ತುಮಕೂರು : ನಗರದ ಶ್ರೀರಾಮನಗರದ ಸರ್ಕಾರಿ ಪ್ರಾಯೋಗಿಕ ಪಾಠಶಾಲೆಯಲ್ಲಿ ಇಂದು ಮಕ್ಕಳಿಂದ ಆಯೋಜಿಸಲಾಗಿದ್ದ ಮಕ್ಕಳ ಸಂತೆ ಕಾರ್ಯಕ್ರಮವು ಜನರ ಮನ್ನಣೆಗಳಿಸಿದ್ದು ಎಲ್ಲರಿಂದಲೂ ಪ್ರಂಶಸೆಗೆ ಪಾತ್ರವಾಗಿದೆ.
ಮಕ್ಕಳೇ ಸ್ವತಃ ತರಕಾರಿ, ಹಣ್ಣು, ಸೊಪ್ಪುಗಳನ್ನು ತಂದೆ ಅವರ ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ಹಳ್ಳಿಯ ಸೊಬಗನ್ನು ನಾಚುವಂತೆ ಮಾಡಿದರು. ಮಕ್ಕಳ ಸಂತೆ ಆಯೋಜನೆಗೆ ಶಾಲೆಯ ಶಿಕ್ಷಕರ ಪಾತ್ರ ಮಹತ್ತರವಾದದ್ದು ಏಕೆಂದರೆ ಮಕ್ಕಳಿಗೆ ವ್ಯಾಪಾರ ಮಾಡುವ ಹಾಗೂ ಜನರೊಂದಿಗೆ ಬೆರೆಯುವ ಕೌಶಲ್ಯವನ್ನು ಕಲಿಸಿಕೊಟ್ಟಿದ್ದು ಜೀವನ ಶೈಲಿಯನ್ನು ಕಲಿಸುವಂತಿತ್ತು.
ವಿದ್ಯಾರ್ಥಿಗಳು ಹಣ್ಣು, ತರಕಾರಿ, ದ್ವಿದಳ ಧಾನ್ಯಗಳು, ಚುರುಮುರಿ, ಕಾಫೀ, ಟೀ ಇತ್ಯಾದಿಗಳನ್ನು ಮಾರಾಟ ಮಾಡುವುದರ ಮೂಲಕ ವ್ಯವಹಾರಿಕ ಶಿಕ್ಷಣವನ್ನು ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಷೀರ್ ಅಹಮ್ಮದ್ ಶಾಲೆಯಲ್ಲಿ ಈ ರೀತಿಯಾದ ಮೇಳಗಳನ್ನು ಪ್ರತೀ ವರ್ಷ ಆಯೋಜಿಸಬೇಕು. ಮಕ್ಕಳಲ್ಲಿ ಪರಿಪೂರ್ಣ ಬೆಳವಣಿಗೆ ಆಗಬೇಕಾದರೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಕಲಿಸಿಕೊಡಬೇಕು, ಹಾಗಾದಾಗ ಮಾತ್ರ ಶಿಕ್ಷಣದ ಗುರಿ ಮತ್ತು ಉದ್ದೇಶ ಈಡೇರುತ್ತದೆ, ಈ ನಿಟ್ಟಿನಲ್ಲಿ ಸರ್ಕಾರಿ ಪ್ರಾಯೋಗಿಕ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕ ವೃಂದ, ಪೋಷಕರು ಬಹು ಮುಖ್ಯವಾಗಿ ವಿದ್ಯಾರ್ಥಿಗಳ ಸಹಕಾರದಿಂದ ಮಕ್ಕಳ ಸಂತೆಯನ್ನು ಏರ್ಪಡಿಸುವುದರ ಮೂಲಕ ಸಮಾಜಕ್ಕೆ ಹೊಸ ಸಂದೇಶವನ್ನು ಇಂದು ನೀಡಿರುವುದು ಸಂತೋಷಕರ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆ ಮುಖ್ಯ ಶಿಕ್ಷಕರಾದ ರಂಗನಾಥ್, ಎಸ್.ಡಿ.ಎಂ.ಸಿ ಸದಸ್ಯರುಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.