ತುಮಕೂರು : 2023 ವಿಧಾನಸಭಾ ಚುನಾವಣೆಯ ತುಮಕೂರು ನಗರ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ವಂಚಿತರಾಗಿರುವ ಮಾಜಿ ಸಚಿವ ಸೊಗಡು ಶಿವಣ್ಣರವರ ಕುರಿತು ಇಂದು ಹಲವಾರು ಮಾಧ್ಯಮಗಳಲ್ಲಿ ಜೆಡಿಎಸ್ ಗೆ ಹೋಗುತ್ತಿದ್ದಾರೆಂಬ ಮಾಹಿತಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಮಾದ್ಯಮದವರೊಂದಿಗೆ ಮಾತನಾಡುತ್ತಾ, ಮಾಜಿ ಸಚಿವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ ಹಾಗೂ ಅವರ ಆಗಮನದಿಂದ ನಮ್ಮ ಪಕ್ಷಕ್ಕೆ ನೂರಾನೆಗಳ ಬಲ ಬಂದಂತೆ ಆಗುತ್ತದೆಂದು ಹೇಳಿದರು.
ಮುಂದುವರೆದು ತುಮಕೂರು ನಗರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ವತಃ ನಾನೇ ಅಭ್ಯರ್ಥಿ ಇದರಲ್ಲಿ ಯಾವುದೇ ಗೊಂದಲ ಬೇಡ, ಮಾನ್ಯ ಕುಮಾರಸ್ವಾಮಿಯವರು ಅವರ ಮಾತಿನ ಮೇಲೆ ನಿಲ್ಲುವಂತಹ ವ್ಯಕ್ತಿ ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಾವಣೆ ಮಾಡುವುದಿಲ್ಲವೆಂದು ನನಗೆ ಸ್ಪಷ್ಟನೆ ನೀಡಿದ್ದಾರೆ, ಹಾಗಾಗಿ ಕಾರ್ಯಕರ್ತರು ಯಾವುದೇ ರೀತಿಯಾದ ಗೊಂದಲ್ಲಕ್ಕೆ ಒಳಗಾಗಬಾರದು ಎಂದು ಹೇಳಿದರು.
ಇನ್ನು ನಮ್ಮ ಪಕ್ಷದ ಮುಖಂಡರಾಗಿರುವ ಬೆಳ್ಳಿಲೋಕೇಶ್ ರವರು ಯಾವುದೇ ಕಾರಣಕ್ಕೂ ನಮ್ಮ ಪಕ್ಷವನ್ನು ಬಿಟ್ಟು ಹೋಗುತ್ತಿಲ್ಲ, ಅವರು ನನಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ, ಯಾರೋ ಕಿಡಿಗೇಡಿಗಳು ಸುಮ್ಮನೆ ಊಹಾಪೋಹಗಳನ್ನು ಹುಟ್ಟಿಹಾಕಿ ಜನರಲ್ಲಿ ಗೊಂದಲ ಮೂಡಿಸಿದ್ದಾರೆಂದು ಹೇಳಿದರು.
ಇನ್ನುಳಿದಂತೆ ನರಸೇಗೌಡರವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿರುವ ವಿಷುಯ ಗೊತ್ತಾಗಿದ್ದು, ಅವರೊಂದಿಗೆ ನಮ್ಮ ಪಕ್ಷದ ಯಾರೊಬ್ಬ ಮುಖಂಡರು ಹೋಗಲು ಸಿದ್ಧರಿಲ್ಲ, ಹಾಗೊಂದು ವೇಳೆ ಹೋದರೂ ಸಹ ನಾನು ಚಿಂತೆ ಪಡುವ ಪ್ರಮೇಯವಿಲ್ಲ, ಯಾಕೆಂದರೆ ಮತದಾರರ ಒಲವು ನನ್ನ ಮೇಲಿದೆ ಎಂದರು.
ಏನೇ ಆದರೂ ಜೆಡಿಎಸ್ ಪಕ್ಷದ ತುಮಕೂರು ನಗರ ಕ್ಷೇತ್ರದ ಅಭ್ಯರ್ಥಿ ಸೊಗಡು ಶಿವಣ್ಣರವರಿಗೆ ಯಾವ ಮಾತ್ರಕ್ಕೂ ನಾನು ಬಿಟ್ಟುಕೊಡುವುದಿಲ್ಲವೆಂದು ಮತ್ತೊಮ್ಮೆ ಹೇಳಿದರು.