ತುಮಕೂರು : ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ತುಮಕೂರು ನಗರದ ಬಿಜೆಪಿ ಪಕ್ಷದಿಂದ ನಾನು ಅಭ್ಯರ್ಥಿಯಾಗುತ್ತಿದ್ದು, ಅದರ ಪರಿಣಾಮವಾಗಿ ಮಾರ್ಚ್ 12 ರಂದು ನಗರದ ಎನ್.ಆರ್.ಕಾಲೋನಿಯಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ, ತುಮಕೂರು ನಗರದ ಮತದಾರರ ಹತ್ತಿರ ಜೋಳಿಗೆ ಹಿಡಿದು ಮತಭೀಕ್ಷೆಯನ್ನು ಯಾಚಿಸುವುದಾಗಿ ಮಾಜಿ ಸಚಿವರು, ಬಿಜೆಪಿಯ ಕಟ್ಟಾಳು ಎಸ್.ಶಿವಣ್ಣ (ಸೊಗಡು ಶಿವಣ್ಣ)ರವರು ನಗರದ ಖಾಸಗಿ ಹೋಟೆಲ್ವೊಂದರಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ತಿಳಿಸಿದರು.
ತಾನು ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಶಾಸಕನಾಗಿ, ಸಚಿವನಾಗಿ ಮುಖ್ಯವಾಗಿ ಜನರೊಂದಿಗೆ ಬೆರೆತು ಕೆಲಸ ಮಾಡಿರುವ ತೃಪ್ತಿ ನನಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ತುಮಕೂರು ನಗರವನ್ನು ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗೆ ಬಳಸಿಕೊಂಡು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ, ಇದನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬರುತ್ತಿರುವ ನಾನು, ನನ್ನ ಹಿತೈಷಿಗಳು, ಅಪಾರ ಕಾರ್ಯಕರ್ತರು, ಬಹುಮುಖ್ಯವಾಗಿ ಇಂದಿನ ಯುವ ಸಮೂಹ ನನ್ನನ್ನು ಪ್ರೇರೇಪಿಸಿ ತಾವು ಈ ಭಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ನಗರ ಶಾಸಕರಾಗಿ ಆಯ್ಕೆಯಾಗಬೇಕೆಂದು ಒತ್ತಾಯಪೂರ್ವಕವಾಗಿ ಹೇಳುತ್ತಿರುವುದರ ಪರಿಣಾಮ ಈ ಭಾರಿ ಚುನಾವಣಾ ಅಖಾಡಕ್ಕೆ ಸ್ಪರ್ಧಿಸುತ್ತಿದ್ದೇನೆಂದರು.
ಜೊತೆಗೆ ನಾನು ಈ ಹಿಂದೆ ಅಂದರೆ 1994ರಲ್ಲಿ ಕಿಂದರಜೋಗಿಯಂತೆ ಮತ ಬೇಡಿದ ನನ್ನನ್ನು ತುಮಕೂರು ಕ್ಷೇತ್ರದ ಜನತೆ ಪ್ರೀತಿಯಿಂದ ಆಧರಸಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದರು, ಅದರಂತೆ ಈ ಭಾರಿಯ ಚುನಾವಣೆಯ ಠೇವಣಿಯನ್ನು ನಾನು ಜನರಿಂದಲೇ ಸಂಗ್ರಹಿಸಿ, ಅದರಿಂದಲೇ ಠೇವಣಿ ಮತ್ತು ಚುನಾವಣಾ ಪ್ರಚಾರವನ್ನು ಮಾಡುವುದರ ಹಿನ್ನಲೆಯಲ್ಲಿಯೇ ಎರಡು ಜೋಳಿಗೆಯನ್ನು ಹಾಕಿಕೊಂಡು ಬರುವ ಭಾನುವಾರದಂದು (12-03-2023) ಎನ್.ಆರ್.ಕಾಲೋನಿಯಲ್ಲಿನ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಮತಭೀಕ್ಷೆ ಆರಂಭಿಸುತ್ತೇನೆ, ನಂತರ ಸೋಮವಾರದಂದು ಬಟವಾಡಿಯಲ್ಲಿರುವ ವೈದ್ಯನಾಥೇಶ್ವರ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿ ಎ.ಪಿ.ಎಂ.ಸಿ. ಪ್ರಾಂಗಣ ಹಾಗೂ ಅಲ್ಲಿನ ಸುತ್ತಮುತ್ತಲಿನಿಂದ ನಾನು ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದು, ತುಮಕೂರು ನಗರದ ಎಲ್ಲಾ ವರ್ಗದ ಮತದಾರರು ತನ್ನನ್ನು ಪ್ರೋತ್ಸಾಹಿಸಬೇಕಾಗಿ ಮನವಿಯನ್ನು ಮಾಡಿದರು.
ಮುಂದುವರೆದು ತಾನು ತುಮಕೂರಿಗೆ ಹೇಮಾವತಿ ನೀರನ್ನು ಹರಿಸಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ಮಾಡಿದಂತಹ ವ್ಯಕ್ತಿ, ಹಿಂದುತ್ವಕ್ಕಾಗಿ ಜೈಲು ಕದ ಮುಟ್ಟಿ ಬಂದಂತವ, ನಾನು ಬರೀ ಹಿಂದುತ್ವವಾದಿಯಾಗಿಯೇ ಉಳಿದಿಲ್ಲ, ನಾನು ನನ್ನ ಉಸಿರು ಇರುವವರೆವಿಗೂ ಬಿಜೆಪಿಯ ನಿಷ್ಠಾವಂತ ಕಟ್ಟಾಳು ಎಂದು ಹೇಳಿದರಲ್ಲದೇ.
ತನ್ನ ಅಧಿಕಾರವಧಿಯಲ್ಲಿ ನೆಲ, ಜಲ, ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ, ಶಾಲಾ ಕಟ್ಟಡಗಳ ನಿರ್ಮಾಣವಾಗಿದೆ, ಒಳಚರಂಡಿ, ವಿದ್ಯುತ್, ಹಾಗೂ ಇನ್ನಿತರೆ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ನನ್ನ ಅಧಿಕಾರವಧಿಯಲ್ಲಿ ಮಾಡಲು ಬಹಳಷ್ಟು ಶ್ರದ್ಧೆಯಿಂದ ನಿರ್ವಹಿಸಿದ್ದೇನೆಂದರು, ಅಲ್ಲದೇ ತನ್ನ ಅಧಿಕಾರವಧಿಯಲ್ಲಿ ತುಮಕೂರು ನಗರದಲ್ಲಿ ಕೋಮು ಸೌಹಾರ್ದ, ವ್ಯಾಪಾರ ವಹಿವಾಟುಗಳು ಸಹ ಉತ್ತಮವಾಗಿ ನಡೆದು ತುಮಕೂರು ನಗರದಲ್ಲಿ ಶಾಂತಿ ವಾತಾವರಣವನ್ನು ನಿರ್ಮಾಣ ಮಾಡಿದ್ದೇನೆಂದರು.
ಇತ್ತೀಚೆಗೆ ಹಬ್ಬಿದ್ದ ಸಾಂಕ್ರಾಮಿಕ ರೋಗ ಕರೋನಾ ಸಮಯದಲ್ಲಿ ಜನತೆಗೆ ಹತ್ತಿರವಾಗಿ ಅವರ ನೋವುಗಳಿಗೆ ಸ್ಪಂಧಿಸುವಂತಹ ಕೆಲಸ ಮಾಡಿದ್ದೇನೆ, ಎಷ್ಟೋ ಅನೇಕ ಅನಾಥ ಶವಗಳಿಗೆ, ಕರೋನ ಮಹಾಮಾರಿಯಿಂದ ಮರಣ ಹೊಂದಿದ್ದ ವಾರಸುದಾರರಿಲ್ಲದ 22 ಮಂದಿಯ ಅಸ್ಥಿ ವಿಸರ್ಜನೆ ಹಾಗೂ ದಹನ ಸಂಸ್ಕಾರ ಪೂರ್ವಕ ಶ್ರಾದ್ಧವನ್ನೂ ನೆರವೇರಿಸಿದ್ದೇನೆಂದರು.
ನಾನು ಅಂದಿಗೂ, ಇಂದಿಗೂ ಜನಪರವಾಗಿಯೇ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದು, ಜನರು ನನ್ನ ಆಡಳಿತವನ್ನು ನೋಡಿದ್ದಾರೆ, ಪ್ರಸ್ತುತ ಪೀಳಿಗೆಯ ಯುವ ಜನರು ನನ್ನನ್ನು ಶಾಸಕನಾಗಿ ನೋಡಲು ಹಂಬಲಿಸುತ್ತಿದ್ದಾರೆ, ಅಲ್ಲದೇ ತುಮಕೂರು ನಗರ ಜನತೆಯ ಸೇವೆಯನ್ನು ಮಾಡಲು ಒಂದು ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಜನರಲ್ಲಿ ಮತಭಿಕ್ಷೆಯನ್ನೂ ಸಹ ಇದೇ ಸಮಯದಲ್ಲಿ ಕೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಧನೀಯಾ ಕುಮಾರ್, ಜಯಸಿಂಹರಾವ್, ಮಂಜುನಾಥ್ ಗೋಕುಲ್, ಹರೀಶ್, ಶಬ್ಬೀರ್, ಪಂಚಾಕ್ಷರಯ್ಯ, ಆಟೋ ನವೀನ್ ಹಾಗೂ ಇನ್ನೂ ಇತರರು ಉಪಸ್ಥಿತರಿದ್ದರು.