ತುಮಕೂರು -ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಯಾವುದೇ ಮನ್ನಣೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರ ಹಾಕಿರುವ ಘಟನೆ ವರದಿಯಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಚುಕ್ಕಾಣಿ ಹಿಡಿದ ನೂತನ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಗೌಡರವರು ಕೇವಲ ತಮ್ಮ ಸಮುದಾಯದ ಮುಖಂಡರು ಹಾಗೂ ಪದಾಧಿಕಾರಿಗಳಿಗೆ ಮಣೆ ಹಾಕುತ್ತಿದ್ದು ಇತರೆ ಸಮುದಾಯದ ಮುಖಂಡರನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ವಿವಿಧ ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರು ವಿವಿಧ ಪತ್ರಿಕೆಗಳಿಗೆ ಪತ್ರ ಬರೆಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ನೂತನವಾಗಿ ಅಧ್ಯಕ್ಷರಾಗಿರುವ ಚಂದ್ರಶೇಖರ್ ಗೌಡ ರವರು ಕಚೇರಿಗೆ ಬರುವ ಕಾರ್ಯಕರ್ತರು ಹಾಗೂ ಮುಖಂಡರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದು ಕೇವಲ ಅವರ ಸಮುದಾಯಕ್ಕೆ ಮಾತ್ರ ಪ್ರಾತಿನಿಧ್ಯ ನೀಡುತ್ತಿದ್ದಾರೆ ಇದರಿಂದ ವಿವಿಧ ಸಮುದಾಯದ ಮುಖಂಡರನ್ನು ಕಡೆಗಣಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು ಈಗ ಎಲ್ಲೆಡೆ ಪತ್ರ ವೈರಲ್ ಆಗಿದೆ.
ಇನ್ನು ಓಬಿಸಿ ಘಟಕದ ಅಧ್ಯಕ್ಷರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಇತರೆ ಸ್ಥಾನಗಳನ್ನ ಕೇವಲ ಒಂದೇ ಸಮುದಾಯಕ್ಕೆ ನೀಡಿದ್ದು ಕಾಂಗ್ರೆಸ್ ಪಕ್ಷದಲ್ಲಿ ಇತರ ಸಮುದಾಯಕ್ಕೆ ಯಾವುದೇ ಸ್ಥಾನಮಾನ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು.
ಮುಂಬರುವ ದಿನದಲ್ಲಿ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಳ್ಳದೆ ಇದ್ದಲ್ಲಿ ಮುಂದಿನ ದಿನದಲ್ಲಿ ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಬೇರೆ ಪಕ್ಷದ ಹಾದಿಯನ್ನು ತುಳಿಯುವ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬರಲಿದೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಎಚ್ಚರಿಕೆಯನ್ನು ಸಹ ರವಾನಿಸಿದ್ದಾರೆ.
ಇನ್ನು ಪಕ್ಷದ ಕಚೇರಿಯಲ್ಲಿ ಸೇರಿಕೊಂಡಿರುವ ಬೆರಳೆಣಿಕೆಯ ಮಂದಿಗಳು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನ ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಇದರಿಂದ ಪಕ್ಷಕ್ಕೆ ಸಹ ಸಾಕಷ್ಟು ಇರಿಸು ಮುರಿಸು ಉಂಟಾಗುತ್ತಿದೆ ಎಂದು ಹೆಸರನ್ನ ಹೇಳಲಿಚ್ಚಿಸದ ಪಕ್ಷದ ಮುಖಂಡರು ಸಹ ಪಕ್ಷದ ಹಾಗೂ ಕಚೇರಿಯ ಸಿಬ್ಬಂದಿಗಳ ಮೇಲು ಸಹ ತಮ್ಮ ಆಕ್ರೋಶವನ್ನು ಹೊರ ಹಾಕಿರುವುದು ಕಂಡುಬಂದಿದೆ.
ಹಾಗಾಗಿ ಶೀಘ್ರದಲ್ಲೇ ಪಕ್ಷದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿರುವಂತೆ ಪಕ್ಷದ ಹಿರಿಯ ಮುಖಂಡರಿಗೆ ಮನವಿಯನ್ನು ಪತ್ರದ ಮುಖೇನ ವ್ಯಕ್ತಪಡಿಸಿದ್ದಾರೆ.