ತುಮಕೂರು : ತುಮಕೂರು ಜಿಲ್ಲಾ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ತಿಪಟೂರು ತಾಲ್ಲೂಕು ಜೆಡಿಎಸ್ ಮುಖಂಡರು ಹಾಗೂ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ಕೆ.ಟಿ.ಶಾಂತಕುಮಾರ್ರವರು ಪತ್ರಿಕಾಗೋಷ್ಠಿಯನ್ನು ನಡೆಸಿ, ತಿಪಟೂರು ಮತ್ತು ಸುತ್ತಮುತ್ತಲ್ಲಿನ 35 – 40 ಹಳ್ಳಿಗಳ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದರು.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ತಾವು ಸೇರಿದಂತೆ ಹಲವಾರು ರೈತರು ಹಾಗೂ ರೈತ ಮುಖಂಡರು ಡಿ.ಕೆ.ಶಿವಕುಮಾರ್ರವರನ್ನು ಭೇಟಿ ಮಾಡಿ ಕೊಬ್ಬರಿ ಬೆಂಬಲ ಬೆಲೆ ಅಂದರೆ ಕ್ವಿಂಟಾಲ್ ಗೆ ರೂ. 11,000 ಇದ್ದು ಅದಕ್ಕೆ ನಾವು ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಕಳೆದ ಬಿಜೆಪಿ ಸರ್ಕಾರವಿದ್ದಾಗ ಒತ್ತಾಯ ಮಾಡಿದಂತಹ ಸಂದರ್ಭದಲ್ಲಿ ರೂ. 750ಗಳನ್ನು ಹೆಚ್ಚುವರಿ ಮಾಡಿ ಆದೇಶ ಮಾಡಿದ್ದರು ಆದರೆ ನಮ್ಮ ರೈತರು ಬೆಳೆಯುವ ಬೆಳೆಗೆ ತಕ್ಕದಾದ ಬೆಲೆ ಸಿಗದೇ ನಷ್ಟ ಅನುಭವಿಸುತ್ತಿದ್ದೇವೆಂದು ಡಿ.ಕೆ.ಶಿವಕುಮಾರ್ರವರಿಗೆ ಮನವರಿಕೆ ಮಾಡಿ ಹಾಲಿ ಇರುವ ರೂ. 11,750 ಕ್ಕೆ ಬದಲಾಗಿ ರೂ. 15,000 ದಿಂದ ರೂ. 20,000 ವರೆಗೆ ಬೆಂಬಲ ಬೆಲೆಯನ್ನು ತಮ್ಮ ಸರ್ಕಾರದಿಂದ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದೇವು, ಅದಕ್ಕೆ ಅವರು ಸಹ ಸಮ್ಮತಿಸಿದ್ದರು ನಮ್ಮ ಸರ್ಕಾರ ರಚನೆ ಆದ ಕೂಡಲೇ ಈ ಕುರಿತು ಕ್ರಮವಹಿಸುವುದಾಗಿ ತಿಳಿಸಿದ್ದರು ಎಂದರು.
ಆದರೆ ನೆನ್ನೆ ರಾಜ್ಯ ಸರ್ಕಾರವು ಪ್ರಸ್ತುತವಿರುವ ಒಂದು ಕ್ವಿಂಟಾಲ್ ಕೊಬ್ಬರಿಗೆ ರೂ. 11,750/- ಇದ್ದು ಅದಕ್ಕೆ ರೂ. 1,500 ಮಾತ್ರ ಸೇರಿಸಿ ಘೋಷಣೆ ಮಾಡಿದೆ ಹಾಗಾಗಿ ಈಗ ರೂ. 13,250 ಮಾತ್ರ ಪ್ರತಿ ಕ್ವಿಂಟಾಲ್ ನ ಬೆಂಬಲ ಬೆಲೆಯಾಗಿರುತ್ತದೆ, ಆದರೆ ಅವರೇ ಆಶ್ವಾಸನೆ ಕೊಟ್ಟಂತೆ ರೂ. 15,000 ದಿಂದ ರೂ. 20,000 ಘೋಷಣೆ ಮಾಡಲಿಲ್ಲ, ಇದರಿಂದ ಈ ಭಾಗದ ಸಾಕಷ್ಟು ರೈತರಿಗೆ ಅನ್ಯಾಯವಾಗಿರುವುದಲ್ಲದೇ ತೀವ್ರ ನಷ್ಟಕ್ಕೆ ಸಿಲುಕಿದ್ದೇವೆ ಎಂದರು.
ಇನ್ನು ಹಾಲಿ ಕೇಂದ್ರ ಸರ್ಕಾರದ ನಫೆಡ್ ವತಿಯಿಂದ ನಮ್ಮ ಕೊಬ್ಬರಿಯನ್ನು ಕೊಂಡುಕೊಳ್ಳುತ್ತಿದ್ದು ಅವರು ವಿನಾಃಕಾರಣ ಕ್ಷುಲಕ್ಕ ನೆಪವೊಡ್ಡಿ ನಮ್ಮ ಬೆಳೆಗಳನ್ನು ಖರೀದಿ ಮಾಡದೇ ತಿರಸ್ಕರಿಸುತ್ತಿದ್ದಾರೆ, ಇದರಿಂದ ಈ ಭಾಗದ ಕೊಬ್ಬರಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲಕುವಂತೆ ಆಗಿರುತ್ತದೆ, ನಮ್ಮ ಕೊಬ್ಬರಿಗೆ ರಾಷ್ಟ್ರೀಯ ಹಾಗೂ ರಾಷ್ಟ್ರ ಮಟ್ಟದ ಬೇಡಿಕೆ ಇದ್ದರೂ ಸಹ ಈ ರೀತಿಯಾಗಿ ನಾವುಗಳು ನಷ್ಟ ಅನುಭವಿಸುವಂತಹ ಪರಿಸ್ಥಿತಿ ಬಂದಿದೆ ಎಂದರು.
ಮುಂದುವರೆದು ನಾವು ಈಗಾಗಲೇ ಡಿ.ಕೆ.ಶಿವಕುಮಾರ್ ರವರ ಹತ್ತಿರ ಮಾತನಾಡಿದಂತೆ, ಅವರೇ ಆಶ್ವಾಸನೆ ನೀಡಿದಂತೆ ನಮ್ಮ ಕೊಬ್ಬರಿಗೆ ಕನಿಷ್ಠ ಪ್ರತಿ ಕ್ವಿಂಟಾಲ್ ಗೆ ರೂ. 15,000 ಬೆಂಬಲ ಬೆಲೆ ಘೋಷಣೆ ಮಾಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜಿನಪ್ಪ, ಕಾರ್ಯಧ್ಯಕ್ಷರಾದ ಟಿ.ಆರ್.ನಾಗರಾಜು, ಸೋಲಾರ್ ಕೃಷ್ಣಮೂರ್ತಿ, ತಾಹೇರ ಖುಲ್ಸುಂ, ಚೆಲುವರಾಜು ಸೇರಿದಂತೆ ಇನ್ನು ಅನೇಕ ಮುಖಂಡರು ಭಾಗವಹಿಸಿದ್ದರು.