ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಸೇರಿದಂತೆ ಅನುದಾನಿತ ಶಾಲೆಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧಹೋರಾಟದ ರೂಪುರೇಷೆ ರೂಪಿಸಲು ಜ.12ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ರೂಪ್ಸ ಕರ್ನಾಟಕ ಜಂಟಿಯಾಗಿ ಒಕ್ಕೂಟದ ಅಧ್ಯಕ್ಷರಾದ ವೈ.ಹೆಚ್.ಹುಚ್ಚಯ್ಯನವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಆಯೋಜಿಸಿದೆ ಎಂದು ರೂಪ್ಸ ಕರ್ನಾಟಕ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಅವರು ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ 2015ರಿಂದ ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ಹಾಗೂ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡದೇ ಇರುವ ಪರಿಣಾಮ ಇಂದು ರಾಜ್ಯದಾದ್ಯಂತ ಸಾವಿರಾರು ಅನುದಾನಿತ ಶಾಲೆಗಳು ಬಾಗಿಲು ಮುಚ್ಚಿವೆ. ಶಿಕ್ಷಕರ ನೇಮಕಾತಿ ಆಗದ ಕಾರಣ ಪೋಷಕರು ತಮ್ಮಮಕ್ಕಳನ್ನು ಶಾಲೆಗೆ ದಾಖಲಿಸುತ್ತಿಲ್ಲ. ಈ ದೆಸೆಯಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದ್ದು ಸರ್ಕಾರ ಕನಿಷ್ಟ ವಿದ್ಯಾರ್ಥಿಗಳ ನೀತಿಯಡಿ ಶಾಲೆಗಳನ್ನು ಮುಚ್ಚಿಸಿದೆ.
ಅನುದಾನಿತ ಶಾಲೆಗಳು ಸ್ವಾತಂತ್ರ್ಯ ಪೂರ್ವದಿಂದಲೂ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿದ್ದು, ಪ್ರಸ್ತುತ ಆ ಶಾಲೆಗಳು ಇತಿಹಾಸದ ಪುಟಗಳನ್ನು ಸೇರಿವೆ. ರಾಜ್ಯ ಉಚ್ಛ ನ್ಯಾಯಾಲಯ ಶೀಘ್ರವೇ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕ ಮಾಡಬೇಕು ಎಂಬ ಆದೇಶ ನೀಡಿದ್ದರೂ ಸರ್ಕಾರ ಇನ್ನೂ ಮೀನಾ ಮೇಷ ಎಣಿಸುತ್ತಿದೆ. ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ರೂಪ್ಸ ಕರ್ನಾಟಕ ಜಂಟಿ ಹೋರಾಟ ರೂಪಿಸುವ ಸಲುವಾಗಿ ಬೆಂಗಳೂರಿನ ಗಾಂಧಿಭವನದಲ್ಲಿ ಜನವರಿ 12ರಂದು ಮಹತ್ವದ ಸಭೆಯನ್ನು ಆಯೋಜಿಸಿದ್ದು, ಅಂದು ರಾಜ್ಯ ಸಂಘಟನೆಯ ಅಧ್ಯಕ್ಷರಾ ವೈ.ಹೆಚ್.ಹುಚ್ಚಯ್ಯ ಸೇರಿದಂತೆ ಅನುದಾನಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ರೂಪ್ಸ ಕರ್ನಾಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದು ಅನುದಾನಿತ ಶಾಲೆಗಳನ್ನು ಉಳಿಸಲು ಅತ್ಯಂತ ಗಟ್ಟಿಯಾದ ಹೋರಾಟ ಮಾಡುವ ನಿರ್ಣಯ ಮಾಡಲಾಗುವುದು ಎಂದು ತಿಳಿಸಿದರು.