ತುಮಕೂರು : ನಗರದ ಪ್ರತಿಷ್ಠಿತ ಕಾನೂನು ಪದವಿ ಕಾಲೇಜು ಆಗಿರುವ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೇ, ಅತೀ ಹೆಚ್ಚು ಅಂಕ ಪಡೆದವರಿಗೂ ಆದ್ಯತೆ ನೀಡದೇ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುತ್ತಿರುವ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಬಿಕರಿ ಮಾಡಲಾಗುತ್ತಿದೆ ಹೀಗೊಂದು ಆರೋಪವನ್ನು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.
ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಸ್ಥಳೀಯ ಮಧುಗಿರಿ ಮೂಲದವರೊಬ್ಬರು ಸ್ಥಳೀಯ ಶಾಸಕರೊಬ್ಬರಿಂದಲೂ ಶಿಫಾರಸ್ಸು ಮಾಡಿಸಿದರೂ ಕಿಮ್ಮತ್ತು ನೀಡದೇ ಹೆಚ್ಚಿಗೆ ಹಣ ನೀಡಿದ್ದಾರೆಂದು ಬೇರೆಯವರಿಗೆ ತಮ್ಮ ಸೀಟ್ ನ್ನು ಮಾರಿದ್ದಾರೆಂದು ಆರೋಪಿಸಿರುವ ವ್ಯಕ್ತಿ ಇಲ್ಲಿ ದುಡ್ಡು ಇದ್ದರೇ ಮಾತ್ರ ಸೀಟ್ ಸರ್ ಇಲ್ಲಾಂದ್ರೆ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ.
ತಮ್ಮ ಪುತ್ರಿ ಶೇ. 85% ಅಂಕ ಪಡೆದಿದ್ದರೂ ಸಹ ಇವರು ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಿಕೊಳ್ಳುತ್ತಿಲ್ಲ, ಸೀಟ್ ಗಳು ಖಾಲಿ ಇಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ, ಈ ಕುರಿತು ಕಾಲೇಜು ಆಡಳಿತ ಮಂಡಳಿಯವರನ್ನು ಕೇಳಿದರೆ ನಮಗೆ ಗೊತ್ತಿಲ್ಲ ಪ್ರಾಂಶುಪಾಲರನ್ನು ಕೇಳಿ ಎನ್ನುತ್ತಾರೆ, ಪ್ರಾಂಶುಪಾಲರನ್ನು ಕೇಳಿದರೆ ಆಡಳಿತ ಮಂಡಳಿಯ ಮೇಲೆ ಎತ್ತಿ ಹಾಕುತ್ತಾರೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ.
ಈ ಕಾಲೇಜಿನಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಾಹಕ ಮಂಡಳಿ (ಕಾರ್ಯನಿರ್ವಹಣಾಧಿಕಾರಿ, ಪ್ರಾಂಶುಪಾಲರು, ಮೇಲ್ವಿಚಾರಕರು) ಸೇರಿದಂತೆ ಕಾಲೇಜಿನಲ್ಲಿರುವ ಸಮಸ್ತ ವ್ಯವಸ್ಥೆಯ ವೃಂದದವರು ಷಾಮೀಲ್ ಆಗಿ ಒಂದು ಸೀಟ್ ಗೆ ಇಂತಿಷ್ಟು ಹಣವೆಂದು ಫಿಕ್ಸ್ ಮಾಡಿ ಒಂದು ಅಡ್ಮಿಷನ್ ಆಗುವ ವಿದ್ಯಾರ್ಥಿ ಇಂದ ಪಡೆದ ಹಣವನ್ನು ಎಲ್ಲರೂ ಹಂಚಿಕೊಂಡು ಬಡ ವಿದ್ಯಾರ್ಥಿಗಳಿಗೆ ಮೋಸ ಮಾಡುತ್ತಿರುವುದಲ್ಲದೇ, ಅವರ ಶೈಕ್ಷಣಿಕ ಜೀವನದ ಮೇಲೆ ಚೆಲ್ಲಾಟವಾಡುತ್ತಿದ್ದಾರೆಂದು ನೊಂದ ಪೋಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಹಾಗಿದ್ದರೆ ಈ ಕಾಲೇಜಿನಲ್ಲಿ ಓದಲು ಶೈಕ್ಷಣಿಕ ಅರ್ಹತೆ ಬೇಡವೇ? ಕೇವಲ ಕಾಸು (ಹಣ) ಇದ್ದರೆ ಮಾತ್ರ ಇಲ್ಲಿ ಓದಬೇಕೇ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ. ಈ ಕುರಿತು ನಗರದ ಹಿರಿಯ ವಕೀಲರೊಬ್ಬರು ಹೇಳುವುದೇನೆಂದರೆ ಇತ್ತೀಚೆಗೆ ಈ ಕಾಲೇಜು ಸಮಸ್ತ ಅವ್ಯವಸ್ಥೆಯ ಗೂಡಾಗಿದ್ದು ಅತ್ಯಂತ ಖ್ಯಾತಿ ಪಡೆದಿರುವ ಈ ಕಾಲೇಜನ್ನು ಅಪಕೀರ್ತಿಯ ಕಡೆಗೆ ತಂದಿರುವುದು ಶೋಚನೀಯ ಸಂಗತಿ ಎಂದಿದ್ದಾರೆ.
ಒಟ್ಟಾರೆಯಾಗಿ ಈ ಕಾಲೇಜಿನಲ್ಲಿ ಓದಲ ಶೈಕ್ಷಣಿಕ ಅರ್ಹತೆಗಿಂತ ಕಾಸು ಇದ್ದರೇ ಮಾತ್ರ ಪ್ರವೇಶ ಎಂಬುದು ಸಾಬೀತಾಗಿದೆ.