ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಗಾಗಿ ಪ್ರತೀ ವಿದ್ಯಾರ್ಥಿಗಳಿಂದ 50ರೂ ಸಂಗ್ರಹಿಸಲು ಸರ್ಕಾರ ಮುಂದಾಗಿದ್ದು, ಸರ್ಕಾರದ ಈ ನಡೆಯ ವಿರುದ್ಧ ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರವನ್ನು ಬರೆದಿದ್ದು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಸಂಗ್ರಹಿಸಬಾರದು ಹಾಗೂ ತಾವು ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರ ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಂದ 50 ಶುಲ್ಕ ವಸೂಲಿ ಮಾಡಲು ಮುಂದಾಗಿದ್ದು, ಇದು ವಿದ್ಯಾರ್ಥಿಗಳ ಮೂಲಭೂತ ಶಿಕ್ಷಣ ಹಕ್ಕಿನ ಹರಣವಾಗುತ್ತದೆ. ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿ ಉತ್ತಮ ಮೂಲಭೂತ ಸೌಕರ್ಯ ಒದಗಿಸುವ ಬದಲು ವಿದ್ಯಾರ್ಥಿಗಳಿಂದ ಪೂರ್ವ ಸಿದ್ಧತಾ ಪರೀಕ್ಷೆಗಾಗಿ ಶುಲ್ಕ ವಸೂಲಿ ಮಾಡುವುದು ಎಷ್ಟರಮಟ್ಟಿಗೆ ಸರಿ? ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಆ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲು ಕಷ್ಟವಾಗಿದ್ದು ಇದು ಬಡವರ ಶೋಷಣೆ ಮಾಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ಬಾರಿಯೂ ಇದೇ ರೀತಿಯಾದ ಆದೇಶ ಹೊರಡಿಸಿದ್ದು ಅದಕ್ಕೆ ಶಿಕ್ಷಣ ಸಂಘಟನೆಗಳು ಹಾಗೂ ಪೋಷಕರು ವಿರೋಧವನ್ನು ವ್ಯಕ್ತಪಡಿಸಿದ್ದರು. ಈ ಬಾರಿಯೂ ಸಹ ಇದೇ ರೀತಿಯಾದ ಆದೇಶ ಹೊರಬಂದಿರುವುದು ಶಿಕ್ಷಣ ಕ್ಷೇತ್ರದಲ್ಲಿ ಆತಂಕಕಾರಿಯಾದ ಬೆಳವಣಿಗೆಯಾಗಿದ್ದು, ಶಿಕ್ಷಣ ಸಚಿವರು ಈ ರೀತಿಯಾದ ವ್ಯಾಪಾರಿ ಸಂಸ್ಕೃತಿಗೆ ಬ್ರೇಕ್ ಹಾಕಬೇಕು ಹಾಗೂ ನೀಡಿರುವ ಆದೇಶವನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸಿದರು.