ಮಕರ ಸಂಕ್ರಾಂತಿ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಇದರೊಂದಿಗೆ ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನನ್ನು ವಧಿಸಿದ್ದಳು ಎಂಬ ಕಥೆಯೂ ಇದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ. 2024 ರಲ್ಲಿ ಮಕರ ಸಂಕ್ರಾಂತಿಯು 15 ಜನವರಿ 2024, ಸೋಮವಾರದಂದು ಆಚರಿಸಲಾಗುವುದು. ಸಂಕ್ರಾಂತಿಯಂದು ಒಬ್ಬರಿಗೊಬ್ಬರು ಎಳ್ಳು-ಬೆಲ್ಲ (ಎಳ್ಳು ಬೆಲ್ಲದ ಜೊತೆ ಕಬ್ಬು, ಕೊಬ್ಬರಿ, ಕಡಲೆಬೀಜ, ಹುರಿಗಡಲೆ ಕೂಡ) ಹಂಚುತ್ತಾರೆ. ಇದು ಪ್ರೀತಿ ಮತ್ತು ಸೌಹಾರ್ದತೆ ಹೆಚ್ಚಿಸುವ ಹಬ್ಬವಾಗಿದೆ.
ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಸಾಧನೆಯ ದೃಷ್ಟಿಯಿಂದ ಮಕರ ಸಂಕ್ರಾಂತಿಯ ಮಹತ್ವ
ಈ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ.
ಮಕರ ಸಂಕ್ರಾಂತಿಯ ಪುಣ್ಯಕಾಲದಲ್ಲಿ ಇವನ್ನು ಮಾಡಿ !
ಯಥಾಶಕ್ತಿ ದಾನ ಮಾಡುವುದು : ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.
ಬಾಗಿನ ನೀಡುವುದು : ಬಾಗಿನ ನೀಡುವುದೆಂದರೆ ಇನ್ನೊಂದು ಜೀವದಲ್ಲಿರುವ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾ; ಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.
ತೀರ್ಥಸ್ನಾನವನ್ನು ಮಾಡುವುದು : ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗಾ, ಯಮುನಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವು ಲಭಿಸುತ್ತದೆ.
ಎಳ್ಳು ಮತ್ತು ಸಂಕ್ರಾಂತಿಯ ಸಂಬಂಧ : ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಎಳ್ಳು ಸತ್ತ್ವಲಹರಿಗಳನ್ನು ಗ್ರಹಿಸಿ ಪ್ರಕ್ಷೇಪಿಸುತ್ತದೆ. ಎಳ್ಳು ಸೇವಿಸುವುದರಿಂದ ಆಂತರಿಕ ಶುದ್ಧಿಯಾಗುತ್ತದೆ. ಎಳ್ಳು-ಬೆಲ್ಲವನ್ನು ದೇವರಿಗೆ ನೈವೇದ್ಯವೆಂದು ಅರ್ಪಿಸಿ ಇತರರಿಗೆ ಹಂಚುವುದರಿಂದ ಅವರಲ್ಲಿಯೂ ಪ್ರೇಮಭಾವ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ.
ಆಧಾರ – ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ
ಸಂಗ್ರಹ
ಶ್ರೀ. ವಿನೋದ ಕಾಮತ್,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ