ಕೈ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವವರಿಗೇ ಈ ಭಾರಿ ಟಿಕೇಟ್‌ ; ಹೊಸ ಮುಖಗಳಿಗೆ ಆಸ್ಪದ ಇಲ್ಲ : ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ

ತುಮಕೂರು: ಹಲವು ದಶಕಗಳು ಮತ್ತು ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ಸಂಘಟನೆ, ಜನಸೇವೆ, ಸಾಮಾಜಿಕ ಕಾರ್ಯಚಟುವಟಿಕೆ ಗಳಲ್ಲಿ ತೊಡಗಿ ಪಕ್ಷದಲ್ಲಿ ನಿಷ್ಠಾವಂತರಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ಹೈಕಮಾಂಡ್ ತುಮಕೂರುನಗರ, ಹಾಗೂ ಗ್ರಾಮಾಂತರ ಕ್ಷೇತ್ರಕ್ಕೆ ಟಿಕೆಟ್ ನೀಡಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರಶೇಖರ ಗೌಡ ತಿಳಿಸಿದರು.

 

 

 

 

ಕಳೆದ 25 – 30 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿ ಪಕ್ಷದ ಸಂಘಟನೆಗಾಗಿ ಶ್ರಮಿಸುವ ವ್ಯಕ್ತಿಗಳನ್ನು ಬಿಟ್ಟು ಬೇರೆ ಯಾರ ಹೆಸರನ್ನು ಜಿಲ್ಲಾ ಘಟಕ ಹೈಕಮಾಂಡ್ರೆ ಶಿಫಾರಸ್ಸು ಮಾಡಿಲ್ಲ, ಮಾಡುವುದಿಲ್ಲ ಎಂದು ಚಂದ್ರಶೇಖರ ಗೌಡ ತಿಳಿಸಿದ್ದಾರೆ.

 

 

 

 

 

ಕೆಪಿಸಿಸಿ ಮುಖಂಡರುಗಳು ತುಮಕೂರಿಗೆ ಆಗಮಿಸಿ ಮುಂಬರುವ ತುಮಕೂರು ಜಿಲ್ಲಾ ವಿಧಾನಸಭಾ ಕ್ಷೇತ್ರಗಳಿಂದ 18 ಮಂದಿ ಪ್ರಬಲ ಟಿಕೆಟ್ ಆಕಾಂಕ್ಷಿಗಳನ್ನು ಈಗಾಗಲೇ ಮಾತನಾಡಿಸಿದ್ದಾರೆ, ಅವರಿಂದ ಪಡೆದಿರುವ ಎಲ್ಲಾ ಮಾಹಿತಿಗಳನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೂಲಂಕುಷವಾಗಿ ಚರ್ಚೆ ನಡೆಸಿ ಅದರೊಂದಿಗೆ ತುಮಕೂರು ನಗರ ಕ್ಷೇತ್ರದಿಂದ ಒಟ್ಟು 08 ಮಂದಿ ಅರ್ಜಿಯನ್ನು ಹಾಕಿದ್ದರು ಅದರಲ್ಲಿ 07 ಮಂದಿ (ರಫೀಕ್‌, ಇಕ್ಬಾಲ್‌, ಅತೀಕ್‌, ಶಶಿ ಹುಲಿಕುಂಟೆ, ಫರಹಾನ ಬೇಗಂ, ಹೆಚ್.ಸಿ. ಹನುಮಂತಯ್ಯ, ಜಿ.ಎಲ್.ನರೇಂದ್ರ ಬಾಬು) ಇವರುಗಳನ್ನು ನೇರವಾಗಿ ಭೇಟಿ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ, ಅದರೊಂದಿಗೆ ಮತ್ತೊಬ್ಬರು ಪಿ.ಎಸ್.ಅಯುಬ್‌ @ ಅಟ್ಟಿಕಾ ಬಾಬು @ ಡಾ. ಬೊಮ್ಮನಹಳ್ಳಿ ಬಾಬು ಎಂಬುವರು ಅಂದಿನ ಸಭೆಗೆ ಆಗಮಿಸಿರಲಿಲ್ಲ ಹಾಗೂ ಇದುವರೆವಿಗೂ  ನಮ್ಮ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಬಂದೇ ಇಲ್ಲ, ಯಾವೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಅದೂ ಅಲ್ಲದೇ ಅವರನ್ನು ನಾನು ಪರಸ್ಪರ ಭೇಟಿಯಾಗಲೀ ಮಾಡಿರುವುದಿಲ್ಲ, ಅಲ್ಲದೇ ಅವರ ಮುಖವನ್ನೇ ನೇರವಾಗಿ ನಾನು ನೋಡಿಯೇ ಇಲ್ಲ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್‌ ಗೌಡ ತಿಳಿಸಿದ್ದಾರೆ.

 

 

 

 

ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು @ ಪಿ.ಎಸ್.ಅಯುಬ್  ಎಂಬುವರು ನನಗೆ ಗೊತ್ತಿಲ್ಲ,‌ 3ನೇ ವ್ಯಕ್ತಿಯಿಂದ ನನ್ನನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ನಾನು ಈ ಕ್ಷಣದವರೆಗೂ ಅದಕ್ಕೆ ಆಸ್ಪದ ನೀಡಿಲ್ಲ ಎಂದು ಸಹ ಹೇಳಿದ್ದಾರೆ.  ನಮ್ಮ  ಪಕ್ಷದ ಜಿಲ್ಲಾ ಹಾಗೂ ರಾಜ್ಯ ಮುಖಂಡರು ಯಾರು ಸಹ ನನಗೆ ಅವರನ್ನು ಭೇಟಿ ಮಾಡಲು ಸೂಚಿಸಿಲ್ಲ, ಅವರು ನನ್ನನ್ನು ಭೇಟಿ ಮಾಡುವ ಆವಶ್ಯಕತೆಯೂ ನನಗೆ ಕಂಡು ಬರಲಿಲ್ಲ. ಎಂದಷ್ಟೇ ಹೇಳಿ ನಗರ ಕ್ಷೇತ್ರಕ್ಕೆ ಟಿಕೆಟ್‌ ಆಕಾಂಕ್ಷಿ ಗಳ ಗೊಂದಲ ಇರುವುದು ಸಹಜ, ಅಭ್ಯರ್ಥಿ ಆಯ್ಕೆಯಲ್ಲಿ ಅಂತಿಮ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಜಿಲ್ಲೆಯ ಎಲ್ಲ ಮುಖಂಡರು ಕಾರ್ಯಕರ್ತರು ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತೇವೆ.

 

 

ಆದರೆ ಇದುವರೆವಿಗೂ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಕಾಂಗ್ರೆಸ್ ನಲ್ಲಿ ಪ್ರಮುಖ ಆದ್ಯತೆ ನೀಡಲಾಗುವುದು, ಈಗಷ್ಟೇ ಬರುತ್ತಿದ್ದೇನೆ ಟಿಕೇಟ್‌ ಕೊಡಿ ಎಂದರೆ ಹೇಗೆ ಸಾಧ್ಯ? ಎಂದೂ ಸಹ ಹೇಳಿದರು.

 

 

 

 

ಮೊದಲು ಪಕ್ಷದಲ್ಲಿ ಮತ್ತು ಜಿಲ್ಲಾ ಕಾಂಗ್ರೆಸ್‌ ಪಾರ್ಟಿಯಲ್ಲಿ ಮೊದಲು ಕೆಲಸ ಮಾಡಿ, ಪಕ್ಷವನ್ನು ಸಂಘಟನೆ ಮಾಡಿ, ಕಾರ್ಯಕರ್ತರ ಮನಸ್ಸನ್ನು ಗೆದ್ದು, ಜನರ ಒಲವನ್ನು ಪಡೆಯಬೇಕೇ ವಿನಃ, ವಾಮ ಮಾರ್ಗದಿಂದ ಬಂದು ಟಿಕೇಟ್‌ ಕೇಳುವುದು ಎಷ್ಟು ಮಾತ್ರ ಸಮಂಜಸಕರವಾಗಿಲ್ಲ ಎಂಬುದು ನನ್ನ ಭಾವನೆ ಎಂದು ಹೇಳಿಕೊಂಡರು.

 

 

 

 

ಅಲ್ಲದೇ ಇಲ್ಲಿನ ಸ್ಥಳೀಯರ ಮತ್ತು ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವವರ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಅದಕ್ಕೂ ಮೀರಿ ಹೊರಗಿನವರಿಗೆ ಟಿಕೆಟ್ ನೀಡಿದರೆ ಪಕ್ಷದ ಅಭ್ಯರ್ಥಿಯ ಗೆಲುವು ಹೇಗೆ ಸಾಧ್ಯ ಎಂಬುದನ್ನು ಪಕ್ಷದ ವರಿಷ್ಠರು ಯೋಚಿಸಬೇಕಿದೆ.? ಎಂದಿದ್ದಾರೆ.

 

 

 

ಈ ಮಧ್ಯೆ  ಅಟ್ಟಿಕಾ ಬಾಬು ಅವರು ತುಮಕೂರು ನಗರ ಕ್ಷೇತ್ರದ ಟಿಕೆಟ್ ಬಗ್ಗೆ ಗೊಂದಲ ಎಬ್ಬಿಸಿ ಪರಸ್ಪರ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಯಾರು ಏನೇ ಮಾತನಾಡಿದರು ಅದಕ್ಕೆ ಉತ್ತರಿಸಲು ಪಕ್ಷದ ವರಿಷ್ಠರಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಒಟ್ಟಾಗಿ ಕುಳಿತು ಮನ ಬಿಚ್ಚಿ ಎಲ್ಲ ವಿಷಯವನ್ನು ಚರ್ಚಿಸಿ ಸಮಸ್ಯೆ ಬಗೆಹರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳ ಗೆಲುವಿಗೆ ಹಗಲಿರುಳು ಶ್ರಮಿಸುತ್ತೇವೆ, ಯಾವುದೇ ಗೊಂದಲಕ್ಕು ಪಕ್ಷದ ವರಿಷ್ಠ ಮಂಡಳಿ ಅವಕಾಶ ಕೊಡುವುದಿಲ್ಲ ಸದ್ಯದಲ್ಲೇ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದರು.

 

 

 

ಮುಂದುವರೆದು ನಮ್ಮ ಜಿಲ್ಲೆಯಲ್ಲಿ ಯಾರೂ ಸಹ ಬಂಡಾಯ ಅಭ್ಯರ್ಥಿಗಳಿಲ್ಲ, ಹೈಕಮಾಂಡ್‌, ಡಿ.ಕೆ, ಶಿವಕುಮಾರ್, ಸಿದ್ದರಾಮಯ್ಯ, ಡಾ. ಜಿ ಪರಮೇಶ್ವರ್, ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ ಸೇರಿದಂತೆ ಪಕ್ಷದ ವರಿಷ್ಠ ರ ಮಾತಿಗೆ ಗೌರವವಿದೆ. ಎಲ್ಲ ಮುಖಂಡರು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ ಹಿರಿಯ ಮುಖಂಡರೊಂದಿಗೆ ತಾವು ಜಿಲ್ಲಾ ಪ್ರವಾಸ ಮಾಡುತ್ತಿದ್ದೇನೆ ಎಂದರು.

 

 

 

ತುಮಕೂರು ನಗರ ಕ್ಷೇತ್ರದಲ್ಲಿ ದ್ವಂದ್ವ ಹೇಳಿಕೆಗಳನ್ನು ನೀಡಿ ಜನರನ್ನು ಯಾರು ಗೊಂದಲಕ್ಕಿಯ ಮಾಡುವುದು ಬೇಡ, ಜನತೆ ಪ್ರಜ್ಞಾವಂತ ರಿದ್ದಾರೆ  ಎಲ್ಲರ ಬಗ್ಗೆ ಮಾಹಿತಿ ಅರಿತವರಿದ್ದಾರೆ, ಹಣ ಅಂತಸ್ತಿಗೆ ನಮ್ಮ ಜಿಲ್ಲೆ ಜನ ಎಂದಿಗೂ ಬೆಲೆ ಕೊಡುವದಿಲ್ಲ,ಟಿಕೆಟ್ ಆಕಾಂಕ್ಷಿಗಳು ಪಕ್ಷದ ಸಂಘಟನೆ ಜೊತೆಗೆ ಆಯಾ ಕ್ಷೇತ್ರದ ಮುಖಂಡರುಗಳ ಭೇಟಿ ಮಾಡಿ ಸಲಹೆ ಸೂಚನೆ ಪಡೆಯಿರಿ ಎಂದಷ್ಟೇ ಹೇಳಿದ್ದೇವೆ. ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದೆ. ಹಿಂದಿನ ನಮ್ಮ ಪಕ್ಷದ ಸರ್ಕಾರವಿದ್ದಾಗ ಅಂದಿನ ಮುಖ್ಯಮಂತ್ರಿಗಳು ಜಾರಿಗೆ ತಂದಿದ್ದ ಯೋಜನೆಗಳ ಬಗ್ಗೆ ಗ್ರಾಮೀಣ ನಗರ, ಪಟ್ಟಣ ಪ್ರದೇಶದ ಪ್ರತಿ ಮನೆಮನೆಗೂ ಕಾರ್ಯಕರ್ತರುಗಳು ತೆರಳಿ ಅರಿವು ಮೂಡಿಸಿ ಎಂದು ತಿಳಿಸಲಾಗಿದೆ, ಜಿಲ್ಲೆಯ ಜನತ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರುವಲ್ಲಿ  ಉತ್ಸುಕರಾಗಿದ್ದಾರೆ ಇದು ಸತ್ಯ ಎಂದು ಚಂದ್ರಶೇಖರ ಗೌಡ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟುರು.

 

 

 

 

ತುಮಕೂರು ನಗರದ ಜನತೆ ಹೊಸಮುಖ ಬಯಸಿರುವುದು ನಿಜ ಆದರೆ, ಪಕ್ಷವನ್ನು ಮತ್ತು ಪಕ್ಷದಲ್ಲಿ ಕಾರ್ಯಕರ್ತರನ್ನು ಹೊಡೆಯುವ ಕೆಲಸ ಮಾಡಬಾರದು, ಅಟ್ಟಿಕಾ ಬಾಬು ಅವರು ಈ ಹಿಂದೆ ಜೆಡಿಎಸ್‌ ಅಭ್ಯರ್ಥಿಯಾಗುವೆ ತನಗೆ ಕುಮಾರಣ್ಣ, ಶಂಕರಣ್ಣ ಬೆಂಬಲಿವಿದೆ ಎಂದು ಬಹಿರಂಗವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು, ಅವರಿಗೆ ಅಲ್ಲಿ ಏನು ಸಮಸ್ಯೆ ಆಯಿತೋ ಗೊತ್ತಿಲ್ಲ, ಇದೀಗ ನಮ್ಮ ಪಕ್ಷದ ಕಡೆ ವಾಲುತ್ತಿದ್ದಾರೆ, ಎಲ್ಲವನ್ನೂ ನಾವು ಹೈ ಕಮಾಂಡ್‌ಗೆ ಮಾಹಿತಿ ನೀಡುತ್ತಿದ್ದೇವೆ, ಅವರು ಸಹ ಪಕ್ಷದಲ್ಲಿ ಇದುವರೆವಿಗೂ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬರುತ್ತಿರುವವರಿಗಷ್ಟೇ ಟಿಕೇಟ್‌ ಎಂದು ಸ್ಪಷ್ಟನೆ ನೀಡಿರುವುದರಿಂದಲೇ ನಾನು ಈ ರೀತಿಯಾಗಿ ತಮ್ಮೊಂದಿಗೆ ವಿಷಯವನ್ನು ಹಂಚಿಕೊಂಡಿದ್ದೇನೆಂದು ಪತ್ರಕರ್ತರ ಬಳಿ ತಮ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 

 

 

ಒಟ್ಟಾರೆಯಾಗಿ ಅಟ್ಟಿಕಾ ಬಾಬು ಅವರಿಗೆ ಕಾಂಗ್ರೆಸ್‌ ನವರೂ ಸಹ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಯಾವುದು ಏನೇ ಆದರೂ ಸ್ಪಷ್ಟ ನಿಲುವು, ಸ್ಪಷ್ಟತೆಯಿಂದ ಒಂದು ಗಮ್ಯವನ್ನು ತಲುಪಬೇಕೇ ವಿನಃ ಅಡ್ಡಾದಿಡ್ಡಿ ತನದಿಂದ, ವಾಮ ಮಾರ್ಗಗಳಿಂದ ಅಧಿಕಾರ ಪಡೆಯುವುದು ಬಹಳ ಕಷ್ಟಕರವೆಂದು ಕೆಲವರು ಅರ್ಥ ಮಾಡಿಕೊಳ್ಳಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!