ಲೋಕೇಶ್ ತಾಳಿಕಟ್ಟೆಗೆ ಬೆಂಬಲ ಘೋಷಿಸಿದ ಖಾಸಗಿ ಶಾಲಾ ಶಿಕ್ಷಕರು
ಮುಂಬರುವ ಆಗ್ನೇಯ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ರೂಪ್ಸ ಕರ್ನಾಟಕದ ರಾಜ್ಯಾಧ್ಯಕ್ಷರು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಲೋಕೇಶ್ ತಾಳಿಕಟ್ಟೆಯವರಿಗೆ ತುಮಕೂರು ಜಿಲ್ಲಾ ಖಾಸಗಿ ಶಾಲಾ ಶಿಕ್ಷಕರ ಸಂಘ ಬೆಂಬಲ ಘೋಷಿಸಿತು.
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಂಡ ಶಿಕ್ಷಕರ ಸಂಘದ ಪ್ರತಿನಿಧಿಗಳು ಹಾಗೂ ಶಿಕ್ಷಕರು ಮುಂದಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶೈಕ್ಷಣಿಕ ಹಿನ್ನೆಲೆಯುಳ್ಳ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಲೋಕೇಶ್ ತಾಳಿಕಟ್ಟೆಯವರಿಗೆ ಬೆಂಬಲ ನೀಡಿ ಅವರ ಪರ ಕಾರ್ಯನಿರ್ವಹಿಸಲು ತೀರ್ಮಾನ ತೆಗೆದುಕೊಂಡರು.
ಈ ವೇಳೆ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಖಾಸಗಿ ಶಾಲಾ ಮುಖ್ಯ ಶಿಕ್ಷಕರ ಹಾಗೂ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಭೂತರಾಜು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ತಾಂಡವಡುತ್ತಿದ್ದು, ಸಮಸ್ಯೆಗಳು ಪರಿಹಾರವಾಗದೆ ಹಾಗೆಯೇ ಉಳಿದಿವೆ. ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಾಗೂ ಶಿಕ್ಷಣ ನೀಡುವ ಶಿಕ್ಷಕರು ಸಹ ನೆಮ್ಮದಿಯಿಂದ ಕಾರ್ಯನಿರ್ವಹಿಸಬೇಕಾದರೆ ವಿಧಾನ ಪರಿಷತ್’ನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಪಾತ್ರ ಮಹತ್ವವಾದಾಗಿದ್ದು ಈ ನಿಟ್ಟಿನಲ್ಲಿ ಲೋಕೇಶ್ ತಾಳಿಕಟ್ಟೆ ಸೂಕ್ತ ವ್ಯಕ್ತಿ ಎಂದು ತೀರ್ಮಾನಿಸಿ ಅವರಿಗೆ ಶಿಕ್ಷಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಶಿಕ್ಷಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಲೋಕೇಶ್ ತಾಳಿಕಟ್ಟೆ ಶಿಕ್ಷಕರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಎಂದಿಗೂ ಸಹ ಹುಸಿ ಮಾಡದೆ ಶಿಕ್ಷಣ ಮತ್ತು ಶಿಕ್ಷಕರಿಗಾಗಿಯೇ ನಿರಂತರ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು. ಇನ್ನು ಸಭೆಯಲ್ಲಿ ನೂರಾರು ಮಂದಿ ಖಾಸಗಿ ಶಾಲಾ ಶಿಕ್ಷಕ-ಶಿಕ್ಷಕಿಯರು ಹಾಜರಿದ್ದು ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಗೋವಿಂದರಾಜು,ಹಿರಿಯ ಶಿಕ್ಷಕರಾದ ಮಂಜುನಾಥ ಶರ್ಮ, ನಿ.ಶಿಕ್ಷಕ ರೇಣುಕಯ್ಯ, ಜಿಲ್ಲಾ ಖಾಸಗಿ ಶಾಲೆ ಮುಖ್ಯ ಶಿಕ್ಷಕರ ಹಾಗೂ ಸಹ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಂ.ಎ. ನಟರಾಜು, ಅಧ್ಯಕ್ಷರಾದ ಭೂತರಾಜು ಪ್ರಧಾನ ಕಾರ್ಯದರ್ಶಿ ಎಂ.ಕೆ.ರಂಗನಾಥ, ಅಣ್ಣ ಸ್ವಾಮಿ ಪ್ರವೀಣ್ ಕುಮಾರ್ ತಿಪ್ಪೇಸ್ವಾಮಿ ಕೃಷ್ಣಮೂರ್ತಿ ಡಾನ್ ಬಾಸ್ಕೋ ನಟರಾಜ್, ಕುಸುಮ ಛಾಯಾದೇವಿ ಉಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು