ಯಶಸ್ಸು ಪಡೆದವರು ಸಮಾಜಕ್ಕೆ ಹಿಂತಿರುಗಿಸಬೇಕು ಬಸವರಾಜ ಬೊಮ್ಮಾಯಿ

 

ತುಮಕೂರು: ವೈದ್ಯಕೀಯ ಕ್ಷೇತ್ರದ ಎಲ್ಲರೂ ಬಡವರಿಗೆ ಸುಲಭ ದರದಲ್ಲಿ ಚಿಕಿತ್ಸೆ ನೀಡಲು ಯೋಜನೆ ರೂಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದರು.

 


ಅವರು ಇಂದು ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ನಾರಾಯಣ ದೇವಾಲಯ- ಉಚಿತ ನೇತ್ರ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

 

 

ಯಶಸ್ಸು ಪಡೆದವರು ಸಮಾಜಕ್ಕೆ ಹಿಂತಿರುಗಿಸಬೇಕು

 

 


ನಾರಾಯಣ‌ ನೇತ್ರಾಲಯ ಒಂದು ಹೆಜ್ಜೆ ಮುಂದೆ ಹೋಗಿ ಉಚಿತ‌ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕಿಂತ ಉದಾಹರಣೆ ಮತ್ತೊಂದಿಲ್ಲ. ಡಾ: ಭುಜಂಗ ಶೆಟ್ಟಿಯವರು ತಮ್ಮ ವೃತ್ತಿ ಯಲ್ಲಿ ಯಶಸ್ವಿಯಾಗಿದ್ದಾರೆ. ಯಶಸ್ಸು ಪಡೆದವರೆಲ್ಲಾ ಬದುಕಿನಲ್ಲಿ ಸಮಾಜಕ್ಕೆ ಹಿಂತಿರುಗಿಸಿ ನೀಡಬೇಕೆಂಬ ಸಣ್ಣ ಗುಣಧರ್ಮವಿದ್ದರೆ , ಈ ಜಗತ್ತು ಇನ್ನಷ್ಟು ಉತ್ತಮವಾಗುತ್ತದೆ. ಎಲ್ಲರಿಗೂ ಶ್ರೀಮಂತಿಕೆನಿರುವುದಿಲ್ಲ. ಅಂತಿಮವಾಗಿ ನಮ್ಮ ದುಡಿಮೆ, ಶ್ರೀಮಂತಿಕೆ ಸೃಷ್ಟಿಗೆ ಸೇರಿದ್ದು. ನಾವು ಸೃಷ್ಟಿಯ ಭಾಗವಷ್ಟೇ. ಭುಜಂಗಶೆಟ್ಟಿ ಯವರಿಗೆ ನಾನು ಎನ್ನುವ ಭಾವವಿಲ್ಲ. ಕೃತಿಯಲ್ಲಿ ಮಾಡುವ ದೊಡ್ಡ ಗುಣ ಅವರು ಹಾಗೂ ಅವರ ಕುಟುಂಬದವರಿಗೆ ಇದೆ ಎಂದರು.

 

 

ಆರೋಗ್ಯಕ್ಕಾಗಿ ವಿಶೇಷ ಕಾರ್ಯಕ್ರಮಗಳು

 

 


ನಮ್ಮ ಸರ್ಕಾರ ಕಣ್ಣಿನ ಚಿಕಿತ್ಸೆಗೆ ಯೋಜನೆ ರೂಪಿಸಿದ್ದೇವೆ. 60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ತಪಾಸಣೆ, ಚಿಕಿತ್ಸೆ, ಉಚಿತ ಕನ್ನಡಕ ನೀಡುವ ಯೋಜನೆ ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಯೋಜನೆಗೆ ಡಾ.‌ಭುಜಂಗಶೆಟ್ಟಿ ಅವರು ಮೆಂಟರ್ ಆಗಿ ಬರಬೇಕು. ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಈ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಾಗಿದೆ.

ಕಿವಿಯ ಸಮಸ್ಯೆಗೆ ಕಾಕ್ಲಿಯರ್ ಇಂಪ್ಲಾಂಟ್ ಮಾಡುವ ಯೋಜನೆ 500 ಕೋಟಿ ರೂ.ಗಳ ಯೋಜನೆ ರೂಪಿಸಿದ್ದೇವೆ. ನಮ್ಮ ಸರ್ಕಾರ ಅತ್ಯಂತ ಸೂಕ್ಷ್ಮ ವಿಚಾರಗಳ‌ ಕಡೆಗೆ ಹೆಚ್ಚಿನ ಗಮನ ನೀಡಿದ್ದೇವೆ.ಡಯಾಲಿಸಿಸ್ ಸೈಕಲ್ ನ್ನು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ 12 ಹೊಸ ಕೇಂದ್ರಗಳನ್ನು ತೆರೆದು ಕೀಮೋಥೆರಪಿ ಸೈಕಲ್ ಗಳನ್ನು ದುಪ್ಪಟ್ಟು ಮಾಡಲಾಗಿದೆ. ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಪ್ರರಿ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಕೈಗೊಳ್ಳಲು ಆದೇಶ ಹೊರಡಿಸಿದೆ. 100 ಪಿ.ಹೆಚ್.ಸಿ ಕೇಂದ್ರಗಳನ್ನು ಸಿ.ಹೆಚ್.ಸಿ ಕೇಂದ್ರಗಳಾಗಿ ತಲಾ 10.ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು.

 

 

ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಯೋಜನೆ

 

ಜಗತ್ತಿನಲ್ಲಿ ಅತಿ ಹೆಚ್ಚು ಕಣ್ಣಿನ ರೋಗ, ಕುರುಡುತ ಮಕ್ಕಳಿಗೆ ಬರುವುದು ಅಪೌಷ್ಟಿಕತೆಯಿಂದ. ಆದ್ದರಿಂದ ನಮ್ಮ ಸರ್ಕಾರ ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಆಹಾರ ಹಾಗೂ ಔಷಧ ನೀಡುವ ಯೋಜನೆ ರೂಪಿಸಿದ್ದೇವೆ. ಅಪೌಷ್ಟಿಕತೆಯಿಂದಾಗುವ ಕಣ್ಣಿನ ತೊಂದರೆ ನಿವಾರಣೆಗೆ ವಿಶೇಷ ಕಾರ್ಯಕ್ರಮ ಪ್ರಾರಂಭವಾಗಿದೆ. ಆರು ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಹೆಚ್ಚಿರುವ ಅದರ ನಿವಾರಣೆಗೆ ವಿಶೇಷ ಯೋಜನೆ ರೂಪಿಸಲಾಗಿದೆ.
ಕೋವಿಡ್ ನ್ನು ಅತ್ಯಂತ ಯಶಸ್ವಿಯಾಗಿ ನಮ್ಮ ಸರ್ಕಾರ ನಿಭಾಯಿಸಿದೆ. ಸಿದ್ದಗಂಗಾ ಸ್ವಾಮೀಜಿ ಗಳು ಆಸ್ಪತ್ರೆಗೆ ಸ್ಥಳ ನೀಡಿ ಆಶೀರ್ವಾದ ಮಾಡಿದ್ದಾರೆ ಎಂದರು.

 

 

ಪರೋಪಕಾರಿ ಗುಣ

 

 

 

 


ಡಾ ಭುಜಂಗ ಶೆಟ್ಟಿಯವರು ರಾಜ್ಯದ ಎಲ್ಲ‌ ಜಿಲ್ಲೆಗಳಲ್ಲಿ ಉಚಿತ ಆಸ್ಪತ್ರೆ ತೆರೆಯುವುದಾಗಿ ಹೇಳಿದ್ದಾರೆ‌. ಕರ್ನಾಟಕ ಆರೋಗ್ಯ ಕರ್ನಾಟಕ ವಾಗಲಿ. ದೇವರು ಆ ಶಕ್ತಿ ನೀಡಲಿ. ಅಂಧರ ಬಾಳಿಗೆ ಇದು ಜ್ಯೋತಿಯಾಗಿ ಬೆಳಗಲಿ ಎಂದರು.
ಮಾನವ ದೇಹದಲ್ಲಿ ಹೃದಯದ ನಂತರ ಕಣ್ಣು. ಕಣ್ಣಿನಿಂದ‌ ಕೇವಲ ನೋಟವಷ್ಟೆ ಅಲ್ಲ, ಜ್ಞಾನವೂ ಪ್ರಾಪ್ತಿ ಯಾಗುತ್ತದೆ. ಕಣ್ಣಿಲ್ಲದಿದ್ದರೆ ಶಿಕ್ಷಣ, ಸಾಹಿತ್ಯ ಇರುತ್ತಿರಲಿಲ್ಲ. ಇವೆರಡೂ ಇರದಿದ್ದರೆ ಸುಸಂಸ್ಕೃತ ಸಮಾಜದ ನಿರ್ಮಾಣವೂ ಆಗುತ್ತಿರಲಿಲ್ಲ.
ಕಣ್ಣಿನ ಚಟುವಟಿಕೆಗಳು ಬಹಳ ಸೂಕ್ಷ್ಮ. ವಯಸ್ಸಾದಂತೆ ಕಣ್ಣು ಗಳಿಗೆ ಆಗುವ ತೊಂದರೆಯಿಂದ ಹಿಡಿದು ಹಲವಾರು ಸಂದರ್ಭಗಳಲ್ಲಿ ಕಣ್ಣಿಗೆ ಬರುವ ಆಪತ್ತುಗಳ ನಿವಾರಣೆ ಮಾಡುವ ತಂತ್ರಜ್ಞಾನ ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ.
ರಾಜ್ಯದಲ್ಲಿ ಡಾ. ಭುಜಂಗಶೆಟ್ಟಿ ಅವರು 25 ವರ್ಷಗಳಿಗೂ ಹೆಚ್ಚು ಕಣ್ಣಿನ ರೋಗಗಳ ನಿವಾರಣೆಗೆ ಬಹಳ ದೊಡ್ಡ ಸೇವೆ ಮಾಡುತ್ತಿದ್ದಾರೆ. ಕಣ್ಣಿನ ದಾನ ಮಾಡುವ ಬಗ್ಗೆ ದೊಡ್ಡ ಅಭಿಯಾನ ಮಾಡಿದವರು ಅವರು, ಡಾ. ರಾಜಕುಮಾರ್ ಅವರಿಂದ ಹಿಡಿದು ಪುನೀತ್ ರಾಜ್ ಕುಮಾರ್ ವರೆಗೂ ಕಣ್ಣಿನ ದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಅಭಿನಂದಿಸಿದರು.

 

 

ಸಂಪೂರ್ಣ ಉಚಿತ ಕಣ್ಣಿನ ಆಸ್ಪತ್ರೆ

 

ಇದು ಸಂಪೂರ್ಣ ಉಚಿತ ಆಸ್ಪತ್ರೆ ಇಲ್ಲಿ ಕ್ಯಾಶ್ ಕೌಂಟರ್ ಇರುವುದಿಲ್ಲ ಎಂದು ತಿಳಿದಾಗ ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವಾಯಿತು. ಶೇ 100 ರಷ್ಟು ಅವರ ದುಡಿಮೆಯಿಂದ ಪುಣ್ಯದ ಕಾರ್ಯವಾಗಿ ಈ ಕೆಲಸ ಮಾಡುತ್ತಿರುವುದು ತಿಳಿದು ಹೃದಯ ತುಂಬಿ ಬಂದಿತು. ಈ ರೀತಿಯ ಆಸ್ಪತ್ರೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಆದರೆ ಎಲ್ಲಾ ರೀತಿಯ ಆಧುನಿಕ ವ್ಯವಸ್ಥೆಯನ್ನು ಒಳಗೊಂಡ ಆಸ್ಪತ್ರೆ ಇದಾಗಿದೆ‌. ಬಡವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಬೇಕೆನ್ನುವ ತೀರ್ಮಾನ ಮಾದರಿಯಾಗಿದೆ. ಎಲ್ಲಾ ಯಶಸ್ವಿ ವೈದ್ಯರು ಇದನ್ನು ಅನುಸರಿಸಬೇಕು ಎಂದರು.

*ಬಡವರು ಉತ್ತಮ ವೈದ್ಯಕೀಯ ಸೇವೆ ಪಡೆಯಲು ಗಂಭೀರವಾಗಿ ಚಿಂತನೆ ಅಗತ್ಯ*
ವೈದ್ಯರು ಉತ್ತಮ ಸೇವೆಯನ್ನು ಕಡಿಮೆ ದರದಲ್ಲಿ ನೀಡುವ ಕೆಲಸ ಮಾಡಬೇಕು. ವೈದ್ಯಕೀಯ ಸೇವೆ ಅತ್ಯಂತ ದುಬಾರಿಯಾಗಿದೆ. ದೊಡ್ಡ ಪ್ರಮಾಣದ ಹಣ ಅಗತ್ಯವಿದೆ. ಬಡವರು ಉತ್ತಮ ವೈದ್ಯಕೀಯ ಸೇವೆ ಪಡೆಯಲು ಸಾಧ್ಯವಾಗದಂತಾಗಿದೆ. ಈ ಬಗ್ಗೆ ನಾವು ಗಂಭೀರವಾಗಿ ಚಿಂತನೆ. ಮಾಡಬೇಕಿದೆ. ನಮ್ಮ ಬಂಧುಗಳಿಗೆ ಆರ್ಥಿಕ ವ್ಯವಸ್ಥೆ ಇಲ್ಲದ ಕಾರಣ ರೋಗದಿಂದ ನರಳಿ ಸಾವನಪ್ಪುವುದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ.
ಇಡೀ ರಾಜ್ಯ ಹಾಗೂ ರಾಷ್ಟ್ರದಲ್ಲಿ ಚಿಂತನೆಯಾಗಬೇಕು. ಔಷಧಗಳ ಆರ್. ಅಂಡ್ ಡಿ ಯಿಂದ ಹಿಡಿದು, ಪರಿಕರಗಳ ಉತ್ಪಾದನೆ ಹಾಗೂ ವೈದ್ಯರು ಕೂಡ ಈ ಬಗ್ಗೆ ಚಿಂತನೆ ಮಾಡಬೇಕು ಎಂದರು.

*ಬಡವರಿಗೆ ಸುಲಭ ದರದಲ್ಲಿ ಚಿಕಿತ್ಸೆ ದೊರೆಯಬೇಕು*
ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನಮ್ಮ ಪ್ರಧಾನ ಮಂತ್ರಿ ಅವರು ಆಯುಷ್ಮಾನ್ ಭಾರತ ಯೋಜನೆಯಡಿ 5 ಲಕ್ಷ ರೂವರೆಗೂ ಬಡವರ ಚಿಕಿತ್ಸೆಗಾಗಿ ಜಾರಿಗೊಳಿಸಿದ್ದಾರೆ. ರಾಜ್ಯ ದಲ್ಲಿ 5 ಕೋಟಿ ಕಾರ್ಡುಗಳನ್ನು ನೀಡುವ ಗುರಿ ಇದ್ದು, ಈಗಾಗಲೇ ಒಂದು ಕೋಟಿ ಕಾರ್ಡ್ ನೀಡಿದ್ದೇವೆ. ಇದೊಂದು ಕಡೆಯಾದರೆ, ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಇಲ್ಲದೆ ನೇರವಾಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕಾದರೆ ಅವರಿಗೆ ಸುಲಭ ದರದಲ್ಲಿ ಚಿಕಿತ್ಸೆ ದೊರೆಯುವುದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಬಿ.ಸಿ.ನಾಗೇಶ್, ಗೋವಿಂದ ಕಾರಜೋಳ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ: ಸಿ.ಸೋಮಶೇಖರ್, ನಾರಾಯಣ ನೇತ್ರಾಲಯ ಆಸ್ಪತ್ರೆಯ ಹಿರಿಯ ವೈದ್ಯ ಡಾ: ಭುಜಂಗಶೆಟ್ಟಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!