ತುಮಕೂರು: ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಧರಣಿಗೆ ತಾವು ಧನಿಗೂಡಿಸುವದಾಗಿ ಕರ್ನಾಟಕ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ, ನುಡಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳು ನಡೆಸುತ್ತಿರುವ ಅನಿರ್ದಿಷ್ಟ ಅವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಅತಿಥಿ ಉಪನ್ಯಾಸಕರ ಹೋರಾಟ ಅತ್ಯಂತ ಹಳೆಯದಾಗಿದ್ದು ಸರ್ಕಾರಗಳು ಇಂದಿನವರೆಗೂ ಸಹ ಅವರ ಬೇಡಿಕೆಗಳನ್ನು ಈಡೇರಿಸದಿರುವುದು ದೌರ್ಭಾಗ್ಯ. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಉಪನ್ಯಾಸಕರ ಕೊರತೆ ರಾಜ್ಯದಲ್ಲಿ ಅತಿ ಹೆಚ್ಚಾಗಿ ಕಂಡುಬಂದಿದ್ದು ಉಪನ್ಯಾಸಕರ ನೇಮಕಾತಿ ಹಾಗೂ ಅವರ ವೇತನ ತಾರತಮ್ಯಗಳನ್ನು ನಿವಾರಿಸುವಲ್ಲಿ ಸಂಬಂಧಪಟ್ಟ ಸಚಿವರುಗಳು ಹಾಗೂ ಶಿಕ್ಷಕರಿಂದಲೇ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ಸಹ ವಿಫಲರಾಗಿದ್ದಾರೆ. ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆ, ಸೇವೆಯಲ್ಲಿ ಖಾಯಂಗೊಳಿಸುವುದು, ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದು ಇದುವರೆಗೂ ಆ ಬೇಡಿಕೆಗಳು ಈಡೇರಿಲ್ಲವೆಂದರೆ ಶಿಕ್ಷಣ ಕ್ಷೇತ್ರ ಎತ್ತ ಸಾಗುತ್ತಿದೆ ಎಂಬುದನ್ನು ಊಹೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಇತ್ತೀಚಿಗೆ ಎನ್ ಇ ಪಿ ಜಾರಿಗೊಳಿಸಲು ಹೊರಟಿದ್ದು ಮೊದಲು ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕು ಎಂದರು.
ಸಂಶೋಧನೆಗೆ ನೀಡಲಾಗುತ್ತಿದ್ದ ಅನುದಾನವನ್ನು ಸಹ ಇದೀಗ ಕಡಿತಗೊಳಿಸಲಾಗಿದೆ ಹೀಗಿರುವಾಗ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹೊಸ ವಿಚಾರಗಳಿಗೆ ಅವಕಾಶವನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇನ್ನು ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಲಾಗಿದ್ದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಅನುಕೂಲ ಕಲ್ಪಿಸಿ ವಿದ್ಯಾವಂತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಜನ ಪ್ರತಿನಿಧಿಗಳು ಉದಾಸೀನ ಮನೋಭಾವ ಹೊಂದಿದೆ. ಈ ಎಲ್ಲಾ ಸಮಸ್ಯೆಗಳನ್ನು ನೋಡಿಯೂ ಸಹ ನೋಡದಂತೆ ಸದನದಲ್ಲಿ ಧ್ವನಿಯುತ್ತದ ವಿಧಾನ ಪರಿಷತ್ ಪಸದಸ್ಯರುಗಳ ನಡೆಯನ್ನು ನೋಡಿ ಶಿಕ್ಷಣ ವ್ಯವಸ್ಥೆಯಲ್ಲಿ ಏನಾದರೂ ಒಂದು ಕ್ರಾಂತಿ ಮಾಡಬೇಕು ಎಂಬ ಉದ್ದೇಶದಿಂದ ಶಿಕ್ಷಕರ ಕ್ಷೇತ್ರದ ಚುನಾವಣೆಗೂ ಸಹ ಸ್ಪರ್ಧಿಸುತ್ತಿದ್ದೇನೆ. ಹತ್ತು ದಿನಗಳು ಕಳೆದರೂ ಯಾವುದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಅತಿಥಿ ಉಪನ್ಯಾಸಕರ ಯೋಗ ಕ್ಷೇಮ ವಿಚಾರಿಸದಿರುವುದು ಅತ್ಯಂತ ದೊಡ್ಡ ಸಂಗತಿಯಾಗಿದೆ.
ಈ ನಿಟ್ಟಿನಲ್ಲಿ ಕಾಲೇಜಿನ ಒಳಗಿದ್ದು ಪಾಠ ಮಾಡಬೇಕಾದ ಅತಿಥಿ ಉಪನ್ಯಾಸಕರು ಇಂದು ಹೋರಾಟ ಮಾಡಿಕೊಂಡು ಬೀದಿಯಲ್ಲಿ ಕೋರುವ ಪರಿಸ್ಥಿತಿ ಬಂದಿದೆ. ಈ ಹೋರಾಟಕ್ಕೆ ನನ್ನದೂ ಸಹ ಬೆಂಬಲವಿದ್ದು ಅವರಿಗೆ ದನಿಯಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕರಾದ ನಾಗಪ್ಪ ತುಮಕೂರು ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಭೂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು