ಧರೆಗವತರಿಸಿದ ಮಾತೆ ವಾಸವಿ ಮಾತೆ

ಜಗತ್ತಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲ್ಪಟ್ಟ ಸುದಿನ *ಜಗನ್ಮಾತೆ ವಾಸವಿ ಧರೆಗವತರಿಸಿದ ದಿನ* ಪವಿತ್ರ ಪಾವನ ಚರಿತೆಯ ದಿನ. ಸತ್ಯ ಅಹಿಂಸೆಯ ಮೂಲಕ ತನಗೆ, ತನ್ನ ಮನೆತನಕ್ಕೆ, ತನ್ನ ರಾಜ್ಯಕ್ಕೆ ತನ್ನ ಧರ್ಮಕ್ಕೆ ಒದಗಿದ ವಿಪತ್ತನ್ನು ಆಪತ್ತನ್ನು ದೂರದೃಷ್ಟಿಯಿಂದ ಪರಿಹರಿಸಿದ ಕುಶಾಗ್ರಮತಿ *ಶ್ರೀ ವಾಸವಿ* ಯೇ ಆದಿಪರಾಶಕ್ತಿಯ ಅಪರ ಅವತಾರವಾಗಿ ಆರ್ಯ ವೈಶ್ಯರ ಕುಲದೇವತೆ ಯಾಗಿ, ಜಗದ ರಕ್ಷಕಳಾಗಿ *ಶ್ರೀ ಕನ್ಯಕಾ ಪರಮೇಶ್ವರಿ* ಎಂದು ಅರಾಧಿಸಲ್ಪಡುತ್ತಿದ್ದಾಳೆ.
ಪೆನುಗೊಂಡ ಆಂದ್ರ ಪ್ರದೇಶದ ಗೋದಾವರಿ ನದಿ ತೀರದಲ್ಲಿರುವ ಹದಿನೆಂಟು ನಗರಗಳು ರಾಜಧಾನಿ, ಕಲ್ಹಾರ ಎಂಬ ರಾಜ ಆಳುತ್ತಿದ್ದ. ಕಲ್ಹಾರ ರಾಜನ ಮಗನೇ ಕುಸುಮ ಶ್ರೇಷ್ಠಿ. ಸಕಲ ವಿದ್ಯಾ ಪಾರಂಗತ ಕುಸುಮ ಶ್ರೇಷ್ಠಿ ವಯೋಧರ್ಮದಂತೆ ಕುಸುಮಾಂಬೆಯೊಡನೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ. ನಂತರ ಪೆನುಗೊಂಡ ಸಂಸ್ಥಾನದ ರಾಜನೂ ಆದ.ಅನನ್ಯವಾಗಿ ಅನ್ಯೋನ್ಯವಾಗಿದ್ದ ಸಾದ್ವಿ ಸಾತ್ವಿಕ ರಾಜ ದಂಪತಿಗಳು ಸರ್ವಸ್ವವನ್ನೂ ಪರಾರ್ಥಕ್ಕಾಗಿ ವಿನಿಯೋಗಿಸುತ್ತಿದ್ದರು. ಪ್ರಜೆಗಳು ಸಹ ಸಕಲ ಸೌಲಭ್ಯ ಸೌಕರ್ಯಗಳಿಂದ ನಿರಾಳವಾಗಿ, ನಿರುಮ್ಮಳವಾಗಿ ಸಂತಸದಿಂದ ರಾಮ ರಾಜ್ಯದಂತೆ ಬಾಳುತ್ತಿದ್ದರು.
ಮದುವೆಯಾಗಿ ಅನೇಕ ವರ್ಷಗಳಾದರೂ ವ್ರತ ನೇಮ ಹೋಮ ಹವನ ದಾನ ಧರ್ಮ ಯಾತ್ರೆ ಪೂಜೆಮಾಡಿಯೂ ಮಕ್ಕಳಾಗದ ಕಾರಣ ಚಿಂತಾಕ್ರಾಂತರಾದ ರಾಜ ದಂಪತಿಗಳು ರಾಜಗುರುಗಳಾದ ಭಾಸ್ಕರಾಚಾರ್ಯರ ಸಲಹೆಯಂತೆ ತ್ರೇತಾಯುಗದಲ್ಲಿ ದಶರಥ ಮಹಾ ರಾಜನು ಪುತ್ರ ಕಾಮೇಷ್ಠಿ ಯಾಗವನ್ನು ಆಚರಿಸಿ ಮಹಾವಿಷ್ಣುವನ್ನೇ ಮಗನಾಗಿ ಪಡೆದಂತೆ ತಾವು ಸಹ ಅಂತಹದೆ ಮಗುವನ್ನು ಪಡೆಯಲು ಸಂಕಲ್ಪ ತೊಟ್ಟು, ಗುರುಗಳ ಮಾರ್ಗದರ್ಶನದಲ್ಲಿ, ಗುರುಗಳ ಸಾನಿಧ್ಯದಲ್ಲಿ ವಿಧಿವತ್ತಾಗಿ ಯಾಗವನ್ನು ಮಾಡಿ, ದಾನ ಧರ್ಮಗಳನ್ನು ನೀಡಿ ಗುರು ಹಿರಿಯರ, ಪ್ರಜೆಗಳ ಹಾರೈಕೆಯಿಂದ ಮುದ್ದಾದ ಅವಳಿ ಮಕ್ಕಳನ್ನು ದೈವಕೃಪೆಯಿಂದ ಪಡೆದರು.
ವೈಶಾಖ ಮಾಸದ ಶುಕ್ಲ ಪಕ್ಷದ ದಶಮಿಯಂದು ಶುಭ ಶುಕ್ರವಾರದ ಸಂಜೆ ಉತ್ತರಾ ನಕ್ಷತ್ರ, ಕನ್ಯಾ ರಾಶಿಯಲ್ಲಿ ಒಂದು ಗಂಡು ಮಗು, ಒಂದು ಹೆಣ್ಣು ಮಗುವಿನ ಜನನವಾಯಿತು. ಮಗನಿಗೆ ವಿರೂಪಾಕ್ಷ ಮಗಳಿಗೆ ವಾಸವಿ ಎಂದು ಎಂದು ನಾಮಕರಣವಾಯಿತು.
ಮಕ್ಕಳಿಬ್ಬರೂ ಹುಣ್ಣಿಮೆ ಚಂದ್ರನಂತೆ ಕಂಗೊಳಿಸುತ್ತ ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ,ಭರವಸೆಯ ಕಂಗಳಾಗಿ ಆಶಾದಾಯಕವಾಗಿ ಬೆಳೆದು ನಾಡಿಗೆ ಬೆಳಕಾಗತೊಡಗಿದರು. ಇಬ್ಬರೂ ಭಾಸ್ಕರಾಚಾರ್ಯರ ಶಿಷ್ಯರಾಗಿ ದಿನದಿಂದ ದಿನಕ್ಕೆ ಗುರುಗಳು ಹೇಳಿಕೊಟ್ಟಿದ್ದನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸಿ ಕಲಿತು ಗುರುಗಳೇ ಬೆಕ್ಕಸ ಬೆರಗಾಗುವಂತೆ ಸಕಲ ವಿದ್ಯಾವಂತರಾದರು.
ವಾಸವಿಯ ಮನಸ್ಸು ಅರಳಿದಂತೆ, ವಿದ್ಯೆ ಕಲಿತಂತೆ, ವಯಸ್ಸು ಬೆಳೆದಂತೆ ಚೆಲುವೂ
ಉತ್ಕೃಷ್ಟವಾಗತೊಡಗಿತು. ಮಗಳ ಸೌಂದರ್ಯ, ಬುದ್ಧಿವಂತಿಕೆ, ವಿದ್ಯಾರ್ಜನೆ, ಸನ್ನಡತೆ, ಸದ್ಗುಣ ಶೀಲತೆ ವೃದ್ಧಿಯಾಗುತ್ತಿರುವುದನ್ನು ಕಂಡು ಹೆತ್ತವರು ಸಂತಸ ಪಟ್ಟರು, ಆನಂದಕ್ಕೆ ಪಾರವೇ ಇರಲಿಲ್ಲ.
ಹೆಣ್ಣೆತ್ತ ಎಲ್ಲಾ ತಂದೆ, ತಾಯಿಗಳ ಮೊದಲ ಆದ್ಯತೆಯಂತೆ ವಯಸ್ಸಿಗೆ ಬಂದ ಮಗಳ ಮದುವೆ ಮಾಡಲು ಹೆತ್ತವರು ಮುಂದಾದರು. ವಗಳಿಗೆ ತಕ್ಕಂತಹ ವರನನ್ನು ಹುಡುಕಲು ಮಂತ್ರಿಗಳನ್ನು, ಗುರುಹಿರಿಯರನ್ನು ಕರೆಸಿ ಸಮಾಲೋಚನೆ ನಡೆಸಿ ಬೇರೆ ಬೇರೆ ನಾಡುಗಳಿಗೆ ದೂತರನ್ನು ಕಳಿಸಿದರು.
 ವಿದ್ಯಾಭ್ಯಾಸ ಮುಂದುವರೆಯಿತು, ವಾಸವಿ ಮತ್ತು ವಿರೂಪಾಕ್ಷ ಇಬ್ಬರೂ ಸಕಲ ವಿದ್ಯಾ ಪಾರಂಗತರಾಗಿ,ದಿನದಿಂದ ದಿನಕ್ಕೆ ಚೆಲುವಿನ ಖನಿಗಳಾಗಿ,ಒಲವಿನ ಸಿರಿಯಾಗಿ, ಗುರುಗಳಿಗೆ ಮೆಚ್ಚಿನ ಶಿಷ್ಯರಾಗಿ ಹಿರಿಯರಿಗೆ ವಾತ್ಸಲ್ಯಮಯಿಗಳಾಗಿ, ಹೆತ್ತ ತಂದೆ, ತಾಯಿಗಳಿಗೆ ಎರಡು ಕಣ್ಣುಗಳಾಗಿ ಪ್ರಜೆಗಳ ಪಾಲಿಗೆ ಚೈತನ್ಯ ತುಂಬುವ ಕಲಿಗಳಾಗಿ ಉತ್ತುಂಗಕ್ಕೆ ಏರತೋಡಗಿದರು.
 ವಾಸವಿ ಮಾತ್ರ ಯಾಕೋ ಏನೋ ಅಂತರ್ಮುಖಿಯಾಗಿ ಯಾವಾಗಲೂ ಗಂಭೀರ ಚಿಂತನೆ, ಆಲೋಚನೆಯಲ್ಲಿರುವುದನ್ನು ತಂದೆ ಗಮನಿಸಿ ಮಗಳೇ ನಿನ್ನ ಮುಖವು ಯಾಕೋ ಏನೋ ಚಿಂತಾಕ್ರಾಂತಳಾಗಿರುವಂತೆ ಕಾಣುತ್ತಿದೆ, ನಿನಗೆ ತಕ್ಕಂತಹ ವರನನ್ನೇ ಹುಡುಕುತ್ತಾ ಇದ್ದೇವೆ ನಿನ್ನ ಮನಸ್ಸಿಗೆ ಒಪ್ಪುವ,ನೀನು ಇಚ್ಚಿಸುವ, ನೀನು ಒಲಿದವರನ್ನೇ ಆರಿಸಿಕೋ ಮಗಳೇ ಇದರಲ್ಲಿ ನಮ್ಮ ಯಾವ ಅಭ್ಯಂತರವಿಲ್ಲ, ನಿನ್ನ ಇಚ್ಛೆಯೇ ನಮ್ಮ ಇಚ್ಛೆ, ನಮ್ಮ ಯಾವ ಒತ್ತಡವೂ ಇಲ್ಲ ಎಂದು ಕೇಳಲು ನಿಮಂತಹ ಅಪ್ಪಾ ಅಮ್ಮಾ ಇರುವಾಗ ನನಗಾವ ಚಿಂತೆ ನಾವಿಬ್ಬರೂ ಭಾಗ್ಯಶಾಲಿಗಳು ಎಂದು ದಿಟ್ಟತನದಿಂದ ಉತ್ತರಿಸಿದಳು.
ಹೋಗಲಿ ನಿನ್ನ ಮನದ ಆಸೆಯನ್ನಾದರೂ ತಿಳಿಸು ಅದು ಎಷ್ಟೇ ಕಷ್ಟವಾದರೂ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನನಗೆ ನೀನು ಎಂದೆಂದೂ ನಗುತ್ತಾ ಇರಬೇಕು ಎನ್ನುವುದೇ ಮುಖ್ಯ ಎಂದು ಮಗಳನ್ನು ಸಂತೈಸುವರು ಕುಸುಮ ಶ್ರೇಷ್ಠಿ.
ವಾಸವಿ ಮತ್ತಷ್ಟು ಅಂತರ್ಮುಖಿಯಾಗಿ ಮೌನಕ್ಕೆ ಶರಣಾಗಿ ಬಹಳಷ್ಟು ಯೋಚಿಸಿ,ಪಾರಾಮಾರ್ಥಿಕ ಜಗಕ್ಕೆ ಜಾರಿ ಮೆಲುದನಿಯಲ್ಲಿ ಅಪ್ಪಾಜಿ *ನನಗೆ ಪರಶಿವನೇ ಗಂಡ* ನಾನು ಮದುವೆ ಆಗಬಾರದೆಂದು ದೃಢ ನಿರ್ಧಾರ ಮಾಡಿದ್ದೇನೆ ಎನ್ನುವಳು.
 ಎಂದೂ ಉಹಿಸದ, ನಿರೀಕ್ಷೆಗೂ ಮೀರಿದ ಮಗಳ ಮಾತು ಕೇಳಿದ ತಂದೆ ಏನೂ ಹೇಳಲಾಗದೆ ಒಂದು ಕ್ಷಣ ಮಾತು ಹೊರಡದೆ ದಿಗ್ಭ್ರಮೆಗೊಳಗಾದರು. ಸ್ವಲ್ಪ ಸಮಯದ ನಂತರ ಸವಾರಿಸಿಕೊಂಡು ಮಗಳೇ ಇದು ಹೇಗೆ ಸಾಧ್ಯವಮ್ಮ, ಹಿರಿಯರು ಒಪ್ಪುವರೇ, ಧರ್ಮ ಸಮ್ಮತವೇ ? ಎಂದು ಪ್ರಶ್ನಿಸುವರು.
ಅಪ್ಪಾ ನನ್ನನು ನೀವು ಯಾಗ ಮಾಡಿ ಅಲ್ಲೇ ಪಡೆದಿದ್ದು, ಆಗಾಗಿ ನಾನು ಯಜ್ನಮುಖದಿಂದ ಬಂದವನನ್ನೆ ಕೈ ಹಿಡಿದು ಬಾಳಬೇಕಾದ್ದು ನನ್ನ ಧರ್ಮ ಎನ್ನುವಳು. ಅಂದರೆ ಈ ಲೋಕದಲ್ಲಿ ನನ್ನ ಕೈ ಹಿಡಿಯುವಂತಹವರು ಯಾರೂ ಇಲ್ಲ.ನನ್ನ ಪತಿಯಾಗಬಲ್ಲವನು ಒಬ್ಬನೇ ಒಬ್ಬ ಅವನೇ ಈಶ್ವರ ಅವನನ್ನೇ ವರಿಸಲು ನನ್ನ ಅಂತರ್ವಾಣಿಯು ಪ್ರೇರಣೆ ನೀಡುತ್ತಿದೆ ಎಂದು ತಿಳಿಸಲು ತಂದೆ ತಾಯಿಗಳಿಬ್ಬರೂ ಮತ್ತೆ ದಿಗ್ಭ್ರಮೆಗೆ ಒಳಗಾಗಿ ಏನೂ ಹೇಳಲಾಗದೆ,ಏನೂ ತೋಚದೆ ಕಲ್ಲು ಬಂಡೆಯಂತೆ ನಿಂತು ಬಿಟ್ಟರು.
ವಾಸವಿಯು ನನಗೆ ಬೇರಾವ ದಾರಿಯು ಇಲ್ಲ, ಸಾಂಸಾರಿಕ ಜೀವನದತ್ತ ಯೋಚಿಸುವುದೂ ಇಲ್ಲ ನನಗೆ ಈ ಲೌಕಿಕ ಲೋಕದಿ ಯಾವ ಆಸಕ್ತಿಯೂ ಇಲ್ಲ. ನೀವು ದಯಮಾಡಿ ಅಪ್ಪಣೆ ಕೊಡಿ,ನಾನು ಕೈಲಾಸ ಪತಿಯನ್ನು ಭಕ್ತಿಯಿಂದ ಆರಾಧಿಸಿ ಪತಿಯನ್ನಾಗಿ ಪಡೆಯುತ್ತೇನೆ ನನಗೆ ತಾವು ಈ ಒಂದು ಆಸೆಯನ್ನು ನೆರವೇರಿಸಿ ಕೊಡಿ ಎಂದು ಖಡಾಖಂಡಿತವಾಗಿ ತನ್ನ ಇಂಗಿತವನ್ನು ವ್ಯಕ್ತಡಿಸಿದಳು.
ಕುಸುಮ ಶ್ರೇಷ್ಠಿ ದಂಪತಿಗಳಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತೆ ಆಯಿತು. ನಾವೆಲ್ಲಿ ಆ ಶಿವನೆಲ್ಲಿ ಮಗಳಿಗೇನಾದರು ಬುದ್ಧಿ ಭ್ರಮೆಯೇ ಎಂಬ ಸಂದೇಹ ಮೂಡಿದರೂ ಪ್ರಶಾಂತವಾಗಿರುವ, ಪ್ರಫುಲ್ಲವಾಗಿರುವ, ಪ್ರಸನ್ನ ಚಿತ್ತಳಾಗಿರುವ ಮಗಳ ಮೊಗವನ್ನು ಕಂಡು ಎನೂ ತೋಚದಂತೆ ಚಡಪಡಿಸಿದರು. ಚಿಂತೆಯಲ್ಲಿ ಮುಳುಗಿದರು ಅದೇ ಸಮಯಕ್ಕೆ ಗುರುಗಳು ಬಂದರೂ ಗಮನಿಸದಾದರು, ರಾಜದಂಪತಿಗಳಿಗೆ ಶುಭವಾಗಲಿ ಎಂಬ ಹಾರೈಕೆ ಮಾತು ಕೇಳಿ ಎಚ್ಚೆತ್ತುಕೊಂಡರು.
ನಂತರ ಗುರುಗಳ ಕ್ಷಮೆ ಕೇಳಿ ಸ್ವಾಗತಿಸಿ, ಉಪಚರಿಸಿ ಮಗಳ ಇಚ್ಚೆಯನ್ನು ತಿಳಿಸಿದರು. ಗುರುಗಳೇ ಯಾಗ ಮಾಡಿ ಮಗಳನ್ನು ಪಡೆಯಲು ಮಾರ್ಗದರ್ಶನ ನೀಡಿದ ನೀವೇ ನಮಗೆ ಈಗಲೂ ದಾರಿ ತೋರಿಸಬೇಕು ಎಂದು ವಿನಂತಿಸಿದರು.
ಗುರುಗಳು ವಾಸವಿಯ ದಿವ್ಯತೇಜಸ್ವಿ ಮುಖವನ್ನು ಒಮ್ಮೆ ನೋಡಿ ರಾಜ ಆಕೆ ಯಾರೆಂದು ಬಲ್ಲಿರಾ ಅವಳು ಕೇವಲ ನಿಮ್ಮ ಮಗಳು ಮಾತ್ರ ಅಲ್ಲ, ಆಕೇ ಸಾಕ್ಷತ್ ಪಾರ್ವತಿ, ಮಗಳೆಂಬ ಮೋಹ ಬಿಡಿ, ಸಹಜವಾದ ದೈವದತ್ತ ಆಕೆಯ ಆಸೆಯನ್ನು ಈಡೇರಿಸಿ ಮತ್ತು ಅದಕ್ಕೆ ಬೇಕಾದ ಸಕಲ ವಿಶಿಷ್ಟ ವ್ಯವಸ್ಥೆಯನ್ನು ಮಾಡಿಕೊಡಿ,ಇದರಿಂದ ನಿಮಗೂ ಒಳ್ಳೆಯದಾಗುತ್ತದೆ, ಲೋಕ ಕಲ್ಯಾಣವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
ಧರ್ಮದ ಒಳ ಮರ್ಮವನ್ನು ಅರ್ಥಮಾಡಿಕೊಂಡ ಕುಸುಮ ಶ್ರೇಷ್ಠಿ ,ಮಗಳೆಂಬ ವ್ಯಾಮೋಹದಿಂದ ಹೊರಬಂದು ಗುರುಗಳ ಮಾರ್ಗದರ್ಶನದಂತೆ, ವಾಸವಿಯ ಇಚ್ಚೆಯನ್ನು ಈಡೇರಿಸಲು ಸಜ್ಜಾದರು.
ಮಗಳ ಮೇಲಿನ ಸಂಪೂರ್ಣ ಮಮತೆಯನ್ನು ಬಿಡಲಾರದೆ ನಿನಗೆ ಬೇಕಾದ ವ್ಯವಸ್ಥೆಯನ್ನು ಅರಮನೆಯಲ್ಲೆ ಮಾಡಿಕೊಡುವೇವು ತಪಸ್ಸು ಮಾಡುತ್ತೆನೆಂದು ಕಾಡಿಗೆ ಹೋಗುವ ಅವಶ್ಯಕತೆ ಇಲ್ಲ ಎಂದು ಒಲ್ಲದ ಮನಸ್ಸಿನಿಂದ ಹೇಳಿ ಕಣ್ಣಾಲಿಗಳನ್ನು ತುಂಬಿಕೊಳ್ಳುವರು.
ಆದರೆ ವಾಸವಿ ದೃಢ ಚಿತ್ತದಿಂದ ದೃಢವಾದ ದನಿಯಲ್ಲಿ ನೀವು ನನ್ನ ಮೇಲಿನ ವ್ಯಾಮೋಹದಿಂದ ಹೀಗೆ ಹೇಳುತ್ತಿರುವಿರಿ. ನೀವು ವಿವೇಕಿಗಳು, ಹಿರಿಯರು ಯೋಚಿಸಿ ನೋಡಿ ನಿಮ್ಮ ಹತ್ತಿರವಿದ್ದು, ರಾಜ ಬೋಗದಲ್ಲಿ ತಪಸ್ಸು ಮಾಡಲು ಸಾಧ್ಯವೇ ? ಮಗಳೆಂಬ ಮಮತೆಯಿಂದ ಆರೈಕೆ ಮಾಡತೊಡಗಿದರೆ ನೀತಿ ನೇಮ ನಿಷ್ಠೆಯಿಂದ ತಪಸ್ಸು ಮಾಡಲು ಸಾಧ್ಯವೇ ? ಪರಶಿವನಲ್ಲಿ ನನ್ನ ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರೀಕರಿಸುವುದು ಅಸಾಧ್ಯ. ದಯಮಾಡಿ ನನ್ನನು ಅರ್ಥಮಾಡಿಕೊಂಡು ನಿಮ್ಮಿಂದ ದೂರವಾಗಿರಲು ಅವಕಾಶ ಮಾಡಿಕೊಡಿ ಎಂದು ತಿಳಿಸಿ ರಾಜಾಶ್ರಯ ರಾಜೋಪಚಾರದಿಂದ ದೂರ ಉಳಿದು ಊರ ಹೊರಗೆ ಇರುವ ವನವನ್ನೇ ನನ್ನ ತಪೋವನನ್ನಾಗಿ ಮಾಡಿಕೊಳ್ಳುತ್ತೆನೆ ಅಲ್ಲಿನ ಪದ್ಮ ಸರೋವರದಲ್ಲಿ ಮಿಂದು, ಶಿವ ಮಂದಿರದಲ್ಲಿ ಆರಾಧನೆ ಮಾಡುವೆನು ಎಂದು ತಿಳಿಸಿದಳು.
ದುಃಖ ತಪ್ತರಾದ ತಂದೆ ತಾಯಿಗಳನ್ನು ಕಂಡು ನೀವು ನಿಮ್ಮ ಮಗಳು ಸಾಕ್ಷಾತ್ ಪರಶಿವನ ಕೈ ಹಿಡಿಯುವಳು ಎಂದು ಸಂತೋಷ ಪಡಬೇಕಲ್ಲವೇ ಎಂದು ಸಮಾಧಾನ ಪಡಿಸಿದಳು.
ರಾಜನ ಆಜ್ನೆಯಂತೆ ತಪೋವನಕ್ಕೆ ಅವಶ್ಯವಾದ ಸಕಲ ಸಿದ್ಧತೆಗಳು ಏರ್ಪಟ್ಟಿತು, ವಾಸವಿ ಮನೆ ದೇವರನ್ನು ಪೂಜಿಸಿದಳು.ತಂದೆತಾಯಿಯರ ಪಾದ ಪೂಜೆಮಾಡಿದಳು, ಗುರುಗಳಿಗೆ ನಮಸ್ಕರಿಸಿದಳು, ರತ್ನಾಭರಣಗಳನ್ನು ದಾಸಿಯರಿಗೆ ಹಂಚಿದಳು. ಶುಭ್ರವಾದ ಬಿಳಿಯ ಬಟ್ಟೆಯನ್ನು ಉಟ್ಟುಕೊಂಡಳು, ತಲೆಗೂದಲನ್ನು ನೀಳವಾಗಿ ಬಿಟ್ಟು ರುದ್ರಾಕ್ಷಿಗಳನ್ನು ಧರಿಸಿದಳು, ಕೃಷ್ಣಾಜಿನ, ಕಮಂಡಲಗಳನ್ನು ಹಿಡಿದು,ಭಸ್ಮಧಾರಣೆ ಮಾಡಿ ವನದತ್ತ ಪ್ರಯಾಣ ಬೆಳೆಸಿದಳು.
ಸಖಿಯರಿಗೆ ತನ್ನ ಕಣ್ಣಿಗೆ ಬೀಳದಂತೆ ಕಟ್ಟಪ್ಪಣೆ ಮಾಡಿದಳು. ಸಖಿಯರು ಸುರ್ಯೊದಕ್ಕೆ ಮುಂಚೆ ಪೂಜೆಗೆ ಬೇಕಾದ ಸಕಲ ವ್ಯವಸ್ಥೆ ಮಾಡಿ ವಾಸವಿ ಬರುವುದರೊಳಗೆ ಕಣ್ಣಿಗೆ ಬೀಳದಂತೆ ದೂರ ಉಳಿಯುತ್ತಿದ್ದರು.
ವಾಸವಿಯು ಧ್ಯಾನದಲ್ಲಿ ಮಗ್ನಳಾಗಿ, ತಪಸ್ಸಿನಲ್ಲಿ ನಿರತರಾಗಿರುವುದನ್ನು ಕಂಡು ಪುತ್ರಿ ವಾತ್ಸಲ್ಯದ ಭಾವ ಹೋಗಿ ಪೂಜ್ಯ ಭಾವನೆ ಮೊಳೆತು ತಂದೆ ತಾಯಿಗಳು ಧನ್ಯತೆಯನ್ನು ಅನುಭವಿಸಿದರು.
ಅಣತಿ ಕಾಲದಲ್ಲೇ ಹದಿನೆಂಟು ಪಟ್ಟಣಗಳಲ್ಲಿಯೂ ವಾಸವಿಯ ಕೀರ್ತಿ ಹಬ್ಬಿತು. ಯಾಗದಿಂದ ಜನಿಸಿದಾತೆ ಶಿವನಲ್ಲೇ ಮನಸ್ಸು ನೆಟ್ಟಿರುವುದರಿಂದ ಅವಳು ಸಾಕ್ಷಾತ್ ಪಾರ್ವತಿಯೇ ಸರಿ ಎಂದು ಜನ ಒಪ್ಪಿಕೊಂಡು ಪೂಜ್ಯ ಭಾವನೆಯಿಂದ ಕರ ಮುಗಿದು ದೈವತ್ವಕ್ಕೆ ನಮಸ್ಕರಿಸ ತೊಡಗಿದರು.
ಆಂದ್ರ ದೇಶದ ಅಧಿಪತಿ ವಿಮಲಾದಿತ್ಯ ವಿಷ್ಣುವರ್ಧನ, ಕುಸುಮ ಶ್ರೇಷ್ಠಿ ಅವನ ಸಾಮಂತ ರಾಜರಲ್ಲಿ ಒಬ್ಬ. ಬಹಳ ಬಲಶಾಲಿಯಾದ ವಿಷ್ಣುವರ್ಧನ ಮಹಾರಾಜನ ವಿಜಯ ಯಾತ್ರೆಯ ಸಂದರ್ಭದಲ್ಲಿ ಎಲ್ಲಾ ಸಾಮಂತರು ಮತ್ತು ಸುತ್ತಮುತ್ತಲಿನ ರಾಜರು ಆದರದಿಂದ ಸ್ವಾಗತಿಸಿ, ಗೌರವಿಸಿ, ಕಪ್ಪಕಾಣಿಕೆಗಳನ್ನು ನೀಡಿ ಬಿಳ್ಕೊಡುತ್ತಿದ್ದರು.
ವಿಷ್ಣುವರ್ಧನ ಮಹಾರಾಜ ವಿಜಯ ಯಾತ್ರೆ ಮುಗಿಸಿ ಹಿಂತಿರುಗುವ ಸಂದರ್ಭದಲ್ಲಿ ಯಾವುದೋ ಒಂದು ವಿಶೇಷ, ಅಗೋಚರ  ಶಕ್ತಿ ಸೆಳೆದು,ಅವ್ಯಕ್ತ ರಸಾನುಭವವಾಯಿತು. ಅತ್ತ ಗಮನಿಸಲು ಅದೊಂದು ಅಪ್ರತಿಮ ತಪೋವನವಾಗಿತ್ತು. ಅಲ್ಲಿನ ವಾತಾವರಣ,ಆಕರ್ಷಕ ಪರಿಸರ, ಪ್ರಭಾವಯುತ ಚೆಲುವಿನ, ಸೌಂದರ್ಯದ ತಾಣ ಪೆನುಗೊಂಡ ಪಟ್ಟಣದತ್ತ ತನ್ನ ಸೈನ್ಯವನ್ನು  ಹೊರನಾಡಿನಲ್ಲಿ ಬಿಟ್ಟು, ಸಾಮಂತ ರಾಜನಿಗೆ ಸುಳಿವು ನೀಡದೆ ತಾನೊಬ್ಬನೇ ಅತ್ತ ತೆರಳಿದನು.
ಸುಂದರವಾದ ಸ್ತ್ರಿಯರು ತಪೋವನದ ಗುಡಿಯ ಪೂಜಾ ವ್ಯವಸ್ಥೆಗಳನ್ನು ಮಾಡಿ ನೋಡುವಷ್ಟರಲ್ಲಿ ಕಣ್ಮರೆಯಾಗಿ ಬಿಡುತ್ತಿದದ್ದು ಕೂತುಹಲ ಮತ್ತಷ್ಟು ಹೆಚ್ಚಿಸಿತು. ತಪೋವನ ಸಾತ್ವಿಕ ಕಳೆಯಿಂದ, ದೇವಾಲಯ ದಿವ್ಯತೆಯಿಂದ ಕೂಡಿದ್ದರೂ ಜನ ಸಂಚಾರ ಇಲ್ಲದೆ ಇರುವುದು ಬೆರಗು ಮೂಡಿಸಿತು, ದೇವಾಲಯದತ್ತ ಒಂದು ಹೆಜ್ಜೆ ಇಟ್ಟ ಅದೇ ಸಮಯಕ್ಕೆ ಆಗ ತಾನೆ ಮಿಂದು ಬಂದಿದ್ದ ರೂಪರಾಶಿ ವಾಸವಿ ಅವನ ಕಣ್ಣಿಗೆ ಬಿದ್ದಳು. ಚೆಲುವಿನ ಖನಿಯನ್ನು ನೋಡಿದ ಮಹಾರಾಜ ವಿಗ್ರಹದಂತೆ ನಿಂತು ಬಿಟ್ಟ. ಆಕೆಯ ಆಕರ್ಷಣೆಯಿಂದ ಮನಸ್ಥಿತಿಯನ್ನು ಕಳೆದುಕೊಂಡ. ವಾಸವಿ ಯು ಶಿವನಿಗೆ ಷೋಡಶ ಪೂಜೆಯನ್ನು ಸಲ್ಲಿಸಿ ತನ್ಮಯತೆಯಿಂದ ಇಂಪಾಗಿ ಭಾವ ಭಕ್ತಿಯಿಂದ ಹಾಡತೊಡಗಿದಳು. ಗಾಯನದ ಸೊಬಗನ್ನು ಸವಿಯುತ್ತ, ತನ್ನೇ ತಾ ಮರೆತು ರಾಜ ನಿದ್ರೆಗೆ ಜಾರಿದನು.
ರಾಜ ಪರಿವಾರಕ್ಕೆ ವಿಷ್ಣುವರ್ಧನ ಮಹಾರಾಜ ಬಂದಿರುವ ಸುದ್ದಿ ಮುಟ್ಟಲು ದೂತರ ಮೂಲಕ ಹುಡುಕಿಸೆ ತಪೋವನದಲ್ಲಿ ಏಕಾಂಗಿಯಾಗಿ ನಿದಿರಾದೇವಿಗೆ ಶರಣಾಗಿರುವ ವಿಷಯ ತಿಳಿಯಿತು ಸ್ವತಃ ಕುಸುಮ ಶ್ರೇಷ್ಠಿ ಮಂಗಳವಾದ್ಯಗಳ ಸಹಿತ ವನಕ್ಕೆ ಬಂದ.
ಗಾಯನದಲ್ಲಿ ಲೀನವಾಗಿದ್ದ ವಾಸವಿಗೆ ಅನಿರೀಕ್ಷಿತವಾಗಿ ಉಂಟಾದ ಸದ್ದು, ಗದ್ದಲಗಳಿಂದ ಏಕಾಗ್ರತೆಗೆ ಭಂಗವಾಗಿ ಹೊರಗೆ ಬಂದು ನೋಡಲು ಕುಸುಮ ಶ್ರೇಷ್ಠಿ ಸಕಲ ಪರಿವಾರದೊಂದಿಗೆ ಅಲ್ಲಿದ್ದ. ಅದಿರಾಜನು ಬಂದಿರುವ ಸುದ್ದಿಯೂ ವಾಸವಿಯ ಅರಿವಿಗೆ ಬಂತು. ವಿಷ್ಣುವರ್ಧನ ಎಚ್ಚರಗೊಳ್ಳಲು ರಾಜೋಪಚಾರದಂತೆ ಸುಹಾಸಿನಿಯರು ಆರತಿ ಬೆಳಗಿ ಹಣೆಗೆ ಶ್ರೀರಕ್ಷೆ ಇಡುವಾಗ ನಡುವೆ ಕೌಸ್ತುಭ ಮಣಿಯಂತೆ ಕಂಗೊಳಿಸುತ್ತಿದ್ದ ವಾಸವಿ ಕಣ್ಣಿಗೆ ಬಿದ್ದಳು. ಮತ್ತೆ ವಿಷ್ಣುವರ್ಧನನ ಮನಸು ಅಲ್ಲೋಲ ಕಲ್ಲೋಲವಾಗಿ ವಾಸವಿಯಲ್ಲಿ ಮನಸಾಗಿ ಮದುವೆಯಾಗಬೇಕೆಂದು ಬಯಸಿ,ನಿರ್ಧರಿಸಿ ಅವಳ ಪೂರ್ವಾಪರ ವಿಚಾರ ತಿಳಿದುಕೊಂಡು ನೆಪ ಮಾತ್ರಕ್ಕೆ ರಾಜೋಪಚಾರ ಸ್ವೀಕರಿಸಿ,ಕುಸುಮ ಶ್ರೇಷ್ಠಿ ತನಗಾಗಿ ಗೊತ್ತು ಮಾಡಿದ ದಿವ್ಯ ಭವನಕ್ಕೆ ತೆರಳಿದನು.
ವಿಷ್ಣುವರ್ಧನನ ಮನದ ಶಾಂತಿ ಕದಡಲು ಕಾರಣವಾದ ವಿಷಯವನ್ನು ಅರಿತ ಮಂತ್ರಿಗಳು‌ ಕುಸುಮ ಶ್ರೇಷ್ಠಿಯ ಅರಮನೆಗೆ ಬಂದು ತಮ್ಮ ರಾಜನ ಬಯಕೆಯನ್ನು ತಿಳಿಸಿ ಈಡೇರಿಸಿಕೊಡಲು ಪ್ರಾರ್ಥನೆ ಮಾಡಿ ಕೊಂಡರು. ಕುಸುಮ ಶ್ರೇಷ್ಠಿ ರಾಜನ ಬಯಕೆಯನ್ನು ಕೇಳಿ ಹೌಹಾರಿದನು. ಅದನ್ನು ತೋರಗೊಡದೆ ಮಂತ್ರಿಯನ್ನು ಗೌರವದಿಂದ ಉಪಚರಿಸಿ ಕಳುಹಿಸಿಕೊಟ್ಟನು.
ತಮಗೆ ಒದಗಿ ಬಂದ ಜಟಿಲವಾದ ಸಮಸ್ಯೆಯನ್ನು ತನ್ನ ಮಂತ್ರಿಗಳೊಡನೆ ಚರ್ಚಿಸಿದನು. ಸಚಿವರುಗಳು ವಿಷಯದ ಗಂಭೀರತೆಯನ್ನು ಅರಿತು ಸುದೀರ್ಘವಾಗಿ ಚರ್ಚೆ ಮಾಡಿ, ಇಂತಹ ವಿಚಾರಗಳಲ್ಲಿ ದುಡುಕಿ ತ್ವರಿತವಾಗಿ ನಿರ್ಧಾರ ಕೈಗೊಂಡು, ಅವರಿಗೆ ತಿಳಿಸುವುದು ಬೇಡ ನಿದಾನವಾಗಿ ಯೋಚಿಸಿ ತೀರ್ಮಾನ ಮಾಡೋಣ ಎಂದು ಸಲಹೆ ಇತ್ತರು. ಇದು ಕುಲಕ್ಕೆ ಸಂಬಂಧ ಪಟ್ಟ ವಿಚಾರವಾಗಿದ್ದು ತಮ್ಮ ಎಲ್ಲಾ ಗೋತ್ರಜರಿಗೂ ತಿಳಿಸಿ ಅವರ ಅಭಿಪ್ರಾಯದಂತೆ ನಡೆಯುವುದು ವಿಹಿತ ಎಂಬ ಸಲಹೆಯನ್ನು ಸಹ ನೀಡಿದರು.
ಮತ್ತೆ ಕುಸುಮ ಶ್ರೇಷ್ಠಿ ವಿಷ್ಣುವರ್ಧನನ ಮಂತ್ರಿಯನ್ನು ಕರೆಸಿ ಸಾಮ್ರಾಟರು ನನ್ನಂತ ಸಾಮಂತರ ಮಗಳನ್ನು ಅಪೇಕ್ಷೆ ಪಟ್ಟಿರುವುದು ನಮ್ಮ ಪುಣ್ಯ ಆದರೇ ಇದು ಮತಧರ್ಮದ ಪ್ರಶ್ನೆಯಾಗಿರುವುದರಿಂದ ಬಂದು ಬಳಗ ಬಾಂಧವರೊಡನೆ ಯೋಚಿಸಿ ನಿರ್ಧಾರ ಕೈಗೊಳ್ಳಲು ಸ್ವಲ್ಪ ಸಮಯದ ಅವಕಾಶ ಮಾಡಿಕೊಡಲು ನಮ್ಮ ಪರವಾಗಿ ತಾವು ಸಾಮ್ರಾಟರಿಗೆ ತಿಳಿಸಬೇಕೆಂದು ಬಿನ್ನವಿಸಿಕೊಂಡರು.
ಮಂತ್ರಿಗಳು ರಾಜನ ಪರವಾಗಿ ಎಚ್ಚರಿಕೆ ನೀಡಿ ರಾಜನ ಬಯಕೆಯನ್ನು ಈಡೇರಿಸದಿದ್ದರೆ ಆಗುವ ವಿಪತ್ತನ್ನು ತಾವು ಅನುಭವಿಸಬೇಕಾಗುತ್ತದೆ ಎಂದು ಹೇಳಿ ವಿಷ್ಣುವರ್ಧನ ಮಹಾರಾಜನ ಬಳಿ ಬಂದು ಅಲ್ಲಿ ನಡೆದ ವಿಚಾರಗಳನ್ನೆಲ್ಲ ತಿಳಿಸಿದರು. ಕೋಪಗೊಂಡ ವಿಷ್ಣುವರ್ಧನ ಕಿಡಿಕಾರಿ, ಈಗಲೇ ಸೈನ್ಯವನ್ನು ಕಳುಹಿಸಿ,  ಬಲವಂತವಾಗಿಯಾದರು ಸರಿ ಕನ್ಯಾರತ್ನವನ್ನು ಎಳೆದು ತಿನ್ನಿರಿ ಎಂದು ರಾಜಾಜ್ನೆ ಹೊರಡಿಸಿದನು.
ಮಂತ್ರಿಗಳು ಆತುರದ ಪರಿಣಾಮವನ್ನು ಅರಿತು ರಾಜನನ್ನು ಸಮಾಧಾನ ಪಡಿಸಿ, ಮನವರಿಕೆ ಮಾಡಿಕೊಡಲು ಕಾದು ನೋಡಲು ಒಪ್ಪಿದನು ಆದರೇ ಸಮಾಲೋಚನೆ ನೆವದಿಂದ ಕುಸುಮ ಶ್ರೇಷ್ಠಿಗಳನ್ನು ಬರಮಾಡಿಕೊಂಡು ಮಾತಿನ ನಡುವೆ ತನ್ನ ಆಸೆಯನ್ನು ಈಡೇರಿಸಲು ಸೂಚಿಸಿದನು. ಕುಸುಮ ಶ್ರೇಷ್ಠಿ ಸಹ ನಯವಾಗಿ ವಿವೇಕಯುತವಾಗಿ ಮಾತನಾಡಿ  ಅರಮನೆಗೆ ಹಿಂತಿರುಗಿದನು. ಮದಾಂದ ವಿಷ್ಣುವರ್ಧನನು ವಾಸವಿಯನ್ನು ಮನದುಂಬಿ ಕೊಂಡೆ ರಾಜಧಾನಿಗೆ ಮರಳಿದನು.
ಕುಸುಮ ಶ್ರೇಷ್ಠಿ ತಮಗೆ ಬಂದ ವಿಪತ್ತನ್ನು, ಸಾಮ್ರಾಟರ ಬಯಕೆಯನ್ನು ತಿಳಿಸಲು ಒಂದು ಸಮಾಲೋಚನೆ ಸಭೆಯನ್ನು ಕರೆದು ಕುಲಗುರುಗಳನ್ನು, ಮಂತ್ರಿ, ಮಹೋದಯರನ್ನು, ತನ್ನ ಗೋತ್ರಜರನ್ನು ಆಹ್ವಾನಿಸಿದನು. ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಕೆಲವರು ವೀರ ಧೀರ ಶೂರ ವಿಷ್ಣುವರ್ಧನನ ನಿಲುವಿನ ಪರವಾಗಿ ಲೌಕಿಕ ಬದುಕಿನ 612 ಗೋತ್ರದವರು ನಿಂತರೆ, ಸ್ವಾಭಿಮಾನಿ ಹಿತಚಿಂತಕರಾದ 102 ಗೋತ್ರದವರು ವಿರೋಧ ವ್ಯಕ್ತಪಡಿಸಿದರು. ಕುಸುಮ ಶ್ರೇಷ್ಠಿಯು ಸಹ ದುಷ್ಟ ಮಹಾರಾಜನ ಧರ್ಮ ಸಮ್ಮತ್ತವಲ್ಲದ ಬಯಕೆಯನ್ನು ಒಪ್ಪಂದ ಕಾರಣ 612 ಗೋತ್ರದವರು ಕೋಪಗೊಂಡು ಸಾಮಂತನ ಸಂಬಂಧವನ್ನೇ ದಿಕ್ಕರಿಸಿ ರಾಜ್ಯ ಬಿಟ್ಟು ತೆರಳಿದರು.
ಪೆನುಗೊಂಡ ಸಂಸ್ಥಾನ ಕೈಗೊಂಡ ತೀರ್ಮಾನವನ್ನು ತಿಳಿದ ವಿಷ್ಣುವರ್ಧನ ಆವೇಶಕ್ಕೆ ಬಲಿಯಾಗಿ, ಕೋಪಗೊಂಡು ಯುದ್ಧವನ್ನು ಸಾರಿ ಆದರೆ ಸಾರಥ್ಯವನ್ನು ತಾನೇ ವಹಿಸಿಕೊಂಡ.
ಯುದ್ಧದಿಂದ ಆಗುವ ಅನಾಹುತಗಳ ಅರಿವಿದ್ದ ಕುಶಾಗ್ರಮತಿ, ಶಾಂತ ಚಿತ್ತಳಾದ ದೈವ ಸ್ವರೂಪಿ ವಾಸವಿ ಸಾವು ನೋವುಗಳನ್ನು ತಪ್ಪಿಸಲು ವಿಮಾಲಾದಿತ್ಯ ವಿಷ್ಣುವರ್ಧನನ ಧರ್ಮ ಸಮ್ಮತ್ತವಲ್ಲದ ಆಸೆಯನ್ನು ತಿರಸ್ಕರಿಸಿ ಯಾಗ ಜನಿತೆ ಮತ್ತೆ ಯಾಗಾಗ್ನಿಯಲ್ಲಿಯೇ ಲೀನವಾಗಿ ಯುದ್ದವನ್ನು ತಪ್ಪಿಸಲು ಮುಂದಾಗಿ ತನ್ನ ದೃಢವಾದ ನಿರ್ಧಾರವನ್ನು ತಂದೆ, ತಾಯಿ,ಸಹೋದರ,ಕುಲಗುರುಗಳಿಗೆ ತಿಳಿಸಿದಳು.
ಇದೆಲ್ಲವೂ ದೈವ ನಿರ್ಣಯವೆಂದರಿತ ಕುಸುಮ ಶ್ರೇಷ್ಠಿ ದಂಪತಿಗಳು, ಕುಲಗುರುಗಳು ತಾವು ಸಹ ವಾಸವಿಯನ್ನು ಅನುಸರಿಸಲು ನಿರ್ಧಾರ ಕೈಗೊಳ್ಳಲು ಈ ವಿಷಯ ಅರಿತ ಸಾಮಂತ ರಾಜನ ಪರವಾಗಿ ನಿಂತ 102ಗೋತ್ರಜರು ಸಹ ಅಗ್ನಿ ಪ್ರವೇಶ ಮಾಡಿ ತಾರ್ಕಿಕ ಅಂತ್ಯ ಕಾಣಲು ಇಚ್ಚಿಸಿದರು. ಇವರೆಲ್ಲರ ಸದಾಶಯದಂತೆ ಅಗ್ನಿ ಕುಂಡಗಳು ಸಿದ್ಧವಾಯಿತು. ರಾಜ ಪರಿವಾರದವರ ಬಲಿದಾನದ ವಿಷಯ ಅರಿತ ಹದಿನೆಂಟು ಊರುಗಳ ಜನಸ್ತೋಮ ಪೆನುಗೊಂಡ ಪಟ್ಟಣದತ್ತ ಹರಿದು ಬಂತು.
ಯಾಗ ಜನಿತೆ ವಾಸವಿ ಒಂದಿನಿತೂ ವಿಚಲಿತಳಾಗದೆ ತನ್ನ ದೃಢವಾದ ನಿರ್ಧಾರದ ಹಿಂದಿರುವ ಉದ್ದೇಶವನ್ನು ಪುರಜನರಿಗೆ ಮನವರಿಕೆ ಮಾಡಿ ಕೊಟ್ಟು, ಸಮಾಧಾನ ಪಡಿಸಿ ಸಂತೈಸಲು ವಾಸವಿಯ ಕಂಗಳ ತುಂಬಾ ತುಂಬಿರುವ ದೈವಿ ತೇಜಸ್ಸನ್ನು ಕಂಡು ಭಾವ ಪರವಶರಾಗಿ ಭಕ್ತಿ ಭಾವದಿಂದ ನಮಿಸತೊಡಗಿದರು. ವಾಸವಿಯು ಧರ್ಮೋಪದೇಶ ನೀಡಿ ಧೈರ್ಯ ತುಂಬಿ ತನ್ನನ್ನು ತಾನು ಆಗ್ನಿದೇವನಿಗೆ ಸಮರ್ಪಿಸಿಕೊಂಡಳು ಈಗಾಗಲೇ ಸಿದ್ಧರಾಗಿ ನಿಂತಿದ್ದ ಇತರರು ಸಹ ವಾಸವಿಯನ್ನು ಅನುಸರಿಸಲು ಅಲ್ಲೊಂದು ಸಾತ್ವಿಕ ವಾತಾವರಣ ನಿರ್ಮಾಣವಾಯಿತು.
ಅಗ್ನಿ ದೇವನ ಮಡಿಲು ಸೇರುತ್ತಾ ಸೇರುತ ಪ್ರಜ್ವಲವಾದ ಜ್ವಾಲೆಯ ನಡುವೆ ವಾಸವಿ ತನ್ನ *ವಿಶ್ವ ರೂಪ* ವನ್ನು ತೋರಿಸಿದಳು.ವಾಸವಿ ದೈವತ್ವವನ್ನು ಪಡೆದು ತ್ರಿಮೂರ್ತಿಗಳ ಸಾಕ್ಷಿಯಾಗಿ, ತ್ರಿಶಕ್ತಿಗಳ ಸ್ವರೂಪವಾಗಿ *ಕನ್ಯಕಾ ಪರಮೇಶ್ವರಿ* ಯಾಗಿ ಧರೆಗವತರಿಸಿದಳು.
ವಾಸವಿಯನ್ನು ಬಯಸಿ ಯುದ್ಧ ಸಾರಲು ಹೊರಟಿದ್ದ ವಿಷ್ಣುವರ್ಧನ ವಿಚಾರವನ್ನು ತಿಳಿದು ಅಸುನೀಗಿದನು. ಮುಂದೆ ವಿರೂಪಾಕ್ಷ ರಾಜನಾದ. ವಿಷ್ಣುವರ್ಧನ ಮಾಡಿದ ತಪ್ಪಿನ ಅರಿವಾಗಿ ಆತನ ಮಗ ರಾಜ ರಾಜೇಂದ್ರ ಕ್ಷಮೆಯಾಚನೆ ಮಾಡಿ
ಹದಿನೆಂಟು ನಗರಗಳು ಒಡೆತನವನ್ನು ನೀಡಿ ಒಂದು ನೂರು ಎರಡು ಗೋತ್ರದವರ ನಾಯಕತ್ವವನ್ನು ವಹಿಸಿ ಕೊಟ್ಟನು.
ಪೆನುಗೊಂಡ ಪುರದಲ್ಲಿ ಒಂದು ಭವ್ಯವಾದ ದೇವಾಲಯ ನಿರ್ಮಾಣವಾಗಿ ಆದಿ ಪರಾಶಕ್ತಿ ಕನ್ಯಕಾಪರಮೇಶ್ವರಿ ವಿಗ್ರಹ ಪ್ರತಿಷ್ಠಾಪನೆ ಆಗಿ ದೇವಿಯ ಆರಾಧನೆ ಪ್ರಾರಂಭವಾಗಿ,ವೈಶ್ಯರ ಪವಿತ್ರ ಕ್ಷೇತ್ರವಾಯಿತು. ಭಕ್ತಿ ಜೈ ಪಾಲಿಗೆ ಅಭಯ ಸನ್ನಿಧಾನವಾಯಿತು.
ನ್ಯಾಯ ಅನ್ಯಾಯಗಳನ್ನು ಲೆಕ್ಕಿಸದ, ಸತ್ಯ ಅಸತ್ಯವನ್ನು ಪಾರಮಾರ್ಷಿಸದ ಉನ್ಮತ್ತ, ಉನ್ಮಾದ ಶಕ್ತಿಯ ವಿರುದ್ಧ ಶಾಂತವಾಗಿ, ಸಾತ್ವಿಕವಾಗಿಯೇ ಉತ್ತರ ನೀಡಿ, ಪರಮೇಶ್ವರನಲ್ಲಿ ನೆಲೆಗೊಂಡಿರುವ ವಾಸವಿಯು *ಕನ್ಯಕಾಪರಮೇಶ್ವರಿ* ಯಾಗಿ ಪೂಜಿಸಲ್ಪಡುತ್ತಿದ್ದು ನಮ್ಮೆಲ್ಲರ ಆರಾಧ್ಯ ದೇವತೆಯೋಗಿದ್ದಾಳೆ. ದುಷ್ಟ ಶಿಕ್ಷಕಿ, ಶಿಷ್ಠರಕ್ಷಿ ಜಗದ್ಪಾಲಕಿಯಾಗಿ ನಮ್ಮನು ಪಾಲಿಸಿ ರಕ್ಷಿಸಿ ಪೋಷಿಸುತ್ತಿದ್ದಾಳೆ.
ಧರ್ಮೋ ರಕ್ಷತಿ ರಕ್ಷಿತಾ: ಲೋಕಾ ಸಮಸ್ತ ಸುಖಿನೋ ಭವಂತು
ಅಕ್ಷರ ಭಕ್ತಿ ಸಮರ್ಪಣೆ
ವೆನ್ನಲ ಕೃಷ್ಣ ತುಮಕೂರು
98457 89124.

Leave a Reply

Your email address will not be published. Required fields are marked *

error: Content is protected !!