ತುಮಕೂರು : ದಕ್ಷಿಣ ಕನ್ನಡ / ಬೆಳ್ತಂಗಡಿ ಮೂಲದ ಮೂವರನ್ನು ತುಮಕೂರಿನಲ್ಲಿ ಕೊಲೆಗೈದು ಕಾರಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಕೋರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಎಂದು ಹೇಳಲಾಗಿ ಮತ್ತು ಇನ್ನಿತರೆ 5 ಜನರನ್ನು ಕೋರಾ ಪೊಲೀಸರು ಮಾ.22 ರಂದು (ಪ್ರಕರಣ ಬೆಳಕಿಗೆ ಬಂದ ದಿನವೇ) ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
12 ದಿನಗಳ ಹಿಂದೆ ದಕ್ಷಿಣ ಕನ್ನಡದ ಮೂಲಕ ರಫೀಕ್ ಎಂಬವವರ ಮಾಲೀಕತ್ವದ ಮಾರುತಿ ಸುಜುಕಿ ಎಸ್ ಪ್ರೆಸ್ಸೊ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್ (45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ (56), ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ತುಮಕೂರಿಗೆ ಬಂದಿದ್ದರು ಎನ್ನಲಾಗಿದೆ.
ಈ ಮೂವರು ನಕಲಿ ಚಿನ್ನ ಮಾರಾಟ ದಂಧೆಯ ಆಸೆಗೆ ಬಲಿಯಾದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ‘ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ, ಕಡಿಮೆ ಬೆಲೆಗೆ ಚಿನ್ನವನ್ನು ನೀಡುತ್ತೇವೆ’ ಎಂದು ಸುಳ್ಳು ಹೇಳಿ ಆರೋಪಿಗಳು ಈ ಮೂವರ ಬಳಿ ಹಣ ದೋಚುವ ಪ್ಲಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು ಈ ಕುರಿತಂತೆ ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಮೂವರ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿ ಬಳಿಕ ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.
ಈ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದಲ್ಲದೇ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಕೈಗೊಂಡಿದ್ದು ಬೆಳ್ತಂಗಡಿ ಇಂದ ತುಮಕೂರಿಗೆ ಬಂದು ಕಾರು ಹಾದು ಹೋಗಿರುವ ಎಲ್ಲಾ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಅಲರ್ಟ್ ಆಗಿರುವ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಅಶೋಕ್ ಕೆ ವಿ ಹಾಗೂ ಐ.ಜಿ ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬೆಳಕಿಗೆ ಬಂದ ಕೆಲವೇ ಕೆಲವು ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ ಸಂಗತಿ