ತುಮಕೂರು: ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಪುಟ್‌ಪಾತ್ ಮೇಲೆ ಶೀಟ್ ಮಾದರಿಯ ಶೆಡ್‌ಗಳುಳ್ಳ ಅಂಗಡಿಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ನಿರ್ಮಿಸಿಕೊಡಲು ಮುಂದಾಗಿರುವುದು ಸರಿಯಿಲ್ಲ ಎಂದು ತರಕಾರಿ,ಹೂವು ಮತ್ತು ಹಣ್ಣು ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎಸ್ ಯಧುಕುಮಾರ್ ತಿಳಿಸಿದರು.
ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಪಿಎಂಸಿ ವತಿಯಿಂದ ಪುಟ್‌ಪಾತ್‌ನ ಮೇಲೆ ಅಂಗಡಿ ಮಳಿಗೆಗಳನ್ನು ನಿರ್ಮಿಸಲು ಮುಂದಾಗಿರುವುದನ್ನು ವಿರೋಧಿಸಿ ಮಾತನಾಡಿದ ಅವರು, ತುಮಕೂರಿನ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯು ಕೇವಲ ೮ ಎಕರೆಯಲ್ಲಿ ನಿರ್ಮಾಣವಾಗಿದೆ. ಈ ಮಾರುಕಟ್ಟೆಗೆ ಜಿಲ್ಲೆ ಅಲ್ಲದೇ ಹೊರ ಜಿಲ್ಲೆಗಳಿಂದ ರೈತರು ತಾನು ಬೆಳೆದ ಹಣ್ಣು,ಹೂವು ಮತ್ತು ತರಕಾರಿಗಳನ್ನು ಮಾರಾಟಕ್ಕೆ ತರುತ್ತಿದ್ದಾರೆ.ಜೊತೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ವ್ಯಾಪಾರಸ್ಥರು ತರಕಾರಿ,ಹೂವು,ಹಣ್ಣು ಕೊಳ್ಳಲು ಅಪಾರ ಸಂಖ್ಯೆಯಲ್ಲಿ ಬರುತ್ತಿರುತ್ತಿದ್ದು,ನಗರದ ಸಾರ್ವಜನಿಕರು ಕೊಳ್ಳಲು ಬರುತ್ತಿದ್ದಾರೆ.ಇಲ್ಲಿ ವಾಹನಗಳನ್ನು ನಿಲ್ಲಿಸಲು ಹಾಗೂ ಸಾರ್ವಜನಿಕರು,ರೈತರು,ವ್ಯಾಪಾರಸ್ತರು ಮತ್ತು ಮಂಡಿ ವರ್ತಕರು ಸಂಚಾರ ಮಾಡಲು ಜಾಗ ಚಿಕ್ಕದಾಗಿದೆ. ಇಂತಹ ಸ್ಥೀತಿ ಇದ್ದರು, ತುಮಕೂರು ಎಪಿಎಂಸಿ ಹಾಗೂ ಎಪಿಎಂಸಿಯ ಅಧ್ಯಕ್ಷರು ಏಕಾ,ಏಕಿ ಮಾರುಕಟ್ಟೆಯಲ್ಲಿ ಶೀಟ್ ಮಾದರಿಯ ಶೆಡ್‌ಗಳನ್ನು ನಿರ್ಮಿಸಿ ಚಿಲ್ಲರೆ ವ್ಯಾಪಾರಿಗಳಿಗೆ ಕೊಡಲು ಇಚ್ಛಿಸಿ ಇನ್ನಷ್ಟು ಸಮಸ್ಯೆ ಉದ್ಭವಿಸುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಚಿಕ್ಕದಾಗಿರುವ ಮಾರುಕಟ್ಟೆಯ ಪುಟ್‌ಪಾತ್‌ಗಳ ಮೇಲೆ ಮಳಿಗೆಗಳನ್ನು ನಿರ್ಮಿಸಿದರೆ ಗ್ರಾಹಕರು, ವ್ಯಾಪಾರಿಗಳು, ರೈತರು, ವರ್ತಕರು ವ್ಯಾಪಾರ ವಹಿವಾಟು ನೆಡೆಸಲು ಸಮಸ್ಯೆ ಉಂಟಾಗುತ್ತದೆ.ಈ ಮಾರುಕಟ್ಟೆಯ ಮುಂಭಾಗ ಮಧುಗಿರಿ,ಕೊರಟಗೆರೆ,ರಾಷ್ಟ್ರೀಯ ಹೆದ್ಧಾರಿಗೆ ಸಮೀಪಿಸುವ ರಸ್ತೆ ಆಗಿದ್ದು, ಜೊತೆಗೆ ಮಾರುಕಟ್ಟೆಗೆ ಸಾಮಗ್ರಿಗಳನ್ನು ಕೊಳ್ಳಲು ಮತ್ತು ಹಣ್ಣು,ತರಕಾರಿ,ಹೂವು ಮಾರಾಟ ಮಾಡಲು ಗ್ರಾಹಕರು,ರೈತರು,ಉದ್ಯಮಿಗಳು ದಟ್ಟಣೆಯಾಗಿ ಬರುತ್ತಿದ್ದು, ಸಾಮಗ್ರಿಗಳನ್ನು ಸಾಗಾಟ ಮಾಡಲು ಭಾರಿ ಗಾತ್ರದ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಜಾಗದ ಸಮಸ್ಯೆ ಎದುರಾಗಿದೆ. ಇಂತಹ ಸ್ಥೀತಿ ಇದ್ದರು,ಪುಟ್‌ಪಾತ್ ಮೇಲೆ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಮಾರಾಟ ಮಾಡಿ ಹಣ ಮಾಡಿಕೊಳ್ಳುವ ಉದ್ದೇಶ ಎಪಿಎಂಸಿ ಅಧ್ಯಕ್ಷರದ್ದಾಗಿದೆ ಎಂದು ಆರೋಪಿಸಿದರು.
ಮಾರುಕಟ್ಟೆಯಿಂದ ಒಂದು ವರ್ಷಕ್ಕೆ ರೂ.80 ರಿಂದ 1 ಕೋಟಿಯಷ್ಟು ತೆರಿಗೆ,ಬಾಡಿಗೆ ಎಪಿಎಂಸಿಗೆ ಕಟ್ಟಲಾಗುತ್ತಿದೆ. ಆದರೆ ಎಪಿಎಂಸಿ ಇಲ್ಲಿ ಎದುರಾಗಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇಲ್ಲಿ ಕುಡಿಯಲು ನೀರಿಲ್ಲ,ಚರಂಡಿ ವ್ಯವಸ್ಥೆ ಇಲ್ಲ,ಶೌಚಾಲಯ ಸ್ವಚ್ಛತೆ ಇಲ್ಲ,ಪಾರ್ಕಿಂಗ್ ಸೌಲಭ್ಯವಿಲ್ಲ ಮತ್ತು ವಿದ್ಯುತ್ ದೀಪಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಇವೆ. ಸಮಸ್ಯೆಗಳ ಬಗ್ಗೆ ಗಮನ ಹರಿಸದ ಎಪಿಎಂಸಿ ಇಲಾಖೆ ಇರುವ ಪುಟ್‌ಪಾತ್‌ಗಳ ಮೇಲು ಅಂಗಡಿ ಮಳಿಗೆ ನಿರ್ಮಿಸಿ ಮಾರಾಟ ಮಾಡಲು ಮುಂದಾಗಿರುವುದು ನೋವಿನ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.
ಪುಟ್‌ಪಾತ್‌ಗಳ ಮೇಲೆ ಅಂಗಡಿ ಮಳಿಗೆಗಳನ್ನು ನಿರ್ಮಿಸದಂತೆ ಹಾಗೂ ಈಗಿನ ಮಾರುಕಟ್ಟೆಯನ್ನು ಯಥಾಸ್ಥೀತಿಯಲ್ಲೇ ಕಾಪಾಡಬೇಕು ಎಂದು ಒತ್ತಾಯಿಸಿ, ತರಕಾರಿ,ಹೂವು ಮತ್ತು ಹಣ್ಣು ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಟವಾಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ. ನಮ್ಮ ಮನವಿಯನ್ನು ಪರಿಗಣಿಸದೇ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲು ಮುಂದಾದರೆ ಮುಂದಿನ ದಿನಗಳಲ್ಲಿ ಎಪಿಎಂಸಿ ಹಾಗೂ ಎಪಿಎಂಸಿ ಅಧ್ಯಕ್ಷರು ಮತ್ತು ಆಡಳಿತದ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದು,ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಸ್ಥಳಕ್ಕೆ ಬರುವವರೆವಿಗೂ ಪ್ರತ್ರಿಭಟನೆ ಮುಂಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.