ತುಮಕೂರು : ಜಿಲ್ಲಾ ಬಿಜೆಪಿ ವತಿಯಿಂದ ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು. ನೆನ್ನೆ ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆ ನಡೆದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ನಾಸೀರ್ ಹುಸೇನ್ ಗೆದ್ದಂತಹ ಸಂದರ್ಭದಲ್ಲಿ ಅವರ ಬೆಂಬಲಿಗರೊಬ್ಬರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ದೇಶ ದ್ರೋಹ ಕೆಲಸ ಮಾಡಿದ್ದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಈ ಕುರಿತು ಭಾರೀ ಆಕ್ರೋಷ ವ್ಯಕ್ತವಾಗಿತ್ತು.
ಇದರ ಬೆನ್ನ ಹಿನ್ನಲೆಯಲ್ಲಿಯೇ ಇಂದು ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಿ ತಮ್ಮ ಆಕ್ರೋಷವನ್ನು ಹೊರ ಹಾಕಿದರು. ಈ ಸಂದರ್ಭದಲ್ಲಿ ತುಮಕೂರು ಸಂಸದರಾದ ಜಿ.ಎಸ್.ಬಸವರಾಜುರವರು ಮಾತನಾಡಿ ನಮ್ಮ ಪ್ರಜಾಪ್ರಭುತ್ವದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ನಮ್ಮ ಶತೃ ರಾಷ್ಟ್ರವಾದ ಪಾಕಿಸ್ತಾನವನ್ನು ಹೊಗಳುವ ಕೆಲಸಕ್ಕೆ ಮುಂದಾಗಿರುವುದು ಶೋಚನೀಯ ಸಂಗತಿ, ಆದ ಪ್ರಯುಕ್ತ ನಾವು ಇಂದು ಪ್ರತಿಭಟನೆಯನ್ನು ಮಾಡುತ್ತಿದ್ದೇವೆ, ನಮ್ಮ ಮನೆಯಲ್ಲಿಯೇ ದೇಶ ದ್ರೋಹಿಗಳನ್ನು ಇಟ್ಟುಕೊಂಡ ಪ್ರಯತ್ನವೇ ಈ ರೀತಿಯಾಗಿ ನಡೆದಿದೆ, ಇಂತಹವರಿಂದಲೇ ನಮ್ಮ ದೇಶದಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತಿರುವುದು ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು ಅಲ್ಲದೇ ಇಂತಹವರನ್ನು ಕೂಡಲೇ ಬಂಧಿಸಿ ಕಾನೂನು ರೀತ್ಯ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರಲ್ಲದೇ, ಕ್ರಮ ವಹಿಸದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು, ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಛೇರಿಗೆ ಮುತ್ತಿಗೆ ಹಾಕಲು ಮುಂದಾದ ಸಂದರ್ಭದಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಮುಂದಾದಂತಹ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಚಂದ್ರಶೇಖರ್ ಅವರಿಗೆ ತೀವ್ರ ಗಾಯ ಸಹ ಆಯಿತು. ನಂತರ ಡಿವೈಎಸ್ಪಿ ಚಂದ್ರಶೇಖರ್ ಮತ್ತು ಸಂಸದರಾದ ಬಸವರಾಜು ಅವರೊಂದಿಗೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಸಿದರು, ಇದೇ ವೇಳೆ ಜೊತೆಗೆ ಬಿಜೆಪಿ ಪಕ್ಷದ ಜಿ.ಎಸ್.ಬಸವರಾಜು, ಎಸ್.ಪಿ.ಚಿದಾನಂದ್, ಸದಾಶಿವಯ್ಯ, ಹನುಮಂತರಾಯಪ್ಪ ಸೇರಿದಂತೆ ಹಲವಾರು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿಯನ್ನು ಕೈ ಮೀರುವುದನ್ನು ತಡೆಗಟ್ಟಿದರು.