ತುಮಕೂರು : ತುಮಕೂರು ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಾಮೂಹಿಕವಾಗಿ ಭಾರತದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ತುಮಕೂರು ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಸಾರ್ವಜನಿಕರು ಭಾಗವಹಿಸಿ, ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿದರು.
ಪೀಠಿಕೆಯನ್ನು ಓದಿದ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳಾದ ಕೆ.ಶ್ರೀನಿವಾಸ್ ಭಾರತದ ಸಂವಿಧಾನದ ಮಹತ್ವದ ಬಗ್ಗೆ ಹೇಳಿದರಲ್ಲದೇ, ಪ್ರತಿಯೊಬ್ಬ ನಾಗರೀಕರಿಗೆ ಹಿತಕರವಾಗುವಂತಹ ಸಂವಿಧಾನವನ್ನು ಡಾ. ಬಿ.ಆರ್.ಅಂಬೇಡ್ಕರ್‌ರವರು ಈ ಭವ್ಯ ಭಾರತಕ್ಕೆ ನೀಡಿದ್ದಾರೆ. ನಾನು ಸೇರಿದಂತೆ ಈ ವೇದಿಕೆಯಲ್ಲಿರುವ ಅನೇಕ ಅಧಿಕಾರಿಗಳನ್ನೊಳಗೊಂಡು ಪ್ರತಿಯೊಬ್ಬ ನಾಗರೀಕನಿಗೂ ಅನ್ವಯಿಸುವಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವ ಕೀರ್ತಿ ನಮ್ಮ ಭಾರತ ಸಂವಿಧಾನಕ್ಕೆ ಇದೆ ಎಂದು ಹೇಳಿದರು.
ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರೀಕನು ಯಾವ ರೀತಿಯಾಗಿ ಬದುಕಬೇಕು, ನಾಗರೀಕ ಜೀವನದಲ್ಲಿ ಯಾವ ರೀತಿಯಾದ ಜೀವನವನ್ನು ನಿರ್ವಹಿಸಬೇಕು ಎಂದು ಹೇಳಿದರಲ್ಲದೇ, ನಮ್ಮ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಒಳಗೊಂಡಂತೆ ವಿವಿಧ ಚುನಾಯಿತ ಪ್ರತಿನಿಧಿಗಳು ಜನ ಸಾಮಾನ್ಯರೊಂದಿಗೆ ಯಾವ ರೀತಿಯಾಗಿ ವರ್ತಿಸಬೇಕು ಎಂದು ಸಂವಿಧಾನದಲ್ಲಿ ಉಲ್ಲೇಖವಾಗಿದೆಂದು ಜಿಲ್ಲಾಧಿಕಾರಿಗಳು ಹೇಳಿದರು. ಇಂತಹ ವಿಶೇಷ ಹಕ್ಕು, ಬಾದ್ಯತೆಗಳನ್ನು ನೀಡಿರುವ ಸಂವಿಧಾನದ ಪ್ರಜಾಪ್ರಭುತ್ವದ ದಿನವನ್ನು ಆಚರಿಸುತ್ತಿದ್ದೇವೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಪ್ರಭು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪ, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಅಶ್ವಿಜ, ತುಮಕೂರು ವಿ.ವಿ.ಯ ನಾಹೀದ ಜಮ್ ಜಮ್, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಪ್ರತಿಯೊಬ್ಬರೂ ಸಹ ಸಂವಿಧಾನದ ಪೀಠಿಕೆಯನ್ನು ಓದಿದರು.