ಟರ್ಕಿ, ಸಿರಿಯಾ ದೇಶಗಳಲ್ಲಿ ಮರಣ ಮೃದಂಗ ಮುಂದುವರೆದಿದೆ. ಭಾರೀ ಭೂಕಂಪದಿಂದ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿ ಗಂಟೆಗೆ ನೂರಾರು ಶವಗಳು ಕಟ್ಟಡಗಳ ಅವಶೇಷಗಳಿಂದ ಹೊರಬರುತ್ತಿವೆ.
ಕಲ್ಲು, ಬಂಡೆಗಳ ನಡುವೆ ಸಿಲುಕಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಭಾರೀ ಭೂಕಂಪವು ಎರಡೂ ದೇಶಗಳಲ್ಲಿ ಕೊನೆಯಿಲ್ಲದ ದುರಂತವನ್ನು ಉಂಟುಮಾಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಭೂಕಂಪದಿಂದ ಸತ್ತವರ ಸಂಖ್ಯೆ 16,000 ಮೀರಿದೆ ಎಂದು ಸ್ಥಳೀಯ ಮಾಧ್ಯಮ ಮೂಲಗಳು ತಿಳಿಸಿವೆ. ಸಾವಿರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ವಿಶ್ವದ 24 ದೇಶಗಳ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಭಾರತೀಯ ಸೇನೆ ಮತ್ತು NDRF ತಂಡಗಳು ಟರ್ಕಿಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ.
ಭೂಕಂಪ ಪೀಡಿತ ಪ್ರದೇಶಗಳಲ್ಲಿ ಕ್ಷೇತ್ರ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ, ಅವಶೇಷಗಳಡಿಯಲ್ಲಿ ಸಾವಿರಾರು ಮೃತದೇಹಗಳಿರುವುದು ವರದಿಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತೋರುತ್ತದೆ.