ಈ ವರ್ಷದ ಸಂಕ್ರಾಂತಿ ದಿನಾಂಕ, ಸಮಯವೇನು..ಈ ಉತ್ತರಾಯಣ ಪುಣ್ಯಕಾಲ ದೇವಾನುದೇವತೆಗಳಿಗೆ ಏಕೆ ಪ್ರಿಯ?
ಪುರಾಣದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಸಂಬಂಧಿಸಿದಂತೆ ಮಹಾಭಾರತದ ಒಂದು ಕಥೆ ಪ್ರಚಲಿತದಲ್ಲಿದೆ. ಭೀಷ್ಮನು ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸಿದರೂ ದಕ್ಷಿಣಾಯನದಲ್ಲಿ ದೇಹತ್ಯಾಗ ಮಾಡದೆ, ಉತ್ತರಾಯಣದ ಅಷ್ಟಮಿ ದಿನಕ್ಕಾಗಿ ಕಾಯುತ್ತಾನೆ. ಆದ್ದರಿಂದ ಉತ್ತರಾಯಣ ಬಹಳ ಪುಣ್ಯಕಾಲ ಎಂಬ ನಂಬಿಕೆ ಇದೆ.
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಈ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರಿನಿಂದ ಆಚರಿಸುತ್ತಾರೆ. ಆಚರಣೆಯ ವಿಧಾನ ಕೂಡಾ ವಿಭಿನ್ನ. ಈಗಾಗಲೇ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಹಬ್ಬವನ್ನು ಸಂಕ್ರಾಂತಿ, ಲೋಹ್ರಿ, ಉತ್ತರಾಯಣ, ಪೊಂಗಲ್, ಮಾಗ್ ಬಿಹು, ಸಕ್ರತ್ ಎಂಬ ನಾನಾ ಹೆಸರಿನಿಂದ ಕರೆಯಲಾಗುತ್ತಿದೆ
ಈ ಬಾರಿ ಸಂಕ್ರಾಂತಿ ದಿನಾಂಕವೇನು?
ಹಾಗೇ ಪ್ರತಿ ಬಾರಿ ಯಾವ ಹಬ್ಬ ಬಂದರೂ, ದಿನಾಂಕದ ಬಗ್ಗೆ ಗೊಂದಲ ಆಗುವುದು ಸಾಮಾನ್ಯ. ಕಳೆದ ಬಾರಿಯಂತೆ ಈ ಬಾರಿ ಕೂಡಾ ಹಬ್ಬ, ಜನವರಿ 14 ಎಂದರೆ ಇನ್ನೂ ಕೆಲವರು ಜನವರಿ 15ಕ್ಕೆ ಎನ್ನುತ್ತಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುತ್ತಾ ಬರಲಾಗಿದೆ. ಆದರೆ ಈ ಬಾರಿ ಎರಡು ದಿನ ಈ ಮುಹೂರ್ತ ಬಂದಿದೆ. ಆದರೂ ಜನವರಿ 15, ಭಾನುವಾರದಂದು ಈ ಬಾರಿ ಮಕರ ಸಂಕ್ರಾತಿ ಹಬ್ಬವನ್ನು ಆಚರಿಸಲಾಗುತ್ತಿದೆ.
ಮಕರ ಸಂಕ್ರಾಂತಿಯ ಮಹತ್ವ
ಈ ವರ್ಷ ಜನವರಿ 14, ಶನಿವಾರ ರಾತ್ರಿ ರಾತ್ರಿ 08:21ಕ್ಕೆ ಸೂರ್ಯ, ಮಕರ ರಾಶಿ ಪ್ರವೇಶಿಸಲಿದ್ದಾನೆ. ಆದ್ದರಿಂದ ಹಬ್ಬ ಆ ಸಮಯದಿಂದ ಆರಂಭವಾಗಿ ಜನವರಿ 15, ಭಾನುವಾರ ಮಧ್ಯಾಹ್ನ 12.30ಕ್ಕೆ ಕೊನೆಯಾಗಲಿದೆ. ಆದ್ದರಿಂದ ಈ ಸಮಯದಲ್ಲಿ ಮನೆಯಲ್ಲಿ ಪೂಜೆ ಮಾಡಿದರೆ ಒಳಿತು. ಬೆಳಗ್ಗೆ 7.17 ರಿಂದ 9.15 ನಿಮಿಷದವರೆಗೂ ಮಹಾಪುಣ್ಯಕಾಲ ಮುಹೂರ್ತವಿದ್ದು ಇದು ಪೂಜೆ ಪುನಸ್ಕಾರಕ್ಕೆ ಅತ್ಯುತ್ತಮ ಸಮಯ ಎನ್ನಲಾಗಿದೆ.
ಮಕರ ಸಂಕ್ರಾಂತಿ ಮಹತ್ವ
ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನವನ್ನು ಮಕರ ಸಂಕ್ರಾತಿ ಹಬ್ಬವಾಗಿ ಪ್ರತಿ ವರ್ಷ ಆಚರಿಸುತ್ತೇವೆ. ಇದರ ಪ್ರಕಾರ 6 ತಿಂಗಳ ಕಾಲ ಹೆಚ್ಚು ಬೆಳಕು ಹಾಗೂ ಉಳಿದ 6 ತಿಂಗಳು ಅಂದರೆ ಜೂನ್ 15 ರಿಂದ ದಕ್ಷಿಣಾಯಣ ಆರಂಭವಾಗಿ ಆಗ ಬೆಳಕು ಕಡಿಮೆ ಇರುತ್ತದೆ. ಪುರಾಣದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಸಂಬಂಧಿಸಿದಂತೆ ಮಹಾಭಾರತದ ಒಂದು ಕಥೆ ಪ್ರಚಲಿತದಲ್ಲಿದೆ. ಭೀಷ್ಮನು ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸಿದರೂ ದಕ್ಷಿಣಾಯನದಲ್ಲಿ ದೇಹತ್ಯಾಗ ಮಾಡದೆ, ಉತ್ತರಾಯಣದ ಅಷ್ಟಮಿ ದಿನಕ್ಕಾಗಿ ಕಾಯುತ್ತಾನೆ. ಆದ್ದರಿಂದ ಉತ್ತರಾಯಣ ಬಹಳ ಪುಣ್ಯಕಾಲ ಎಂಬ ನಂಬಿಕೆ ಇದೆ.
ಹಾಗೇ ಬ್ರಹ್ಮನು ಜಗತ್ತನ್ನು ಸೃಷ್ಟಿಸಲು ಆರಂಭಿಸಿದ್ದು, ಶಿವ-ಪಾರ್ವತಿ ಮದುವೆಯಾಗಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಎಲ್ಲವೂ ಉತ್ತರಾಯಣದಲ್ಲಿ. ಈ ಸಮಯ ದೇವಾನುದೇವತೆಗಳಿಗೆ ಬಹಳ ಪ್ರಿಯವಾದುದು. ಆದ್ದರಿಂದ ಉತ್ತರಾಯಣದಲ್ಲಿ ಬರುವ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು, ಸೂರ್ಯ ತನ್ನ ಪಥವನ್ನು ಬದಲಿಸಿದ ದಿನದಂದು ಮಕರ ಸಕ್ರಾಂತಿಯನ್ನು ಆಚರಿಸಲಾಗುವುದು.
ಹಬ್ಬದ ಆಚರಣೆ ಹೇಗೆ?
ಗಾಳಿಪಟ ಹಾರಿಸುವುದು, ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವುದು, ಎಳ್ಳು ಬೆಲ್ಲ ಹಂಚುವುದು, ಹಸುಗಳಿಗೆ ಕಿಚ್ಚು ಹಾಯಿಸುವುದು ಸಾಮಾನ್ಯವಾಗಿ ಕರ್ನಾಟಕದಲ್ಲಿ ಆಚರಿಸುವ ಆಚರಣೆ. ಇದನ್ನು ಸ್ನಾನ ಹಾಗೂ ದಾನದ ಹಬ್ಬ ಎಂದೂ ಕರೆಯುವುದರಿಂದ ಈ ಹಬ್ಬದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಬಡಬಗ್ಗರಿಗೆ ದಾನ ಮಾಡಿದರೆ ಸೂರ್ಯ ದೇವನು ಪ್ರಸನ್ನನಾಗಿ ನಮ್ಮನ್ನು ಹರಸುತ್ತಾನೆ ಎಂಬ ನಂಬಿಕೆ ಇದೆ. ಹಾಗೇ ಸಂಕ್ರಾಂತಿಯಂದು ಸೂರ್ಯ ದೇವನು ತನ್ನ ಪುತ್ರನಾದ ಶನಿಯ ಮನೆಗೆ ಹೋಗುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನ ಉದ್ದಿನ ಬೇಳೆಯಿಂದ ತಯಾರಿಸಲಾದ ಭಕ್ಷ್ಯಗಳನ್ನು ಸೇವಿಸುವುದರಿಂದ ಸೂರ್ಯ ಹಾಗೂ ಶನಿದೇವನ ಆಶೀರ್ವಾದ ದೊರೆಯಲಿದೆ.
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು ಎಂಬ ಮಾತಿದೆ. ಈ ದಿನ ಎಳ್ಳು ಬೆಲ್ಲವನ್ನು ತಮ್ಮ ಆತ್ಮೀಯರಿಗೆ ಹಂಚುವ ಸಂಪ್ರದಾಯವಿದೆ. ಆಂಧ್ರ, ತೆಲಂಗಾಣ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಸಂಕ್ರಾಂತಿಯನ್ನು 3 ದಿನಗಳು ಆಚರಿಸಲಾಗುತ್ತದೆ. ಅದರಲ್ಲಿ ಮೊದಲನೆ ದಿನ ಭೋಗಿ ಎರಡನೇ ದಿನ ಸಂಕ್ರಾಂತಿ, ಮೂರನೇ ದಿನ ಕನುಮ ಹಬ್ಬ ಎಂದು ಆಚರಿಸಲಾಗುತ್ತದೆ. ಒಟ್ಟಿನಲ್ಲಿ ಈ ಸುಗ್ಗಿ ಹಬ್ಬವನ್ನು ದೇಶಾದ್ಯಂತ ವಿವಿಧ ರೀತಿ ಆಚರಿಸಲಾಗುತ್ತದೆ🚩