2023ರ ಸಾರ್ವತ್ರಿಕ ಚುನಾವಣೆಯು ಹತ್ತಿರವಾಗುತ್ತಿದ್ದಂತೆ ತುಮಕೂರು ರಾಜಕೀಯದಲ್ಲಿ ಹಲವಾರು ಮಹತ್ತರ ಬದಲಾವಣೆಗಳು ಆಗುತ್ತಿವೆ, ಅದರಲ್ಲಿ ವಿಶೇಷವಾಗಿ ಸಾವಿರಾರು ಕೋಟಿಗಳ ಒಡೆಯ, ಅಟ್ಟಿಕಾ ಗೋಲ್ಡ್ ಸಾಮ್ರಾಜ್ಯದ ಸಾಮ್ರಾಟ್ ಡಾ. ಬೊಮ್ಮನಹಳ್ಳಿ ಬಾಬು @ ಅಟ್ಟಿಕಾ ಬಾಬು ಎಂಬುವವರು ತುಮಕೂರು ನಗರದಿಂದ ಶಾಸಕರಾಗಬೇಕೆಂದು ಹಂಬಲಿಸಿ, ಹರಸಾಹಸ ಪಟ್ಟು ಹಲವಾರು ಕೋಟಿಗಳನ್ನು ತುಮಕೂರಿಗೆ ಸುರಿಯಲು ಆಗಮಿಸಿದ್ದಾರೆ.
ಇದರ ಬೆನ್ನೆಲ್ಲೇ ಈಗಾಗಲೇ ಅಟ್ಟಿಕಾ ಬಾಬು ಹಲವಾರು ಸಂಘ ಸಂಸ್ಥೆಗಳಿಗೆ ಲಕ್ಷಗಳ ಲೆಕ್ಕದಲ್ಲಿ ಧೇಣಿಗೆ, ಸಹಾಯಾರ್ಥ ನೀಡಿರುವ ಉದಾಹರಣೆಗಳನ್ನು ಅವರ ಸೋಷಿಯಲ್ ಮೀಡಿಯಾಗಳಲ್ಲಿಯೇ ಹಾಕಿಕೊಂಡಿದ್ದಾರೆ. ಅದೂ ಅಲ್ಲದೇ ತುಮಕೂರು ನಗರದಲ್ಲಿ ಎರಡು ಭವ್ಯ ಬಂಗಲೆಗಳನ್ನು ಖರೀದಿ ಮಾಡಿ ತುಮಕೂರಿನಲ್ಲಿಯೇ ಠಿಕ್ಕಾಣಿ ಹೂಡಿದ್ದಾರೆ.
ಠಿಕ್ಕಾಣಿ ಹೂಡಿರುವುದೇ ಅಲ್ಲ, ಹಲವಾರು ದೇವಸ್ಥಾನಗಳಿಗೆ ಧೇಣಿಗೆ ನೀಡಿ ಸಾರ್ಥಕತೆ ಮೆರೆದಿದ್ದು, ಚುನಾವಣೆಗೆ ತಾವು ಯಾವ ಪಕ್ಷದಿಂದ ನಿಲ್ಲುತ್ತೇನೆಂದು ಸ್ಪಷ್ಟ ಮಾಹಿತಿಯನ್ನು ನೀಡದೇ ತಮ್ಮದೇ ಆದ ರೀತಿಯಲ್ಲಿ ಚುನಾವಣೆಯ ಪ್ರಚಾರವನ್ನು ಮಾಡುತ್ತಿದ್ದಾರೆ, ಈಗಾಗಲೇ ಹಲವಾರು ಮಂದಿಗೆ ನಾನಾ ರೀತಿಯಲ್ಲಿ ಚುನಾವಣಾ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಅದರ ಭಾಗವಾಗಿ ಇತ್ತೀಚೆಗೆ ಪಿ.ಎನ್.ಕೆ. ಟೌನ್ ಶಿಪ್ ಹತ್ತಿರ ತಮ್ಮ ಭವ್ಯ ಬಂಗಲೆಯ ಬಳಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಾಧಕ ಮಹಿಳೆಯರಿಗೆ ಸನ್ಮಾನ, ಮಹಿಳೆಯರಿಗೆ ವಿಶೇಷ ಉಡುಗೊರೆಗಳನ್ನು ಕೊಡಲು ನಿರ್ಧರಿಸಿದ್ದ ಅಟ್ಟಿಕಾ ಬಾಬು ತಮ್ಮ ರೂಪುರೇಷೆಗಳನ್ನು ತಮ್ಮ ಸಂಗಡಿಗರೊಂದಿಗೆ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ ಸುಮಾರು 500 ಜನರಿಗೆ ಕುಕ್ಕರ್, ಸೀರೆಗಳನ್ನು ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ಆದರೆ ಅವರ ಹಿಂಬಾಲಕರು ಅದನ್ನು ತಪ್ಪಾಗಿ ಗ್ರಹಿಸಿ ಅಟ್ಟಿಕಾ ಬಾಬು ಅವರು 5000 ಹೆಣ್ಣುಮಕ್ಕಳಿಗೆ ಕುಕ್ಕರ್ ಮತ್ತು ಸೀರೆ ನೀಡಲಿದ್ದಾರೆಂದು ಸಾರ್ವಜನಿಕರಿಗೆ ತಪ್ಪು ಮಾಹಿತಿ ಹಬ್ಬಿಸಿದ ಹಿನ್ನಲೆಯಲ್ಲಿ ಉಪ್ಪಾರಹಳ್ಳಿಯ ಬಳಿ ಸುಮಾರು 8000ಕ್ಕೂ ಅಧಿಕ ಮಂದಿ ಹೆಣ್ಣು ಮಕ್ಕಳು ಜಮಾಯಿಸಿ ನಾ ಮುಂದು, ತಾ ಮುಂದು ಎಂದು ಕುಕ್ಕರ್ ಮತ್ತು ಸೀರೆಗಳನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ.
ಅದೂ ಅಲ್ಲದೇ ಹಲವಾರು ಮಂದಿಗೆ ಕುಕ್ಕರ್, ಸೀರೆ ಸಿಗದೇ ಹಿಡಿ ಶಾಪ ಹಾಕುತ್ತಿದ್ದರೆ, ಇನ್ನೂ ಕೆಲವರು ಅಯ್ಯೋ ಪಾಪಿಗಳು ಸುಮ್ಮನೆ ಇಲ್ಲಿಗೆ ಕರೆಯಿಸಿದ್ದಾರೆ, ಬೆಳಿಗ್ಗೆಯಿಂದ ಸಂಜೆವರೆಗೂ ಇಲ್ಲೇ ಕಾದು ಕೂತಿದ್ದೇವೆ, ಯಾವ ಕುಕ್ಕರೂ ಇಲ್ಲ, ಸೀರೆನೂ ಇಲ್ಲ ಎಂದು ಪಿಸು ಪಿಸು ಮಾತಾಡಿಕೊಂಡು ವಾಪಸ್ಸು ಮನೆಗಳಿಗೆ ಹೋಗಿದ್ದಾರೆ.
“ಯಾರೂ ಏನೂ ಸುಮ್ಮನೆ ಕೊಡುವುದಿಲ್ಲ ಎಲ್ಲವೂ ಸ್ವಾರ್ಥವೇ ಎಂಬುದು ಅರಿವಾಗುವುದಾದರೂ ಯಾವಾಗ”
ಸಾವಿರಾರು ಕೋಟಿ ಇರಬಹುದು ಆದರೆ ಅದನ್ನು ನಷ್ಟ ಮಾಡಿಕೊಳ್ಳಲು ಯಾರು ಮುಂದಾಗುವುದಿಲ್ಲ, ಸಾವಿರ ಇರುವುದನ್ನು ಲಕ್ಷ ಕೋಟಿ ಮತ್ತು ಕೋಟಿಗಳ ಕೋಟಿ ಮಾಡುವುದರಲ್ಲಿಯೇ ಇರುತ್ತಾರೆ ಹೊರತು, ಬಿಕಾರಿಯಾಗಲು ಯಾರೂ ಬರುವುದಿಲ್ಲವೆಂಬ ನಿಜ ಅರಿಯುವುದಾದರೂ ಯಾವಾಗ….
ಅಟ್ಟಿಕಾ ಬಾಬು ಏನೋ ತನ್ನಲ್ಲಿ ಬೇಜಾನ್ ದುಡ್ಡು ಇದೇ, ನಾನು ಇಲ್ಲಿ ದುಡ್ಡು ಮಾಡಲು ಚುನಾವಣೆಗೆ ನಿಲ್ಲುತ್ತಿಲ್ಲ, ಬದಲಾಗಿ ನಿಮ್ಮಗಳ ಸೇವೆ ಮಾಡಲು, ನನ್ನಲ್ಲಿರುವ ಹಣ ಹಂಚಲು ಬಂದಿದ್ದೇನೆಂದು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ.
ಇಂದು ಸಾವಿರಗಳ ಲೆಕ್ಕದಲ್ಲಿ ಚೆಲ್ಲಾಡಿದವರು, ನಾಳೆ ಲಕ್ಷಗಳ ಕೋಟಿಗಳ ಲೆಕ್ಕದಲ್ಲಿ ಸರ್ಕಾರದ ದುಡ್ಡು ಅಂದರೆ ಜನರೇ ಸರ್ಕಾರಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಂದಾಯ ಮಾಡಿರುವ ದುಡ್ಡನ್ನು ನಾನಾ ರೀತಿಯಲ್ಲಿ ಹಿಂಪಡೆಯಲೂಬಹುದಲ್ವೇ
“ಒಮ್ಮೆ ಯೋಚಿಸಿ ಜನರ ಯಾರೂ ಯಾವುದನ್ನೂ ಸುಮ್ಮನೇ ಕೊಡುವುದಿಲ್ಲ” ಜನ ಮರಳೋ ಜಾತ್ರೆ ಮರಳೋ ಅನ್ನೋ ಹಾಗೆ ಯಾರೋ ಏನೋ ಕೊಡುತ್ತಾರೆಂದು ತಮ್ಮ ಮತದಾನದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ, ಅವರು ಕೊಟ್ಟಿದ್ದನು ಇನ್ನೋಂದು ರೀತಿಯಲ್ಲಿ ತಮ್ಮಿಂದನೇ ಕಿಸಿದಿಕೊಳ್ಳುತ್ತಾರೆ.
ಜಾಗೃತರಾಗಿ ನಾಗರೀಕರೇ, ಇದೇ ನಮ್ಮ ಸಂದೇಶ………………..