ತುಮಕೂರು – ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ (ಪಿಕೆಎಸ್) ನೌಕರರಿಗೆ ನೀಡುತ್ತಿರುವ ಊಟದ ಬಗ್ಗೆ ಗಂಭೀರ ಆರೋಪ ಕೇಳಿ ಬರುತ್ತಿದ್ದು ನೌಕರರಿಗೆ ನೀಡುತ್ತಿರುವ ಊಟದಲ್ಲಿ ಜಿರಲೆ ಹಾಗೂ ಮೊಟ್ಟೆಯಲ್ಲಿ ಹುಳಗಳು ಕಂಡುಬಂದಿದ್ದು ಪಾಲಿಕೆ ಆಡಳಿತಕ್ಕಿಂತ ಪೌರ ಕಾರ್ಮಿಕರಿಗೆ ಊಟ ಒದಗಿಸುವ ಗುತ್ತಿಗೆದಾರರ ತಲೆದಂಡ ಆಗುತ್ತದೆಯೇ ಅಥವಾ ಕೆಲ ಅಧಿಕಾರಿಗಳು ಕೃಪಕಟಾಕ್ಷ ತೋರಿ ಅವರನ್ನು ಓಲೈಕೆ ಮಾಡಿಕೊಳ್ಳುತ್ತಾರೋ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 35 ವಾರ್ಡ್ ಗಳಲ್ಲಿ ಕೆಲಸ ನಿರ್ವಹಿಸಿರುವ ಪೌರಕಾರ್ಮಿಕರಿಗೆ ದಿನನಿತ್ಯ ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಪ್ರಸನ್ನ ಎಂಬ ವ್ಯಕ್ತಿಗೆ ಊಟ ಸರಬರಾಜು ಮಾಡಲು ಟೆಂಡರ್ ನೀಡಲಾಗಿದ್ದುಈ ಟೆಂಡರ್ ಪಡೆದಿರುವ ವ್ಯಕ್ತಿ ಸರಬರಾಜು ಮಾಡುತ್ತಿರುವ ಊಟದಲ್ಲಿ ಜಿರಳೆ ಹಾಗೂ ಮೊಟ್ಟೆ ಯಲ್ಲಿ ಹುಳ ಕಂಡುಬಂದಿರುತ್ತದೆ.
ಇಂತಹ ಕಳಪೆ ಆಹಾರ ಪೂರೈಕೆ ಮಾಡುತ್ತಿರುವ ವ್ಯಕ್ತಿಯ ಮೇಲೆ ಸಾಕಷ್ಟು ಪೌರಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ ಜೊತೆಗೆ ಅವರ ತಲೆ ದಂಡ ಯಾವಾಗ ಆಗುತ್ತದೆಂದು ಬಕ ಪಕ್ಷಿಗಳಂತೆ ಕಾದಿದ್ದಾರೆಂದು ಹೇಳಲಾಗಿದೆ, ಏಕೆಂದರೆ ಪ್ರತಿ ನಿತ್ಯ ಇವರು ಸರಬರಾಜು ಮಾಡುವ ಆಹಾರದಲ್ಲಿ ರುಚಿ ಮತ್ತು ಶುಚಿ ಎದ್ದುಕಾಣುತ್ತಿತ್ತು, ಆದರೆ ಬಡ ಪೌರ ಕಾರ್ಮಿಕರು ಈ ಕುರಿತು ತಮ್ಮ ಮೇಲಧಿಕಾರಿಗಳಿಗೆ ದೂರ ನೀಡದೇ, ಅತ್ತ ತಿನ್ನಲು ಸಾಧ್ಯವಾಗದೇ, ಪಾಲಿಗೆ ಬಂದಿದ್ದು ಪಂಚಾಮೃತ ಎನ್ನುವ ಹಾಗೆ ತಿನ್ನುತ್ತಿದ್ದರು, ಆದರೆ ಕಳೆದ ಸೋಮವಾರ ಡಿಸೆಂಬರ್ 18 ರಂದು ವಾರ್ಡ್ ನಂಬರ್ 03 ರಲ್ಲಿ ನೀಡಿರುವ ಅನ್ನದಲ್ಲಿ ಹಲವಾರು ಪೌರ ಕಾರ್ಮಿಕರ ಆಹಾರದಲ್ಲಿ ಜಿರಳೆ ಸಿಕ್ಕಿದೆ ಅದೂ ಸಾಲದೆಂಬಂತೆ ಇಂದು ವಾರ್ಡ್ ನಂ. 01ರಲ್ಲಿ ಊಟದೊಂದಿಗೆ ನೀಡಿರುವ ಮೊಟ್ಟೆ ಕೆಲವು ಕೊಳೆತಿದ್ದರೆ ಇನ್ನು ಕೆಲವುದರಲ್ಲಿ ಹುಳಗಳು ಕಂಡು ಬಂದಿವೆ.
ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಪಾಲಿಕೆಯ ಮೇಲೆ ಇದ್ದು ಪ್ರತಿನಿತ್ಯ ಪಾಲಿಕೆ ನೌಕರರಿಗೆ ಸರಬರಾಜು ಮಾಡುವ ಟೆಂಡರ್ ದಾರರು ಪ್ರತಿನಿತ್ಯ ಕುಡಿಯಲು ನೀರು, ಇಡ್ಲಿ, ದೋಸೆ ,ಪೂರಿ ಹೀಗೆ ಪ್ರತಿನಿತ್ಯವೂ ವಿವಿಧ ಬಗೆಯ ಆಹಾರ ಪೂರೈಕೆ ಮಾಡುವಂತೆ ಟೆಂಡರ್ ನಲ್ಲಿ ತಿಳಿಸಿದರು ಸಹ ಇದು ಯಾವುದನ್ನು ನಿರ್ವಹಿಸದೆ ಕೇವಲ ಒಂದು ಬಗೆಯ ಆಹಾರವನ್ನೇ ಪ್ರತಿನಿತ್ಯ ನೀಡುತ್ತಿದ್ದಾರೆ ಎನ್ನುವ ಗಂಭೀರ ಆರೋಪವು ಇದರ ಹಿಂದೆ ಕೇಳಿಬಂದಿದೆ.
ಸದ್ಯಕ್ಕೆ ಯಾವೊಬ್ಬ ಪೌರ ಕಾರ್ಮಿಕರಿಗೆ ಆರೋಗ್ಯದಲ್ಲಿ ಏನೂ ಏರುಪೇರು ಆಗಿರುವುದಿಲ್ಲ, ಆಕಸ್ಮಾತ ಇದರ ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದರೆ, ಅವರ ಮತ್ತು ಅವರ ಅವಲಂಭಿತರ ಜವಾಬ್ದಾರಿ ಏನಾಗುತ್ತಿತ್ತು ಎಂದು ಸಾರ್ವಜನಿಕರಲ್ಲಿ ಪಿಸು ಪಿಸು ಮಾತಾಗಿರುತ್ತದೆ.
ಇದರ ಮೇಲುಸ್ತುವಾರಿಯನ್ನ ನಿಭಾಯಿಸುವ ಪಾಲಿಕೆಯ ಪರಿಸರ ಇಂಜಿನಿಯರ್ ಸಹ ಇದ್ಯಾವುದನ್ನು ಗಮನಿಸದೆ ಇರುವುದು ಕಳಪೆ ಆಹಾರ ಸರಬರಾಜು ಆಗುತ್ತಿರುವುದಕ್ಕೆ ಕಾರಣ ಎಂದು ಪಾಲಿಕೆಯ ಕೆಲ ಪೌರ ಕಾರ್ಮಿಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹಿರಿಯ ಅಧಿಕಾರಿಗಳು ಕಳಪೆ ಆಹಾರಕ್ಕೆ ಕಡಿವಾಣ ಹಾಕಿ, ಉತ್ತಮ ಆಹಾರ ನೀಡುವಲ್ಲಿ ಕ್ರಮ ಕೈಗೊಳ್ಳುವರೆ ಕಾದುನೋಡಬೇಕಿದೆ.