ತುಮಕೂರು: ಜಿಲ್ಲಾಧಿಕಾರಿಯಾಗಿ ಕರ್ತವ್ಯ ವಹಿಸಿಕೊಂಡ ಕೇವಲ 5 ತಿಂಗಳ ಅವಧಿಯಲ್ಲಿ ಜಿಲ್ಲೆಯ ಜನತೆಯ ಜನಮನ್ನಣೆ ಗಳಿಸಿದ್ದ ನಿಷ್ಠಾವಂತ ಅಧಿಕಾರಿಯ ಪ್ರಾಮಾಣಿಕತೆ ಮತ್ತು ನಿಷ್ಠೆಯ ಪ್ರತಿಫಲಕ್ಕೆ ಕುತಂತ್ರದ ಉಡುಗೊರೆಯಾಗಿ ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಗೆ ಎತ್ತಂಗಡಿಯ ಕಂಟಕ ಎದುರಾಗಿದೆ. ಜಿಲ್ಲೆಯಲ್ಲಿ ನಿತ್ಯ ಸಾರ್ವಜನಿಕರ ಕಷ್ಟಗಳಿಗೆ ಮಿಡಿಯುತ್ತಿದ್ದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನಿರಂತರ ಪರಿಶ್ರಮದ ನಂತರ ಜಿಲ್ಲೆಯಲ್ಲಿ ಬೇರೂರಿರುವ ರಿಯಲ್ ಎಸ್ಟೇಟ್ ಮಾಫಿಯಾಗೆ ಕಡಿವಾಣ ಹಾಕಲು ರೇರಾ (RERA) ಆಕ್ಟ್ ಜಾರಿಗೆ ತರಲು ತೀರ್ಮಾನಿಸಿದ್ದೆ ಇವರ ಕೆಲಸಕ್ಕೆ ಮುಳುವಾಗಿದ್ದು ಎನ್ನಲಾಗುತ್ತಿದ್ದು ಜಿಲ್ಲೆಯಲ್ಲಿ ಬಲಾಡ್ಯರ ಪ್ರಭಾವಕ್ಕೆ ಒಳಗಾಗಿ ನಿಷ್ಠಾವಂತ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಉಳಿಗಾಲವಿಲ್ಲ ಎಂಬುದು ಮತ್ತೊಮ್ಮೆ ರುಜುವಾತಾಗಲಿದೆಯೇ ಇಂತಹದೊಂದು ಗುಮಾನಿ ಇದೀಗ ತುಮಕೂರು ಜಿಲ್ಲಾದ್ಯಂತ ಪಿಸು ಪಿಸು ಮಾತಾಗಿದೆ.
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದದ್ದ ಕೆಲಸಗಳನ್ನು ಅಧಿಕಾರವಹಿಸಿಕೊಂಡ 5 ತಿಂಗಳ ಅವಧಿಯಲ್ಲಿಯೇ ಜನೋಪಯೋಗಿ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿರುವ ಮಾನ್ಯ ಜಿಲ್ಲಾಧಿಕಾರಿಗಳನ್ನು ವರ್ಗಾವಣೆಗೊಳಿಸಲು ಸಾಕಷ್ಟು ಮಂದಿ ಷಡ್ಯಂತ್ರ ರೂಪಿಸಿದ್ದಾರೆಂಬ ವಿಷಯ ಕೇಳಿ ಬರುತಿದೆ. ಏಕೆಂದರೆ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳಿಗೆ ಸರ್ಕಾರಿ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಖಡಕ್ ಸೂಚನೆಗಳನ್ನು ನೀಡಿದ್ದೇ ಮುಳುವಾಯಿತೇ? ಎಂಬ ಊಹಾಪೋಹಗಳಿವೆ.
ಜಿಲ್ಲಾಧಿಕಾರಿಗಳು ಹಲವಾರು ಇಲಾಖೆಗಳಿಗೆ, ಕಛೇರಿಗಳಿಗೆ, ಆಸ್ಪತ್ರೆಗಳಿಗೆ ಯಾವುದೇ ಮುನ್ಸೂಚನೆ ನೀಡದೇ ಭೇಟಿ ನೀಡಿ, ಅಲ್ಲಿನ ವೈಪಲ್ಯದ ಕುರಿತು ಅಲ್ಲಿನ ಮೇಲಧಿಕಾರಿಗಳಿಗೆ ಮನದಟ್ಟು ಮಾಡಿದ್ದೇ ಮುಳುವಾಯಿತೇ? ಜಿಲ್ಲಾಧಿಕಾರಿಗಳ ಕಛೇರಿಯನ್ನು ಪೂರ್ಣ ಡಿಜಿಟಲೀಕರಣಗೊಳಿಸಿ ಆಧುನಿಕತೆಯನ್ನು ಪರಿಚಯಿಸಿದ ವ್ಯಕ್ತಿಗೇ ಇದೀಗ ವರ್ಗಾವಣೆ ಮುಳುವಾಯಿತೇ?
ಯುವಕರ ಕೈಗಳಿಗೆ ಕಷ್ಟ ನೀಡದೇ, ಬೃಹತ್ ಉದ್ಯೋಗ ಮೇಳ ನಡೆಸಿ, ಸಾವಿರಾರು ಯುವಕ-ಯುವತಿಯರು ಸ್ವಾಲಂಬಿಗಳಾಗಿ ಜೀವನ ನಡೆಸಲು ಉದ್ಯೋಗ ಮೇಳದ ಮುತುವರ್ಜಿ ವಹಿಸಿದ್ದೇ ಮುಳುವಾಯಿತೇ? ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೊಳ್ಳದೇ ನೆನೆಗುದಿಗೆ ಬಿದ್ದದ್ದ ಬೆಳಗುಂಬದಲ್ಲಿನ ಬಾಲಕರ ವಿದ್ಯಾರ್ಥಿ ನಿಲಯದ ಕುರಿತು ಕ್ರಮ ಕೈಗೊಳ್ಳಲು ಮುಂದಾಗಿದ್ದೇ ಮುಳುವಾಯಿತೇ?
ಶಿರಾ ಮುಖ್ಯರಸ್ತೆಯಲ್ಲಿನ ಎಸ್ ಮಾಲ್ ಬಳಿಯಲ್ಲಿನ ಸೇತುವೆ ಕಿರಿದಾಗಿದ್ದು, ಅದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇ ಅವರಿಗೆ ಮುಳುವಾಯಿತೇ? ಆಶ್ರಯ ಯೋಜನೆ, ಆಟದ ಮೈದಾನ, ಉದ್ಯಾನವನ ಸೇರಿದಂತೆ ನೆನೆಗುದಿಗೆ ಬಿದ್ದಂತಹ ಹಲವಾರು ಜನೋಪಯೋಗಿ ಕಾರ್ಯಗಳನ್ನು ಕಾರ್ಯಗತ ಮಾಡುವಲ್ಲಿ ಕ್ರಮಕ್ಕೆ ಮುಂದಾಗಿದ್ದ ಪರಿಣಾಮವೇ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸಂಚು ತಂದಿತೇ?
ಒಟ್ಟಾರೆಯಾಗಿ ಜನೋಪಯೋಗಿ ಕೆಲಸ ಮಾಡುವಂತಹ ಅಧಿಕಾರಿಗಳನ್ನು ಕೆಲವೊಂದಷ್ಟು ಅಮೇಧ್ಯ ತಿನ್ನುವ ಮಂದಿ ಸಹಿಸಿಕೊಳ್ಳಲು ಆಗುವುದಿಲ್ಲವೇ ಆಥವಾ ತಾನು ಕೆಲಸ ಮಾಡ, ಪರರನ್ನು ಮಾಡ ಬಿಡ ಎಂಬ ಸಿದ್ಧಾಂತದ ವ್ಯಕ್ತಿಗಳು ಷಡ್ಯಂತ್ರ ನಡೆಸಿದರೇ?
ಹಾಗಾದರೇ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಗಿಂತ ದೊಡ್ಡ ಬಾಸ್ ರಿಯಲ್ ಎಸ್ಟೇಟ್ ದಂಧೆ ನಡೆಸುವವರೇ? ಹೀಗೊಂದು ಪ್ರಶ್ನೆ ಉದ್ಭವವಾಗುತ್ತದೆ?
ಪ್ರಾಮಾಣಿಕತೆಗೆ, ಜನೋಪಯೋಗಿ ಕೆಲಸ ಕಾರ್ಯಗಳು ಯಾವಾಗ ಆಗಬೇಕಾಗಿದೆ? ನಮ್ಮ ಜನ ಹೀಗೇ ಇರಬೇಕೇ? ಅಭಿವೃದ್ಧಿ ಬೇಡವೇ….? ಜಿಲ್ಲಾಧಿಕಾರಿಗಳನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಆಗಬೇಕಾಗಿದೆ ಅಲ್ಲವೇ?