ತುಮಕೂರು: ತುಮಕೂರು ನಗರದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಪ್ರಮುಖ ಮೂರು ಇಲಾಖೆಗಳ ಕಟ್ಟಡಗಳಿಗೆ ಓಡಾಡಲು ಸೂಕ್ತ ರಸ್ತೆ ವ್ಯವಸ್ಥೆಯೂ ಇಲ್ಲ, ಪಾರ್ಕಿಂಗ್ ಸೌಲಭ್ಯವೂ ಇಲ್ಲದೆ ಜಿಲ್ಲೆಯ ಜನ ಪರದಾಡುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ (ಆರಿಫ್) ಆರೋಪಿಸಿದ್ದಾರೆ.
ನಗರದ ಉಪ್ಪಾರಹಳ್ಳಿಯ ಪಿ.ಎನ್.ಕೆ. ಟೌನ್‌ಶೀಪ್‌ನ ಸಿ.ಎ. ಸೈಟ್ ಖರೀದಿಸಿ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ವಕ್ಪ್ ಕಛೇರಿಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ ಹಾಗೂ ಪಾರ್ಕಿಂಗ್ ಸೌಲಭ್ಯಗಳಿಲ್ಲದೆ ಕಛೇರಿಗೆ ಬರುವ ಜನರು ಪರದಾಡುವಂಥಾ ಸ್ಥಿತಿ ಬಂದಿದೆ ಎಂದು ತಿಳಿಸಿದ್ದಾರೆ.
ಪ್ರಭಾವಿ ರಾಜಕಾರಣಿಯೊಬ್ಬರು ಟೂಡಾ ಪ್ಲಾನ್ ಪ್ರಕಾರ ಸಿಎ ಸೈಟ್‌ಗಳಿಗೆ ರಸ್ತೆ ನೀಡದೆ, ಬರೀ ಅಲ್ಪಸಂಖ್ಯಾತರು ಓಡಾಡಿದರೆ ಎಲ್ಲಿ ತಮ್ಮ ಲೇಔಟ್‌ನ ಬೆಲೆಗೆ ಕುಂದು ಬರುತ್ತೋ ಎಂಬ ಕಾರಣಕ್ಕೆ ರಸ್ತೆ ಇದ್ದ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿಬಿಟ್ಟಿದ್ದಾರೆ. ಸದರಿ ಇಲಾಖಾ ಕಟ್ಟಡಗಳ ಮುಂದೆ ಸಾಕಷ್ಟು ಸ್ಥಳಾವಕಾಶ ಇದ್ದರೂ ಅದನ್ನು ಬಳಸಿಕೊಳ್ಳಲು ಸೂಕ್ತ ರಸ್ತೆಯೇ ಇಲ್ಲದಂತಾಗಿದೆ ಎಂದಿದ್ದಾರೆ.
ಅಲ್ಪಸಂಖ್ಯಾತರಿಗೆ ಸೇರಿದ ಜಿಲ್ಲಾ ಮಟ್ಟದ ಪ್ರಮುಖ ಮೂರು ಇಲಾಖೆಗಳು ಉಪ್ಪಾರಹಳ್ಳಿ ಗೇಟ್‌ನ ಪಿಎನ್‌ಕೆ ಟೌನ್‌ಶೀಪ್‌ನ ಸಿಎ ಸೈಟಿನಲ್ಲಿ ನಿರ್ಮಿಸಲಾಗಿದೆ. ಟೌನ್‌ಶೀಪ್‌ನ ಮುಖ್ಯದ್ವಾರದಿಂದ ಈ ಸೈಟುಗಳಿಗೆ ನೇರ ರಸ್ತೆ ಇದ್ದರೂ ರಸ್ತೆಯಲ್ಲಿ ಜನಸಂದಣಿ ಜಾಸ್ತಿಯಾಗಲಿದೆ ಎಂಬ ಕಾರಣಕ್ಕೆ ಗೋಡೆ ನಿರ್ಮಿಸಿ ರಸ್ತೆಯನ್ನೇ ಮುಚ್ಚಲಾಗಿದೆ ಎಂದು ಗಂಭೀರವಾಗಿ ನಿಸಾರ್ ಅಹಮದ್ ಆರೋಪಿಸಿದ್ದಾರೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಈ ಇಲಾಖೆಗಳಿಗೆ ಬರುವ ಸಾರ್ವಜನಿಕರು, ಉಪ್ಪಾರಹಳ್ಳಿ ಸರ್ಕಲ್‌ನಿಂದ ಇಂದಿರಾ ಕಾಲೇಜಿನ ವರೆಗೆ ಇರುವ ಚಿಕ್ಕ ರಸ್ತೆಯಲ್ಲಿ ಬಂದು, ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಗೇಟಿನಿಂದ ಪ್ರವೇಶಿಸಿ ಕಟ್ಟಡಗಳ ಪಕ್ಕದಲ್ಲಿನ ಕೇವಲ ಇಬ್ಬರು ಮನುಷ್ಯರು ಮಾತ್ರ ಸಂಚರಿಸುವಷ್ಟು ಚಿಕ್ಕ ಸಂದಿಗೊಂದಿಗಳ ಮೂಲಕ ಸಾಗಬೇಕಿದೆ. ವಾಹನಗಳಲ್ಲಿ ಬರುವವರು ಇಂದಿರಾ ಕಾಲೇಜಿನ ಮುಂಭಾಗದ ಚಿಕ್ಕ ರಸ್ತೆಯಲ್ಲೇ ಪಾರ್ಕಿಂಗ್ ಮಾಡಬೇಕಾಗಿದೆ. ಇಲ್ಲಿನ ಇಲಾಖಾ ವಾಹನಗಳೂ ಕೂಡ ಈ ಚಿಕ್ಕ ರಸ್ತೆಯಲ್ಲೇ ನಿಲ್ಲಬೇಕಿದೆ. ಕಟ್ಟಡಗಳ ಮುಂಭಾಗ ಸಾಕಷ್ಟು ಸ್ಥಳಾವಕಾಶ ಇದ್ದರೂ ವಾಹನಗಳು ಅಲ್ಲಿಗೆ ತಲುಪಲು ರಸ್ತೆಯೇ ಇಲ್ಲದಂತಾಗಿದೆ ಎಂದಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಬೊಬ್ಬೆ ಹೊಡೆಯುವ ಘಟಾನುಘಟಿ ನಾಯಕರು ಜಿಲ್ಲೆಯಲ್ಲಿದ್ದರೂ ಇಲ್ಲಿನ ಅವ್ಯವಸ್ಥೆ ಹಾಗೂ ಅನ್ಯಾಯದ ಬಗ್ಗೆ ಧ್ವನಿ ಎತ್ತದಿರುವುದು ಹಾಗೂ ಜಿಲ್ಲಾಡಳಿತ ಕೂಡ ಈ ಬಗ್ಗೆ ವಿಚಾರಿಸದಿರುವುದು ವಿಪರ್ಯಾಸಕರ.
ಇಡೀ ಜಿಲ್ಲೆಯ ಅಲ್ಪಸಂಖ್ಯಾತರು ಭೇಟಿ ನೀಡುವ ಇಲಾಖೆಗಳಿರುವ ಈ ಸಂಕೀರ್ಣದಲ್ಲಿನ ಅವ್ಯವಸ್ಥೆಯನ್ನು ಕೂಡಲೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸಾವಿರಾರು ಮಂದಿ ಸಮುದಾಯದ ಜನರೊಂದಿಗೆ ಪ್ರತಿಭಟಿಸಿ ಧರಣಿ ಕೂರಲಾಗುವುದು ಎಂದು ನಿಸಾರ್ ಅಹಮದ್ (ಆರಿಫ್) ಎಚ್ಚರಿಕೆ ನೀಡಿದ್ದಾರೆ.