ತಿಪಟೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುತ್ತೇನೆ ಎಂದು ರೂಪ್ಸಾ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದರು.
ಅವರು ತಿಪಟೂರು ನಗರದ ಖಾಸಗೀ ಹೋಟೆಲ್’ನಲ್ಲಿ ಆಯೋಜಿಸಲಾಗಿದ್ದ ತಿಪಟೂರು ತಾಲ್ಲೋಕು ಗುರುವೃಂದದವರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವಲ್ಲಿ ಶಿಕ್ಷಕರಿಂದಲೇ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರುಗಳು ವಿಫಲರಾಗಿದ್ದು, ಮತ ನೀಡಿದ ಶಿಕ್ಷಕರಿಗೆ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರೂಪ್ಸಾ ಕರ್ನಾಟಕ ನಿರಂತರ ಹೋರಾಡುತ್ತಾ ಬಂದಿದ್ದು, ಈ ಬಾರಿ ತಮ್ಮನ್ನು ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಶಿಕ್ಷಣ ಸಂಸ್ಥೆಗಳು ಮುಖ್ಯಸ್ಥರು ಹಾಗೂ ಶಿಕ್ಷಕರ ಸಂಘಟನೆಗೇ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಆಯ್ಕೆಯಾಗಬೇಕೆಂಬ ಒತ್ತಡ ತಂದ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಯಾವ ಪಕ್ಷದೊಂದಿಗೆ ಹೋಗದೆ ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಧಾರ ಮಾಡಿ ಕ್ಷೇತ್ರದಾದ್ಯಂತ ಪ್ರವಾಸ ಮಾಡುತ್ತಿದ್ದು, ಹೋದಲ್ಲೆಲ್ಲಾ ಶಿಕ್ಷಕರು ಉಪನ್ಯಾಸಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಮ್ಮ ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕೇಶ್ ತಾಳಿಕಟ್ಟೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಹಾಗೂ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳೇ ನನಗೆ ಹೈ ಕಮಾಂಡ್ ಆಗಿದ್ದು, ಪಕ್ಷಗಳಿಗೆ ಹೋದರೆ ಆವರ ಅಣತಿಯಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಶೈಕ್ಷಣಿಕ ಸಮಸ್ಯೆಗಳು ಬೆಟ್ಟದಷ್ಟಿದ್ದು, ಅವುಗಳನ್ನು ನಿವಾರಿಬೇಕಾದರೆ ಪಕ್ಷೇತರವಾಗಿಯೇ ಹೋರಾಟ ನಡೆಸಬೇಕು. ಇನ್ನು ನಾನು ಕಣದಿಂದ ಹಿಂದೆ ಸರಿಯುತ್ತೇನೆ, ಅಥವಾ ಮತ್ತೊಬ್ಬರಿಗೆ ಸಹಾಯ ಮಾಡುತ್ತೇನೆಂಬ ಆರೋಪವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದು, ಅವು ಸತ್ಯಕ್ಕೆ ದೂರವಾದುದ್ದಾಗಿದ್ದು ಎಂದು ಸ್ಪಷ್ಟಪಡಿಸಿದರು.