪ ಬಾರಿ ಸರ್ವೆ ಇಲಾಖೆಯಿಂದ ಸರ್ವೆ ಕಾರ್ಯ ಮಾಡಿ ಹದ್ದುಬಸ್ತನ್ನು ಸಹ ಮಾಡಲಾಗಿರುತ್ತದೆ ಆದರೆ ಇತ್ತೀಚೆಗೆ ಕೆಲ ತಿಂಗಳ ಹಿಂದೆ ಸದರಿ ಮೈದಾನವನ್ನು ಬೆಳಧರ ಗ್ರಾಮ ಪಂಚಾಯಿತಿಯಲ್ಲಿ ಶಾಲೆಯ ಹೆಸರಿಗೆ ಈ-ಸ್ವತ್ತನ್ನು ನಮೂದು ಮಾಡಿರುತ್ತಾರೆಂದು ಭೀಮ್ ಆರ್ಮಿ ಸಂಘಟನೆಯ ಜಿಲ್ಲಾದ್ಯಕ್ಷ ಅಯ್ಯನಪಾಳ್ಯ ಶ್ರೀನಿವಾಸ್ ಹೇಳಿದರು.

 

 

 

ಮುಂದುವರೆದು ಮಾತನಾಡುತ್ತಾ ಶಾಲಾ ಆಟದ ಮೈದಾನಕ್ಕೆ ಹೊಂದಿಕೊಂಡಂತೆ ಒಂದು ಕಲ್ಯಾಣ ಮಂಟಪವಿದ್ದು ಸದರಿ ಕಲ್ಯಾಣ ಮಂಟಪದ ಮಾಲೀಕರು ಪಂಚಾಯಿತಿಯಲ್ಲಿ ಪಶ್ಚಿಮ ದಿಕ್ಕಿಗೆ ಅನುಮತಿ ಪಡೆದು ಶಾಲೆಯ ಆಟದ ಮೈದಾನವನ್ನು ಕಬಳಿಸುವ ದುರುದ್ದೇಶದಿಂದ ಉತ್ತರಕ್ಕೆ ಬಾಗಿಲನ್ನು ಇಟ್ಟುಕೊಂಡಿದ್ದು ಸದರಿ ಆಟದ ಮೈದಾನವನ್ನೇ ಕಲ್ಯಾಣ ಮಂಟಪದ ವಾಹನ ನಿಲ್ದಾಣವನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಕಲ್ಯಾಣ ಮಂಟಪಕ್ಕೆ ಬರುವವರು ಶಾಲಾ ಕೊಠಡಿಗಳ ಆವರಣವನ್ನೇ ಕುಡುಕರ ಅಡ್ಡೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಅಷ್ಟು ಸಾಲದು ಎಂಬಂತೆ ಪ್ರತಿನಿತ್ಯ ಹಲವಾರು ಮಕ್ಕಳು ಕಲ್ಯಾಣ ಮಂಟಪಕ್ಕೆ ಬಂದು ಹೋಗುವ ವಾಹನಗಳಿಗೆ ಅಡ್ಡಕ್ಕೆ ಸಿಲುಕಿ ಕ್ಷಣ ಮಾತ್ರದಲ್ಲೇ ಪ್ರಾಣಪಾಯದಿಂದ ಪಾರಾದ ನಿದರ್ಶನಗಳು ಇರುತ್ತವೆಂದು ಶ್ರೀನಿವಾಸ್‌ಅವರು ತಿಳಿಸಿದರು.

 

ಮುಂದುವರೆದು ಕಾಳಜಿ ಫೌಂಡೇಷನ್‌ನ ಮುಖಂಡರು ಮಾತನಾಡಿ ಇಷ್ಟೆಲ್ಲಾ ತೊಂದರೆಗಳನ್ನು ಸ್ಥಳೀಯ ಶಾಸಕರ ಗಮನಕ್ಕೆ ತಂದ ನಂತರ ಮಾನ್ಯ ಶಾಸಕರು ನಂತರದಲ್ಲಿ ಶಾಲಾ ಮಕ್ಕಳಿಗೆ ಯಾವುದೆ ತೊಂದರೆಯಾಗದಂತೆ ಮಕ್ಕಳ ಹಿತದೃಷ್ಟಿಯಿಂದ ಸದರಿ ಶಾಲೆ ಆಟದ ಮೈದಾನಕ್ಕೆ ತಂತಿ ಬೇಲಿ ನಿರ್ಮಾಣ ಕಾಮಗಾರಿ ಮಾಡುವ ಸಲುವಾಗಿ ರೂ. 5,00,000/- (ಐದು ಲಕ್ಷ ರೂಗಳನ್ನು) ಮಂಜೂರು ಮಾಡಿರುತ್ತಾರೆ. ಕಾಮಗಾರಿ ಪ್ರಾರಂಭ ಮಾಡುವ ಮೊದಲು ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಸರ್ವೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಸದರಿ ಶಾಲೆಗೆ ಹದ್ದುಬಸ್ತನ್ನು ಸಹ ಮಾಡಿಕೊಟ್ಟು ಬೌಂಡರಿಗಳನ್ನು ಗುರುತಿಸಿದ್ದಾರಲ್ಲದೇ ತಂತಿ ಬೇಲಿ ನಿರ್ಮಿಸುವ ಕಾಮಗಾರಿಗೆ ಕೆಲಸವನ್ನು ಸಹ ಪ್ರಾರಂಭಿಸಿರುತ್ತಾರೆ. ಕಾಮಗಾರಿ ಪ್ರಾರಂಭವಾದಾಗಿನಿಂದ ಸದರಿ ಶಾಲಾ ಆಟದ ಮೈದಾನವನ್ನು ಕಬಳಿಸುವ ದುರುದ್ದೇಶ ಹೊಂದಿರುವ ಕೆಲ ಪ್ರಭಾವಿ ವ್ಯಕ್ತಿಗಳು ಈ ಕಾಮಗಾರಿಗೆ ಒಂದಲ್ಲ ಒಂದು ರೀತಿಯಾಗಿ ತೊಂದರೆ ಕೊಡುತ್ತಾ ಬರುತ್ತಿದ್ದಾರೆ ಈ ಕುರಿತು ಇಲಾಖೆಯ ಗಮನಕ್ಕೆ ತಂದ ನಂತರ ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಎಲ್ಲರೂ ಸೇರಿ ತಂತಿ ಬೇಲಿ ಕಾಮಗಾರಿಯನ್ನು ಪ್ರಾರಂಭ ಮಾಡಿ ಶಾಲಾ ಆವರಣದಲ್ಲಿ ಸುಮಾರು ಹಣ್ಣಿನ ಗಿಡಗಳನ್ನು ಸಹ ನೆಟ್ಟಿರುತ್ತಾರೆ ಎಂದು ತಿಳಿಸಿದರು.

 

 

 

ಇಷ್ಟೇಲ್ಲಾ ಆದರೂ ಕೆಲ ಪ್ರಭಾವಿಗಳು ಶಾಲಾ ಆಟದ ಮೈದಾನವನ್ನು ಕಬಳಿಸುವ ದುರುದ್ದೇಶದಿಂದ ಜೆ.ಸಿ.ಬಿ ಯಂತ್ರದಿಂದ ಸದರಿ ತಂತಿ ಬೇಲಿಯನ್ನು ರಾತ್ರೋ ರಾತ್ರಿ ಕಿತ್ತು ಹಾಕಿದ್ದಾರೆಂದು ದೂರಿದ್ದಾರೆ. ಇದರಿಂದ ಶಾಲಾ ಆವರಣದಲ್ಲಿ ಭಯದ ವಾತಾವರಣ ಉಂಟಾಗಿದ್ದು ಮಕ್ಕಳು ಶಾಲೆಯಲ್ಲಿ ಅಭ್ಯಾಸ ಮಾಡಲು ಭಯಬೀತರಾಗಿದ್ದಾರಲ್ಲದೇ ಇದು ಪರೀಕ್ಷಾ ಸಮಯವಾಗಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳಷ್ಟು ತೊಂದರೆಯಾಗುತ್ತದೆಂದು ದೂರಿದ್ದಾರೆ.

 

 

ಈ ಕುರಿತು ಕಾಳಜಿ ಫೌಂಡೇಷನ್ ಮತ್ತು ಭೀಮ್ ಆರ್ಮಿ ಸಂಘಟನೆ ಹಾಗೂ ಇನ್ನಿತರೆ ಸಾಮಾಜಿಕ ಹೋರಾಟಗಾರರು, ಸೇರಿ ಶಾಲಾ ಆವರಣವನ್ನು ಉಳಿಸಿ ಮಕ್ಕಳ ರಕ್ಷಣೆಗೆ ಬಂದೋಬಸ್ತು ಕಲ್ಪಿಸಿ ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮೌನ ಪ್ರತಿಭಟನೆ ಮಾಡುವುದರ ಮೂಲಕ ಮನವಿಯನ್ನು ಸಲ್ಲಿಸಿದ್ದು, ಈ ಕುರಿತು ಕ್ರಮ ವಹಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದೆಂದು ತಿಳಿಸಿದರು.

 

 

 

 

ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅಯ್ಯನಪಾಳ್ಯ ಶ್ರೀನಿವಾಸ್, ಕಾಳಜಿ ಫೌಂಡೇಷನ್ ಜಿ.ಎಲ್.ನಟರಾಜ್, ಶಿವಕುಮಾರ್, ಚೇತನ್, ಆಕಾಶ್, ನವೀನ್, ರಾಜು, ಹರೀಶ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!