ತುಮಕೂರು : ತುಮಕೂರು ಜಿಲ್ಲೆಯಲ್ಲಿ 2023-24ನೇ ಸಾಲಿನ ಮಳೆಗಾಲದಲ್ಲಿ ಬೃಹತ್ ವನಮಹೋತ್ಸವವನ್ನು ಅನುಷ್ಠಾನಗೊಳಿಸಿ, ಯಶಸ್ವಿಗೊಳಿಸುವ ಸಂಬAಧ ಮಾನ್ಯ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವನಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಅರಣ್ಯ ಪ್ರದೇಶ ಕ್ಷೀಣಿಸುವಿಕೆಯಿಂದ ಪರಿಸರದ ಮೇಲೆ ನೇರ ಪರಿಣಾಮ ಬೀರಿ ಹವಾಮಾನ ವೈಪರಿತ್ಯಾ ತಲೆದೋರಿದೆ ಎಂದರು.
ರಾಜ್ಯ ಸರ್ಕಾರ ಜುಲೈ 1ರಿಂದ 7 ರವರೆಗೆ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳ ಆವರಣ ಹಾಗೂ ಸರ್ಕಾರಿ ಗೋಮಾಳದಲ್ಲಿ ಸಸಿಗಳನ್ನು ನೆಡಬೇಕು. ಆ ಸ್ಥಳದ ಜಿಯೋ ಟ್ಯಾಗಿಂಗ್ ಮಾಡಿ ಯಾವ ಸಸಿಯನ್ನು ನೆಡಲಾಗುತ್ತದೆ ಎಂಬುದರ ಮಾಹಿತಿಯನ್ನು ಅರಣ್ಯ ಇಲಾಖೆಯ ಆ್ಯಪ್‌ನಲ್ಲಿ ನಮೂದಿಸಬೇಕು. ನಂತರ 2024ರ ಏಪ್ರಿಲ್/ಮೇ ಮಾಹೆಯಲ್ಲಿ ಮೂರನೇ ವ್ಯಕ್ತಿಯಿಂದ ಮೌಲ್ಯಮಾಪನ ಮಾಡಿಸಿ ಈ ಕುರಿತು ವಿವರವಾದ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಶಾಲಾ ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳು ಆಟ ಆಡುವುದಕ್ಕೆ ತೊಂದರೆ ಆಗದ ರೀತಿಯಲ್ಲಿ ಕ್ರೀಡಾಂಗಣದ ಸುತ್ತಲು ಹಣ್ಣು ಬಿಡುವ ಹಾಗೂ ಹೂ ಬಿಡುವ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವಂತೆ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದರು.
ರಸ್ತೆಬದಿ ಸಸಿ ನೆಡುವಾಗ ರಸ್ತೆಬದಿಯಲ್ಲಿ ಹೆಚ್ಚು ಸ್ಥಳಾವಕಾಶವಿದ್ದಲ್ಲಿ ಎರಡರಿಂದ ಮೂರು ಸಾಲುಗಳಲ್ಲಿ ನೆಡುತೋಪು ನಿರ್ಮಿಸಿ ಅವುಗಳ ಪೋಷಣೆ ಜವಾಬ್ದಾರಿಯನ್ನು ಸಂಬAಧಪಟ್ಟ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾಪಂಚಾಯತ್ ಇಂಜಿನಿಯರಿAಗ್ ವಿಭಾಗಗಳಿಗೆ ವಹಿಸಬೇಕೆಂದು ಸೂಚಿಸಿದರು.

ಪ್ರತಿ ತಾಲ್ಲೂಕಿನ ಎರಡು ಗುಡ್ಡಗಾಡು ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿದರೆ ಮುಂದಿನ ದಿನಗಳಲ್ಲಿ ಆ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಹಾಗೂ ಉಷ್ಣಾಂಶದ ಪ್ರಮಾಣ ಕಡಿಮೆ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿರುವ ಕೈಗಾರಿಕಾ ಸಂಸ್ಥೆಗಳ ಆವರಣ ಅಥವಾ ಸುಪರ್ದಿನಲ್ಲಿರುವ ಪ್ರದೇಶಗಳನ್ನು ಗುರುತಿಸಿ ಸಸಿಗಳನ್ನು ನೆಟ್ಟು ಅವುಗಳ ನಿರ್ವಹಣೆಯನ್ನು ಆಯಾ ಸಂಸ್ಥೆಗಳಿಗೆ ನೀಡಬೇಕು ಎಂದರು ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕನಿಷ್ಟ ನೂರು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಡಾ. ಕೆ ವಿದ್ಯಾಕುಮಾರಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಮಹಾನಗರ ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಉಪವಿಭಾಗಾಧಿಕಾರಿ ಹೆಚ್.ಶಿವಪ್ಪ, ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಅನುಪಮಾ, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ನಾಗರಾಜು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.