ಮಾರ್ಚಿ 12 ರಿಂದ 15ರವರೆಗೆ ಸಾಹೇ ವಿವಿಯಲ್ಲಿ ರಾಷ್ಟ್ರೀಯ ಮಟ್ಟದ ನೆಟ್‌ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿ

 

ತುಮಕೂರು: ಇದೇ ಪ್ರಪಥಮ ಬಾರಿಗೆ ತುಮಕೂರಿನ ಸಾಹೇ (ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇ?ನ್) ವಿಶ್ವವಿದ್ಯಾಲಯ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನ್ನು ತುಮಕೂರಿನಲ್ಲಿ ಆಯೋಜಿಸುತ್ತಿದೆ. ಇದೇ ತಿಂಗಳ 12 ರಿಂದ 15 ರ ತನಕ ನಡೆಯಲಿರುವ ಈ ಟೂರ್ನಿಯಲ್ಲಿ ದೇಶದ 72 ವಿಶ್ವವಿದ್ಯಾಲಯದ ತಂಡಗಳು ಭಾಗವಹಿಸುತ್ತಿವೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ತಿಳಿಸಿದರು.

 

 

ನಗರದ ಸಮೀಪದ ಅಗಳಕೋಟೆಯಲ್ಲಿರುವ ಸಾಹೇ ವಿಶ್ವವಿದ್ಯಾಲಯದ ಆಡಳಿತ ಸಭಾಂಗಣದಲ್ಲಿಂದು (ಶನಿವಾರ) ಪತ್ರಿಕಾಗೋಷ್ಠಿಯಲ್ಲಿ ಟೂರ್ನಿಯ ವಿವರ ನೀಡಿದ ಅವರು, ಒಂದು ತಂಡದಲ್ಲಿ 12 ಮಂದಿಯಿದ್ದು 852 ನೆಟ್‌ಬಾಲ್ ಕ್ರೀಡಾಪಟುಗಳು, ತಂಡದ ಕೋಚ್ ಮತ್ತು ಮ್ಯಾನೇಜರ್, 60 ರೆಫ್ರಿಗಳು, 250 ಮಂದಿ ಸಂಘಟಕನಾ ಸಮಿತಿ ಸದಸ್ಯರು ದೇಶದ ವಿವಿಧ ರಾಜ್ಯಗಳಿದ್ದು ಆಗಮಿಸುತ್ತಿದ್ದಾರೆ.ಅಖಿಲ ಭಾರತ ನೆಟ್‌ಬಾಲ್ ಫೆಡರೇಷನ್, ಕರ್ನಾಟಕ ಮತ್ತು ತುಮಕೂರು ವಿಭಾಗದ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಈ ನೆಟ್‌ಬಾಲ್ ಟೂರ್ನಿಯನ್ನು ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್  ಆಯೋಜಿಸುತ್ತಿದೆ ಎಂದರು.

 

ನಾಲ್ಕು ದಿನದ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಮತ್ತು ತಂಡದ ಇತರಿಗೆ ವಸತಿ,ಊಟ ಮತ್ತು ಸಾರಿಗೆ ವ್ಯವಸ್ಥೆ ಸಂಪೂರ್ಣ ಮೇಲುಸ್ತುವಾರಿಯನ್ನು ಸಾಹೇ ವಹಿಸಿದೆ. ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಸ್ವತ: ರಾಜ್ಯಮಟ್ಟದ ಕ್ರೀಡಾಪಟುವಾಗಿದ್ದು, ತಮ್ಮ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಅಧ್ಯಯನದ ಜೊತೆಗ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುವುದಕ್ಕೆ ಈ ರಾಷ್ಟ್ರೀಯ ಟೂರ್ನಿ ತಾಜ ಉದಾಹರಣೆ ಎಂದು ಡಾ.ಕೆ.ಬಿ.ಲಿಂಗೇಗೌಡ ವಿವರಿಸಿದರು.

 

 

ಸಾಹೇ ವಿಶ್ವವಿದ್ಯಾನಿಲಯದಲ್ಲಿ, ಸಕಾರಾತ್ಮಕ ಜಾಗತಿಕ ಬದಲಾವಣೆಯನ್ನು ಉಂಟುಮಾಡುವ ಸೃಜನಶೀಲ ಆಟಗಾರರನ್ನು ಪೋಷಿಸುವುದು ನಮ್ಮ ದೃಷ್ಟಿಯಾಗಿದೆ. ವಿವಿಯಲ್ಲಿನ ದೈಹಿಕ ಶಿಕ್ಷಣ ವಿಭಾಗವು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ವಿದ್ಯಾರ್ಥಿ ವರ್ಗದಲ್ಲಿ ಆಟೋಟದ ದೃಷ್ಟಿಯನ್ನು ಬೆಳೆಸುತ್ತದೆ ಎಂಬ ಆಶಯವನ್ನು ಸಾಹೇ ವಿವಿ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರ ಅವರು ಹೊಂದಿದ್ದಾರೆ. ಈ ಹಿನ್ನೆಯಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿಯನ್ನು ನಡೆಸಲು ಮುಕ್ತಮನಸ್ಸಿನಿಂದ ಮುಂದಾಗಿದ್ದಾರೆ ಎಂದು ಡಾ.ಕೆ.ಬಿ.ಲಿಂಗೇಗೌಡ ಅವರು ಹೇಳಿದರು.

 

 

 

ಕ್ರಿಕೆಟ್, ಫುಟ್‌ಬಾಲ್, ಹಾಕಿ, ಬಾಸ್ಕೆಟ್‌ಬಾಲ್, ಥ್ರೋ ಬಾಲ್, ಶಟಲ್ ಬ್ಯಾಡ್ಮಿಂಟನ್, ಲಾನ್ ಟೆನಿಸ್, ಟೇಬಲ್ ಟೆನಿಸ್, ಈಜು, ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್ ಮತ್ತು ಇತರ ಕ್ರೀಡೆಗಳಲ್ಲಿ ಸ್ಪರ್ಧಾತ್ಮಕ ತಂಡಗಳನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ, ಸಾಹೇ ವಿಶ್ವವಿದ್ಯಾಲಯವು ಕ್ರೀಡಾಪಟುಗಳಿಗೆ ತಮ್ಮ ಕ್ರೀಡಾ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಸಹಾಯ ಮಾಡಲು ಸಂಪೂರ್ಣ ಬೆಂಬಲವನ್ನು ಡಾ.ಜಿ.ಪರಮೇಶ್ವರ ಅವರು ನೀಡುತ್ತಿದ್ದಾರೆಂದು ಅವರು ನುಡಿದರು.

 

 

 

ಪ್ರಸ್ತುತ 80 ಕ್ಕೂ ಹೆಚ್ಚು ದೇಶಗಳಲ್ಲಿ 20 ಮಿಲಿಯನ್ ಜನರು ನೆಟ್‌ಬಾಲ್ ಆಡುತ್ತಿದ್ದಾರೆ, ೭೪ ರಾಷ್ಟ್ರೀಯ ನೆಟ್‌ಬಾಲ್ ಸಂಘಗಳು ವಿಶ್ವಾದ್ಯಂತ ಆಡಳಿತ ಮಂಡಳಿಯೊಂದಿಗೆ ಸಂಯೋಜಿತವಾಗಿವೆ. ಈಗ ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ನೆಟ್‌ಬಾಲ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಈ ಬಾರಿ ರಾಜ್ಯದಲ್ಲಿ ಅದರಲ್ಲೂ ತುಮಕೂರಿನಲ್ಲಿ (ಎರಡನೇ ಹಂತದ ನಗರ)ರಾಷ್ಟ್ರಮಟ್ಟದ ಕ್ರೀಡೆಯನ್ನು ಆಯೋಜಿಸುತಿರುವುದು, ರಾಷ್ಟ್ರಮಟ್ಟದಲ್ಲಿ ತುಮಕೂರು ಮತ್ತೊಮ್ಮೆ ಗುರುತಿಸಿಕೊಳ್ಳಲು ಸಿಗುತ್ತಿರುವ ಅವಕಾಶ ಮತ್ತು ಹೆಮ್ಮೆ ಸಂಗತಿ ಎಂದು ಡಾ.ಕೆ.ಬಿ.ಲಿಂಗೇಗೌಡ ಅವರು ಹೇಳಿದರು.

 

 

 

ಸ್ವಂತ ಕ್ರೀಡಾಂಗಣ ಸಜ್ಜು:
ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಶಾಲ ಕ್ರೀಡಾಂಗಣದಲ್ಲಿ 6 ಕೋರ್ಟ್‌ಗಳನ್ನು ನಿರ್ಮಿಸಲಾಗಿದೆ. ಆಧುನಿಕ ವ್ಯವಸ್ಥೆಗಳನ್ನು ಇಲ್ಲಿ ಕಲ್ಪಿಸಲಾಗಿದೆ. ನೆಟ್ ಬಾಲ್ ತರಬೇತಿದಾರರು ಮತ್ತು ವಿವಿಧ ವಿಶ್ವವಿದ್ಯಾಲಯ ಕ್ರೀಡಾ ತಜ್ಞರ ತಂಡ ಈಗಾಗಲೆ ಟೂರ್ನಿ ನಡೆಯುವ ಮೈದಾನದಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಾರ್ಚಿ 12 ರಂದು ಕ್ರೀಡಾಕೂಟ ಉದ್ಘಾಟನೆಗೊಂಡ ನಂತರದ ನಾಕ್‌ಔಟ್ ಹಂತದಿಂದ ಲೀಗ್ ಹಂತದ ತನಕ ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 6.30ರ ತನಕ ಮ್ಯಾಚ್ ಗಳನ್ನು ನಡೆಸಲಾಗುತ್ತದೆ. ಈಗಾಗಲೇ ಇದಕ್ಕೆ ಬೇಕಾದ ಮಾರ್ಗಸೂಚಿಗಳನ್ನು ಸಿದ್ದಪಡಿಸಿ, ಸಂಬಂಧಪಟ್ಟ ತಂಡಗಳಿಗೆ ವಿತರಿಸಲಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ.ಶಿಶಿಕುಮಾರ್ ವಿವರಿಸಿದರು.

 

 

ವಸತಿ ಸೌಲಭ್ಯ:
ಕ್ರೀಡಾ ಪಟುಗಳು ಮತ್ತು ಕೋಚ್‌ಗಳು ಉಳಿದುಕೊಳ್ಳಲು ನಗರದ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಮತ್ತು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಸೂಕ್ತ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಖಾಸಗಿ ಹೋಟಲ್‌ಗಳಲ್ಲಿಯೂ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ನಿರ್ವಹಣೆಗಾಗಿ ಸಮಿತಿಯೊದನ್ನು ರಚಿಸಿ, ನಿಗಾ ವಹಿಸಲು ಕ್ರಮಕೈಗೊಳ್ಳಲಾಗಿದೆ.

 

 

ಸಾರಿಗೆ:
ಆಟಗಾರರು ಉಳಿದುಕೊಂಡಿರುವ ಜಾಗದಿಂದ ಟೂರ್ನಿ ನಡೆಯುವ ಕ್ರೀಡಾಂಗಣಕ್ಕೆ ಕರೆದೊಯ್ಯಲು ಸಿದ್ದಾರ್ಥ ಸಂಸ್ಥೆಯ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

 

 

ಉಚಿತ ಊಟದ ವ್ಯವ್ಯಸ್ಥೆ:
ದೇಶದ ವಿವಿಧ ಭಾಗಗಳಿಂದ ಬಂದಿರುವ ಕ್ರೀಡಾಪಟುಗಳ ಅನುಕೂಲವಾಗುವಂತೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಕ್ರೀಡಾಪಟುಗಳಿಗೆ ಮಾಡಲಾಗಿದೆ. ಆದರೆ ಬೇರೆ ಕಡೆಗಳಲ್ಲಿ ಕ್ರೀಡಾಪಟುಗಳು ಊಟಕ್ಕೆ ಶುಲ್ಕ ಕಟ್ಟುವ ವ್ಯವಸ್ಥೆ ಇದೆ. ಆದರೆ ಸಾಹೇ ವಿವಿ ಇದರಿಂದ ಹೊರಲಾಗಿದೆ ಎಂದು ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ.ಶಿಶಿಕುಮಾರ್ ಅವರು ನುಡಿದರು.

 

 

 

ಜಿಲ್ಲೆಯ ಸಾಂಸ್ಕೃತಿಕ ಮೆರಗಿನ ವೈಭವ:
ದೇಶದ ವಿವಿಧ ಭಾಗಗಳಿಂದ ಬರುವ ಕ್ರೀಡಾಪಟುಗಳಿಗೆ ಮತ್ತು ಅವರ ತಂಡಕ್ಕೆ ತುಮಕೂರು ಜಿಲ್ಲೆಯ ಇತಿಹಾಸ, ಕಲೆ, ಸಾಹಿತ್ಯ ಪರಿಚಯಿಸುವ ದೃಷ್ಠಿಯಿಂದ ಜನಪದ ಕಲಾಪ್ರಕಾರಗಳ ಪ್ರದರ್ಶನವನ್ನು ಮಾರ್ಚಿ 13 ರಂದು ಸಂಜೆ ಹಮ್ಮಿಕೊಳ್ಳಲಾಗಿದೆ. ಸಾಹೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜು ತಂಡಗಳ ಜೊತೆಗೆ ತುಮಕೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವ ಕಲಾ ತಂಡಗಳು ಪ್ರದರ್ಶನ ನೀಡಲಿವೆ ಎಂದು ಸಾಹೇ ವಿಶ್ವವಿದ್ಯಾಲಯ ಸಹಾಯಕ ಕುಲಸಚಿವರಾದ ಡಾ. ಆರ್. ಪ್ರಕಾಶ್ ವಿವರಿಸಿದರು.

 

 

 

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ್, ಎಸ್‌ಎಸ್‌ಐಟಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರುದ್ರೇಶ್, ಕ್ರೀಡಾ ತರಬೇತುದಾರರಾದ ದಿವಾಕರ್, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್ ಅವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!