ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸುವಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಮನವಿ

ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023 ರ ಅಂಗವಾಗಿ , ಕರ್ನಾಟಕದ 11.71 ಲಕ್ಷ ಹೊಸ ಮತದಾರರನ್ನೂ ಒಳಗೊಂಡಂತೆ ಒಟ್ಟು 5.3 ಕೋಟಿ ಮತದಾರರು ನಾಳೆ , ಮೇ 10 ರಂದು ಬುಧವಾರ ನಿಗದಿಯಾಗಿರುವ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಬೇಕೆಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ರವರು ಮನವಿ ಮಾಡಿದ್ದಾರೆ.

 

 

 

ಬೆಳಗಾವಿ ಜಿಲ್ಲೆಯ 103 ವಯಸ್ಸಿನ ಶ್ರೀ ಮಹಾದೇವ ಮಹಾಲಿಂಗ ಮಾಲಿ ಯಂತಹ ಹಿರಿಯ ಮತದಾರರಿಂದ ಸ್ಪೂರ್ತಿ ಪಡೆದು, ದೇಶದ ಐಟಿ ರಾಜಧಾನಿಯಲ್ಲಿ ಯುವ ಮತ್ತು ನಗರ ಮತದಾರರು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯರಾಗಿ ಭಾಗವಹಿಸುವ ಮೂಲಕ ರಾಜ್ಯದಲ್ಲಿ ಮತದಾನದೆಡೆಗೆ ಇರುವ ನಗರ ಮತದಾರರ ನಿರಾಸಕ್ತಿಯ ಧೋರಣೆಯನ್ನು ಹುಸಿಗೊಳಿಸಬೇಕಾಗಿದೆ.

 

 

 

ತಮ್ಮ ಮನೆಯಿಂದಲೇ ಮತ ಚಲಾಯಿಸಿ ಮತದಾನದ ಪ್ರಕ್ರಿಯೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡ ಬೆಳಗಾವಿ ಚಿಕ್ಕೋಡಿಯ ಶತಾಯುಷಿ ಮತದಾರರಾದ ಶ್ರೀ ಶ್ರೀ ಮಹಾದೇವ ಮಹಾಲಿಂಗ ಮಾಲಿ ಅವರೊಂದಿಗೆ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಖುದ್ದು ದೂರವಾಣಿ ಮೂಲಕ ಮಾತನಾಡಿ, ಯುವ ಮತದಾರರಿಗೆ ಸ್ಪೂರ್ತಿಯಾಗಿದ್ದಾರೆಂದು ಅಭಿನಂದಿಸಿದರು.

 

 

 

 

ಚುನಾವಣಾ ಆಯೋಗದಿಂದ ಒದಗಿಸಲಾಗಿದ್ದ ಮನೆಯಿಂದಲೇ ಮತದಾನದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡ 76,000 ಹಿರಿಯ ನಾಗರಿಕರು (80 ವರ್ಷ ಮೇಲ್ಪಟ್ಟ) ಮತ್ತು 18,800 ವಿಕಲಚೇತನರಿಗೆ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಅಭಿನಂದಿಸಿದರು.

 

 

 

 

ರಾಜ್ಯದಲ್ಲಿ ಒಟ್ಟು 5.3 ಕೋಟಿ ನೋಂದಾಯಿತ ಮತದಾರರಿದ್ದು, ಅದರಲ್ಲಿ 2.66 ಕೋಟಿ ಪುರುಷ ಮತದಾರರು ಹಾಗೂ 2.63 ಕೋಟಿ ಮಹಿಳಾ ಮತದಾರರಿದ್ದಾರೆ. ಸುಮಾರು 5.71 ಲಕ್ಷ ದಿವ್ಯಾಂಗರು, 12.15 ಲಕ್ಷ 80 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 16,000 ಕ್ಕೂ ಹೆಚ್ಚು ಶತಾಯುಷಿ ನೋಂದಾಯಿತ ಮತದಾರರಿದ್ದಾರೆ.

 

 

 

 

224 ವಿಧಾನಸಭಾ ಕ್ಷೇತ್ರಗಳ 996 ಮಹಿಳಾ ಅಧಿಕಾರಿ ನಿರ್ವಹಣೆಯ (ಸಖಿ) ಮತಗಟ್ಟೆಗಳು, 239 ವಿಕಲಚೇತನ ಅಧಿಕಾರಿಗಳಿಂದ ನಿರ್ವಹಿಸಲ್ಪಡುವ ಮತಗಟ್ಟೆಗಳು, ಯುವ ಅಧಿಕಾರಿಗಳು ನಿರ್ವಹಿಸುವ 286 ಮತಗಟ್ಟೆಗಳು, 737 ವಿಷಯಾಧಾರಿತ ಹಾಗೂ ಸಾಂಪ್ರದಾಯಿಕ ಮತಗಟ್ಟೆಗಳು ಸೇರಿದಂತೆ 58,000 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾರರ ಅನುಕೂಲಕ್ಕಾಗಿ ಸೂಕ್ತ ಸೌಲಭ್ಯಗಳನ್ನು ಒದಗಿಸಲು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹಾಗೂ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರು, ಶೌಚಾಲಯ, ರ್ಯಾಂಪ್ಸ್ , ಗಾಲಿ ಕುರ್ಚಿ, ವಿದ್ಯುಚ್ಛಕ್ತಿ, ಸೇವಾ ಸಹಾಯಕರು, ಸಹಾಯವಾಣಿ ಕೇಂದ್ರ ಸೇರಿದಂತೆ ಹಲವು ಸೌಲಭ್ಯಗಳನ್ನು ಎಲ್ಲಾ ಮತಗಟ್ಟೆಗಳಲ್ಲಿ ಒದಗಿಸಲಾಗಿದೆ ಎಂದು ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ತಿಳಿಸಿರುವುದಾಗಿ ಕೇಂದ್ರ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!