ತುಮಕೂರು: ಅರ್ಜುನ ಆನೆ ಸಾವಿನ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗಂಧದಗುಡಿ ಫೌಂಡೇಶನ್ ಜಿಲ್ಲಾ ಘಟಕ ಸರ್ಕಾರವನ್ನು ಒತ್ತಾಯಿಸಿದೆ. ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗಂಧದಗುಡಿ ಫೌಂಡೇಶನ್ ಪದಾಧಿಕಾರಿಗಳು ಅರ್ಜುನ ಆನೆಯ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಫೌಂಡೇಶನ್‌ನ ಜಿಲ್ಲಾಧ್ಯಕ್ಷ ಲೋಕೇಶ್ ರೆಡ್ಡಿ ಮಾತನಾಡಿ, ಮೈಸೂರು ದಸರಾದ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆ ನಾಡಿನ ಜನರ ಕಣ್ಮಣಿಯಾಗಿ ಪ್ರೀತಿ ಗಳಿಸಿತ್ತು. ವಯೋವೃದ್ಧ ಅರ್ಜುನ ಆನೆಯನ್ನು ಕಾಡಿನ ಸಲಗಗಳನ್ನು ಹಿಡಿದು ಪಳಗಿಸಲು ಬಳಕೆ ಮಡಿಕೊಂಡಿದ್ದು ಅಮಾನವೀಯ, ಅಲ್ಲದೆ ಅರ್ಜುನ ಆನೆಗೆಗೆ ಗುಂಡು ಬಿದ್ದಿದೆ ಎನ್ನಲಾಗಿದೆ. ಸಲಗದ ದಾಳಿಗೆ ಸಿಕ್ಕಿ ಅರ್ಜುನ ಮೃತಪಟ್ಟಿದ್ದು ನೋವಿನ ಸಂಗತಿ ಎಂದು ಹೇಳಿದರು.
ವಯಸ್ಸು ಮೀರಿದ ಆನೆಯನ್ನು ಕಾಡಿಗೆ ತೆಗೆದುಕೊಂಡು ಹೋಗಿ ಸಲಗ ಹಿಡಿಯಲು ಬಳಸಿದ್ದು ಸರಿಯಲ್ಲ, ಅರಣ್ಯ ಇಲಾಖೆ ಅಧಿಕಾರಿಗಳು, ಜೊತೆಗಿದ್ದ ಪಶುವೈದ್ಯಾಧಿಕಾರಿಗಳು ಅರ್ಜುನನ್ನು ಈ ಕಾರ್ಯಕ್ಕೆ ಬಳಸಿದ್ದು ಸರಿಯಲ್ಲ. ಅರ್ಜುನ ಸಾವಿನ ಬಗ್ಗೆ ಸಮಗ್ರ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ಫೌಂಡೇಶನ್ ಜಿಲ್ಲಾ ಗೌರವಾಧ್ಯಕ್ಷ ಬಿ.ಎಸ್.ಪ್ರಕಾಶ್, ಉಪಾಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಮೋಹನ್‌ಕುಮಾರ್, ಖಜಾಂಚಿ ಚಂದ್ರಶೇಖರ್, ಪದಾಧಿಕಾರಿಗಳಾದ ನವೀನ್‌ಕುಮಾರ್, ಜಿ.ಎಸ್.ಗೌಡ, ಈರಣ್ಣ, ಮುರಳಿ ಬಾಯರ್ಸ್, ಲೋಹಿತ್, ಪ್ರಕಾಶ್, ಮಧು, ನೀಲಕಂಠಪ್ಪ, ಯೋಗೇಶ್ ಮೊದಲಾದವರು ಪ್ರತಿಭಟನೆಯ ನೇತೃತ್ವವಹಿಸಿದ್ದರು. ನಂತರ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.