ಬೆಂಗಳೂರು: ಸರ್ಕಾರಿ ನೌಕರರ ಮುಷ್ಕರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಶೇ.17ರಷ್ಟು ವೇತನ ಹೆಚ್ಚಳ ಮಾಡೋದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.
ಶೀಘ್ರದಲ್ಲಿಯೇ ಘೋಷಣೆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸರ್ಕಾರಿ ನೌಕರರ ಜೊತೆ ಮಂಗಳವಾರ ತಡರಾತ್ರಿವರೆಗೂ ಸಿಎಂ ಸುದೀರ್ಘ ಸಭೆ ನಡೆಸಿದ್ದರು. ಇಂದು ಬೆಳಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ವೇತನ ಹೆಚ್ಚಳದ ಬಗ್ಗೆ ಘೋಷಣೆ ಮಾಡಿದ್ದಾರೆ.
7ನೇ ವೇತನ ಆಯೋಗ ಶಿಪಾರಸ್ಸು ಅನ್ವಯ ಶೇ.17ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಎನ್ಸಿಎಸ್ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ವರದಿ ಕೊಟ್ಟ ನಂತರ NPS ಜಾರಿ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತಂತೆ ಆದಷ್ಟು ಬೇಗ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಇನ್ನು ಸಿಎಂ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಮಾಧ್ಯಮಗಳ ಮೂಲಕ ನನಗೂ ವಿಷಯ ತಿಳಿದಿದೆ. ಅಧಿಕೃತ ಆದೇಶ ಸಿಗೋವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಶೇ.17ರಷ್ಟು ವೇತನ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ನಾವು ಸಹ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಬೇಕು. ಆನಂತರ ನಮ್ಮ ತೀರ್ಮಾನ ಪ್ರಕಟಿಸುತ್ತೇವೆ. ಸದ್ಯ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪ್ರಸಾದ್ ಅವರನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಅಲ್ಲಿಂದ ಬಂದ ನಂತರ ಮುಂದೆ ಏನಾಗುತ್ತೆ ಅಂತ ನೋಡೋಣ ಎಂದರು.