ತುಮಕೂರು ಲೋಕಸಭಾ ಕ್ಷೇತ್ರದಿಂದ ಹೆಚ್.ಡಿ.ಕುಮಾರಸ್ವಾಮಿ ಅಖಾಢಕ್ಕೆ ಇಳಿಯುವಂತೆ ಕಾರ್ಯಕರ್ತರಿಂದ ಒತ್ತಾಯ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದಲ್ಲಿಯೇ ಉಳಿಸಿಕೊಂಡು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅಥವಾ ಪಕ್ಷದಿಂದ ಸ್ಪರ್ಧಿಸಲು ಇಚ್ಚಿಸುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಬೇಕೆಂಬುದು ಇಂದು ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯ ಒಕ್ಕೊರಲ ನಿರ್ಣಯವಾಗಿದೆ ಎಂದು ಜೆಡಿಎಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

 

 

 

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಜೆಡಿಎಸ್ ಪಕ್ಷದ ಅಸ್ಥಿತ್ವದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಟರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ 2019ರ ಲೋಕಸಭಾ ಚುನಾವಣೆ ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಶೇಕಡವಾರು ಮತಗಳನ್ನು ಪಡೆದಿರುವ ಕಾರಣ, ಕ್ಷೇತ್ರವನ್ನು ಜೆಡಿಎಸ್ ಪಕ್ಷದಲ್ಲಿಯೇ ಉಳಿಸಿಕೊಂಡು, ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಆಕಾಂಕ್ಷಿಗಳಿಗೆ ನೀಡಬೇಕೆಂಬ ಸಲಹೆಯನ್ನು ಪಕ್ಷದ ಮುಖಂಡರು ತಿಳಿಸಿದ್ದಾರೆ. ಮೈತ್ರಿ  ಸಂಬಂಧ ನಮ್ಮ ಪಕ್ಷಕ್ಕೆ ಬಿಟ್ಟು ಬಿಜೆಪಿಗೆ ಬದಲಾದರೂ ಪಕ್ಷದ ತಿರ್ಮಾನಕ್ಕೆ ನಾವುಗಳು ಬದ್ದರಾಗುವ ಭರವಸೆಯನ್ನು ಹೊರಹಾಕಿದ್ದಾರೆಂದು ತಿಳಿಸಿದರು.

 

 

ತುಮಕೂರು ಲೋಕಸಭಾ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಶಾಸಕ ಸಿ.ಬಿ.ಸುರೇಶಬಾಬು ಮಾತನಾಡಿ, ಇಂದಿನ ಸಭೆಯ ತೀರ್ಮಾನದಂತೆ ಜೆಡಿಎಸ್ ಅಭ್ಯರ್ಥಿ ಇಲ್ಲವೇ, ಎರಡು ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೆಂಬುದು ಆಶಯವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಲೋಕಸಭಾ ಚುನಾವಣೆಯ ಉಸ್ತುವಾರಿ ಹೊತ್ತಿರುವ ಬಿಜೆಪಿ ಮಾಜಿ ಸಚಿವ ಗೋಪಾಲಯ್ಯ ಅವರೊಂದಿಗೆ ಕುಳಿತು ಚರ್ಚೆ ಮಾಡಿ, ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಗುವುದು. ನಮ್ಮಲ್ಲಿ ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ತಿಪಟೂರಿನ ಶಾಂತಕುಮಾರ್, ಮಾಜಿ ಐಪಿಎಸ್ ಅಧಿಕಾರಿ ಜೋತಿ ಪ್ರಕಾಶ್ ಮಿರ್ಜಿ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ ಒಂದು ವೇಳೆ ಪಕ್ಷ ತೀರ್ಮಾನಿಸಿದರೆ ನಾನು ಸಹ ಸ್ಪರ್ಧೆಗೆ ಸಿದ್ದನಿದ್ದೇನೆ ಎಂದು ಸುರೇಶಬಾಬು ತಿಳಿಸಿದರು.

 

 

ಕಳೆದ ವಿಧಾನಸಭಾ ಚುನಾವಣೆ ವೇಳೆ ಎಸ್.ಆರ್.ಶ್ರೀನಿವಾಸ್ ಮತ್ತು ಚುನಾವಣೆ ನಂತರ ಡಿ.ಸಿ.ಗೌರಿಶಂಕರ್ ಅವರುಗಳು ಪಕ್ಷ ಬಿಟ್ಟಿದ್ದಾರೆ. ಆದರೆ ಕಾರ್ಯಕರ್ತರು ಪಕ್ಷ ತೊರೆದಿಲ್ಲ. ನಮ್ಮದು ಕಾರ್ಯಕರ್ತರ ಪಕ್ಷ ಇಂತಹ ಹತ್ತಾರು ನಾಯಕರನ್ನು ಹುಟ್ಟು ಹಾಕುವ ಶಕ್ತಿ ಹೊಂದಿದ್ದಾರೆ. ಬಿಜೆಪಿಯಿಂದ ಜೆ.ಸಿ.ಮಾಧುಸ್ವಾಮಿಗೆ ಟಿಕೇಟ್ ನೀಡದರೆ ಅವರ ಪರವಾಗಿ ಕೆಲಸ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನ ಬೇಡ ಒಂದು ವೇಳೆ ಜೆಡಿಎಸ್ ಪಕ್ಷಕ್ಕೆ ಅವಕಾಶ ಸಿಕ್ಕರೆ ಮಾಧುಸ್ವಾಮಿ ಸಹ ನಮ್ಮ ಪರವಾಗಿ ಕೆಲಸ ಮಾಡಲಿದ್ದಾರೆ ಮೈತ್ರಿ ಧರ್ಮ ಪಾಲಿಸುವುದು ಇಬ್ಬರಿಗು ಅನಿವಾರ್ಯ ಎಂದರು.

 

 

 

ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ಮಾತನಾಡಿ ಜೆಡಿಎಸ್ ಪಕ್ಷದಿಂದ ಈಗಾಗಲೇ ಲೋಕಸಭಾ ಚುನಾವಣೆಯ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿ ನೇಮಿಸಲಾಗಿದೆ. ಅಲ್ಲದೆ ಕ್ಷೇತ್ರದ ಉಸ್ತುವಾರಿಗಳಾಗಿ ಶಾಸಕರಾದ ಸಿ.ಬಿ.ಸುರೇಶಬಾಬು ಅಧ್ಯಕ್ಷತೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಸುರೇಶಬಾಬು ಹಾಗು ಜಿಲ್ಲಾಧ್ಯಕ್ಷನಾದ ನಾನು ಸಹ ಇದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರು, ಮುಖಂಡ ಸಭೆ ಕರೆದು ಚರ್ಚೆ ನಡೆಸಿ, ಮೈತ್ರಿಯ ಅನಿವಾರ್ಯತೆ ಮತ್ತು ನಮ್ಮ ಗುರಿ ಎರಡನ್ನು ತಿಳಿಸಿ, ನಮ್ಮ ವರಿಷ್ಠರ ಸೋಲಿಗೆ ಕಾರಣರಾದವರನ್ನು ಸೋಲಿಸಲು ಮುಖಂಡರ ಜೊತೆಗೆ ಕಾರ್ಯಕರ್ತರು ಒಂದಾಗಿ ಕೆಲಸ ಮಾಡುವಂತೆ ಮನವೊಲಿಸಲಿದ್ದೇವೆ ಎಂದರು.

 

 

ತಿಪಟೂರಿನ ಕೆ.ಟಿ.ಶಾಂತಕುಮಾರ್ ಮಾತನಾಡಿ, ಪಕ್ಷದ ಮುಖಂಡರ ತೀರ್ಮಾನದಂತೆ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುವುದು. ಹೆಚ್.ಡಿ.ಕುಮಾರಸ್ವಾಮಿ ಒಪ್ಪಿದರೆ ಅವರೇ ಸ್ಪರ್ಧಿಸಲಿದ್ದಾರೆ. ಇಲ್ಲವೇ ಪಕ್ಷಕ್ಕಾಗಿ ದುಡಿದಿರುವ ನನಗೆ ಟಿಕೇಟ್ ನೀಡಬೇಕೆಂಬ ಮನವಿಯನ್ನು ಹೈಕಮಾಂಡ್ ಮುಂದೆ ಇಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಕೊಂಡವಾಡಿ ಚಂದ್ರಶೇಖರ್, ಸುಧಾಕರಲಾಲ್, ಗೋವಿಂದರಾಜು, ಜೋತಿಪ್ರಕಾಶ್ ಮಿರ್ಜಿ, ಸೋಲಾರ್ ಕೃಷ್ಣಮೂರ್ತಿ, ಟಿ.ಆರ್.ನಾಗರಾಜು, ವಿಜಯಗೌಡ, ಉಗ್ರೇಶ್, ಎಸ್.ಆರ್.ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!