ತುಮಕೂರು – ತುಮಕೂರು ನಗರದ ಹಿರಿಯ ಕಾಂಗ್ರೆಸ್ ಮುಖಂಡ ಷಫಿ ಅಹಮದ್ ರವರ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭೇಟಿ ನೀಡಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎನ್ ಗೋವಿಂದರಾಜುರವರಿಗೆ ಬೆಂಬಲ ಕೋರಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷದಿಂದ ತಮ್ಮ ಅಳಿಯ ಹಾಗೂ ಮಾಜಿ ಶಾಸಕ ಡಾ. ರಫೀಕ್ ಅಹಮದ್ ರವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ದೊರೆಯಲಿದೆ ಎನ್ನುವ ವಿಶ್ವಾಸದಲ್ಲಿ ಇದ್ದ ಮಾಜಿ ಶಾಸಕ ಷಫಿ ಅಹಮದ್ ಹಾಗೂ ರಫೀಕ್ ಅಹಮದ್ ರವರಿಗೆ ಕೊನೆಗಳಿಗೆಯಲ್ಲಿ ಕೊಕ್ ನೀಡಿ ಕಾಂಗ್ರೆಸ್ ಪಕ್ಷದಿಂದ ಸಾಮಾನ್ಯ ಕಾರ್ಯಕರ್ತನಾದ ಇಕ್ಬಾಲ್ ಅಹಮದ್ ರವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ತುಮಕೂರು ನಗರ ಕಾಂಗ್ರೆಸ್ ಪಾಳ್ಯದಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಷಫಿ ಅಹಮದ್ ರವರು ಹಾಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ರವರೊಂದಿಗೆ ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದರು.
ಇನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ವಾರ್ಡ್ ಸಭೆಯಲ್ಲೂ ಸಹ ಹಲವು ಮುಖಂಡರು ಷಫಿ ಹಾಗೂ ರಫೀಕ್ ಅಹಮದ್ ರವರ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸೋಮವಾರ ದಿಡೀರ್ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಮುಖಂಡ ಷಫಿ ಅಹಮದ್ ರವರ ಮನೆಗೆ ಭೇಟಿ ನೀಡಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದು, ಷಫಿ ಅಹಮದ್ ಹಾಗೂ ರಫೀಕ್ ಅಹಮದ್ ರವರ ನಡೆ ಈಗ ಯಾರ ಕಡೆ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.
ಅದೂ ಅಲ್ಲದೇ ಕಾಂಗ್ರೆಸ್ ಪಕ್ಷದಿಂದ ಶಾಸಕ ಸ್ಥಾನದ ಆಕಾಂಕ್ಷಿ ಹಾಗೂ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಅತಿಕ್ ಅಹಮ್ಮದ್ ಸಹ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು, ಅದೂ ಅಲ್ಲದೇ ಗೂಡ್ಸ್ ಷೆಡ್ ಕಾಲೋನಿ ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡರಾಗಿದ್ದ ಚೀಚಾ (ಮಾಜಿ ನಗರ ಪಾಲಿಕೆ ಸದಸ್ಯ) ಸೇರಿದಂತೆ ಹಲವಾರು ಮುಸ್ಲಿಂ ಮುಖಂಡರನ್ನು ಜೆಡಿಎಸ್ ಪಕ್ಷವು ತನ್ನತ್ತ ಸೆಳೆದಿದೆ ಆದರೂ ಸಹ ಇಕ್ಬಾಲ್ ಅಹಮ್ಮದ್ ರವರು ಯಾರೊಂದಿಗೂ ಚರ್ಚೆ ಮಾಡದೇ, ಮುಖಂಡರುಗಳನ್ನು ಭೇಟಿ ಮಾಡದೇ ಇರುವುದು ಎಲ್ಲೋ ಒಂದು ಕಡೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಯಿಂದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ರವರು ಸಹ ಗೊಂದಲದಲ್ಲಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಾಮಾನ್ಯ ಕಾರ್ಯಕರ್ತನ ಪರ ಪ್ರಚಾರ ಮಾಡಲು ಯಾರು ಯಾರು ಪ್ರಬಲ ಮುಖಂಡರು ಮುಂದಾಗುತ್ತಾರೋ ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಂತಾಗಿದೆಂದು ಹಲಾವರು ಜನ ಮಾತನಾಡಿಕೊಳ್ಳುತ್ತಿದ್ದಾರೆ.