ತುಮಕೂರು ಮಹಾನಗರಪಾಲಿಕೆಗೆ ಪೂರ್ಣಾವಧಿ ಐಎಎಸ್ ಅಧಿಕಾರಿ ಕನ್ನಡದ ಕುವರ ದರ್ಶನ್‌ ನೇಮಕ

ತುಮಕೂರು ಮಹಾನಗರಪಾಲಿಕೆ ಆಯುಕ್ತರಾಗಿ ಯುವ ಐಎಎಸ್ ಅಧಿಕಾರಿ ಹೆಚ್.ವಿ.ದರ್ಶನ್ ಅವರನ್ನು ಸರಕಾರ ನೇಮಿಸಿದೆ. ಈ ಹುದ್ದೆಯಲ್ಲಿದ್ದ ಕೆಎಸ್ಎಂಎಸ್ ಅಧಿಕಾರಿ ಯೋಗಾನಂದ ಅವರಿಗೆ ಸದ್ಯಕ್ಕೆ ಯಾವ ಜಾಗವನ್ನೂ ತೋರಿಸಿಲ್ಲ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹರಳಕಟ್ಟೆ ಗ್ರಾಮದವರಾದ ದರ್ಶನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು, ದರ್ಶನ್ ಕಲಬುರಗಿ ಮಹಾನಗರಪಾಲಿಕೆ ಆಯುಕ್ತರಾಗಿ ಹಾಗೂ ಕೋಲಾರ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕಾರ್ಯನಿರ್ವಹಿಸಿದ್ದಾರೆ. ದರ್ಶನ್ 2019ರಲ್ಲಿ ನಾಲ್ಕನೇ ಪ್ರಯತ್ನದಲ್ಲಿ 594ನೇ Rank ಪಡೆದು ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದವರು.
ಏಳನೇ ತರಗತಿವರೆಗೆ ಮಾತ್ರ ಕನ್ನಡ ಮಾಧ್ಯಮದಲ್ಲಿ ಓದಿದ್ದ ದರ್ಶನ್ ಇಡೀ ಯುಪಿಎಸ್ಸಿ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದಿದ್ದಾರೆ. ಬಳ್ಳಾರಿ, ತಿಪಟೂರು, ಚಿಕ್ಕಮಗಳೂರು ಹಾಗೂ ಬೆಂಗಳೂರುಗಳಲ್ಲಿ ಕ್ರಮವಾಗಿ ಪ್ರಾಥಮಿಕ, ಪ್ರೌಢಶಾಲೆ , ಡಿಪ್ಲಮೊ ಹಾಗೂ ಇಂಜಿನಿಯರಿಂಗ್ ಓದಿದರು. 2009ರಲ್ಲಿ ಎರಡು ವರ್ಷ ಇನ್ಪೋಸಿಸ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ, ನಂತರ ಅಮೆರಿಕೆಯಲ್ಲಿ ಮೂರು ವರ್ಷ ನೌಕರಿ ಮಾಡಿದರೂ ಐಎಎಸ್ ಮಾಡುವ ಹಂಬಲ ಇವರನ್ನು ತಾಯ್ನಾಡಿಗೆ ಕರೆತಂದಿತು.
ತುಮಕೂರು ಮಹಾನಗರಪಾಲಿಕೆಗೆ ಪೂರ್ಣಾವಧಿ ಐಎಎಸ್ ಅಧಿಕಾರಿಯೊಬ್ಬರ ಅವಶ್ಯಕತೆ ಇತ್ತು ಎಂದು ಪ್ರಜ್ಞಾವಂತ ನಾಗರಿಕರು ಅಂದುಕೊಳ್ಳುತ್ತಲೇ ಇದ್ದರು.
ಜೊತೆಗೆ ಇದೇ ಆದೇಶದಲ್ಲಿ ರಾಜ್ಯ ಸರಕಾರ ಎರಡು ದಿನಗಳಿಂದ ಬೀದಿ ರಂಪ ಮಾಡಿಕೊಂಡಿದ್ದ ಐಪಿಎಸ್ ಅಧಿಕಾರಿಣಿ ಶುಭಾ ಮುದ್ಗಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಈ ಇಬ್ಬರ ಸ್ಥಾನಗಳಿಗೂ ಬೇರೊಬ್ಬರನ್ನು ವರ್ಗಾಯಿಸಿ ನೇಮಿಸಿದ್ದು, ಈ ಇಬ್ಬರಿಗೂ ಯಾವ ಜಾಗವನ್ನೂ ತೋರಿಲ್ಲ. ವಿಷಾದದ ಸಂಗತಿ ಎಂದರೆ ಶುಭಾ ಅವರ ಐಎಎಸ್ ಅಧಿಕಾರಿ ಪತಿ ಮೌನೀಶ್ ಮುದ್ಗಲ್ ಅವರನ್ನೂ ವರ್ಗ ಮಾಡಿಬಿಟ್ಟಿದೆ. ಮೌನೀಶ್ ಅವರನ್ನು ಸರ್ವೆ ಆಯುಕ್ತಾಲಯದಿಂದ ಸಿಆಸುಇ(ಆಡಳಿತ ಸುಧಾರಣೆ) ಎಂಬ ಹೇಳಿಕೊಳ್ಳುವಂತೆ ಕೆಲಸವಿಲ್ಲದ ಹುದ್ದೆಗೆ ವರ್ಗಾಯಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!