ಶುಚಿತ್ವವೇ ಕಾಣದ ತುಮಕೂರು ಜಿಲ್ಲಾ ಆಸ್ಪತ್ರೆ

ತುಮಕೂರು ನಗರದ ಹೃದಯಭಾಗದಲ್ಲಿರುವ ಹಾಗೂ ಪ್ರತಿನಿತ್ಯ ಸಾವಿರಾರು ಜನರಿಗೆ ಆರೋಗ್ಯವನ್ನು ದಯಪಾಲಿಸುತ್ತಿರುವ ತುಮಕೂರು ಜಿಲ್ಲಾ ಆಸ್ಪತ್ರೆಯ ಆವರಣ ಗಬ್ಬೆದ್ದು ನಾರುತ್ತಿದೆ, ಇನ್ನೂ ಇಲ್ಲಿಗೆ ಬರುವ ರೋಗಿಗಳು, ರೋಗಿಗಳ ಸಂಬಂಧಿಕರು ಬಹುತೇಕರು ಬಡವರು, ರೈತಾಪಿ ವರ್ಗದವರು ಆಗಿದ್ದು, ಶ್ರೀಸಾಮಾನ್ಯರ ಆಸ್ಪತ್ರೆಯೆಂದೇ ಹೇಳಬಹುದು, ಇಂತಹ ಆಸ್ಪತ್ರೆಯ ಆವರಣವು ಶುಚಿತ್ವದಿಂದ ವಂಚಿತವಾಗಿದ್ದು, ಇಲ್ಲಿಗೆ ಬರುವ ರೋಗಿಗಳು ಪಿಸುಪಿಸು ಅಂತಾಃ ಬೈದಾಡಿಕೊಂಡು ಇಲ್ಲಿನ ಆಸ್ಪತ್ರೆಯ ಸಿಬ್ಬಂದಿಗಳಿಗೆ ಶಾಪ ಹಾಕಿಕೊಂಡು ಓಡಾಡುವುದು ಸರ್ವೇ ಸಾಮಾನ್ಯವಾಗಿದೆ.

 

 

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಈ ಹಿಂದೆ ಇದ್ದ ಜಿಲ್ಲಾ ಶಸ್ತ್ರಚಿಕಿತ್ಸಕರಾದ ವೀರಭದ್ರಯ್ಯರವರು ಆಸ್ಪತ್ರೆಯ ಬಗ್ಗೆ ಅಪಾರ ಕಾಳಜಿಯನ್ನು ವಹಿಸಿ ನಮ್ಮ ತುಮಕೂರು ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಅತ್ಯಂತ ಶ್ರಮವನ್ನು ವಹಿಸಿದ್ದರು, ಅದರ ಪ್ರತಿರೂಪವಾಗಿ ಇಂದು ನಮ್ಮ ಜಿಲ್ಲಾಆಸ್ಪತ್ರೆಯ ಆವರಣದಲ್ಲಿ ಹೈಟೆಕ್‌ ಎಂ.ಆರ್.ಐ. ಸೆಂಟರ್‌, ನರ್ಸಿಂಗ್‌ ಕಾಲೇಜು ಆಗಿರುತ್ತದೆ. ಇವೆಲ್ಲವೂ ಬಡವರ ಅನುಕೂಲಕ್ಕೆ ಆಗಿರುವುದು ಎಂದರೇ ತಪ್ಪಾಗಲಾರದು, ಹೊರಗಡೆ ಚಿಕಿತ್ಸೆಗೆ ಹೋದರೆ ಸಾವಿರಾರೂ, ಲಕ್ಷಾಂತರ ರೂಪಾಯಿಗಳು ಖರ್ಚು ಆಗುತ್ತದೆ, ಆದರೆ ಇಲ್ಲಿ ಉಚಿತ ಆರೋಗ್ಯ ದೊರೆಯುತ್ತದೆ, ಜೊತೆಗೆ ಇಲ್ಲಿನ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಇಂತಿಷ್ಟು ನೀಡಿದರೇ ಇರೋದರಲ್ಲಿಯೇ ಸ್ವಲ್ಪ ಹೈಟೆಕ್‌ ಸೇವೆಯೂ ಲಭಿಸುತ್ತದೆ (ಇದು ಕಂಡರೂ ಕಾಣದ ಸತ್ಯವಾಗಿದೆ).

 

 

ಇನ್ನು ಇಲ್ಲಿಗೆ ಬರುವವರು ಬಡವರು, ರೈತಾಪಿ ವರ್ಗದ ಜನರು, ಶಕ್ತಿಹೀನರು ಎಂಬ ಕಾರಣಕ್ಕೋ ಏನು ಹಾಲಿ ಜಿಲ್ಲಾಶಸ್ತ್ರಚಿಕಿತ್ಸಕರು ತಮ್ಮ ಆಸ್ಪತ್ರೆಯ ಶುಚಿತ್ವದ ಕಡೆ ಗಮನಹರಿಸುತ್ತಿಲ್ಲ. ಏಕೆಂದರೆ ಆಸ್ಪತ್ರೆಯ ನಾಲ್ಕೂ ಮೂಲೆಗಳಲ್ಲಿ ಕಸದ ರಾಶಿಗಳು, ಮೆಡಿಕಲ್‌ ವೇಸ್ಟ್‌, ಕ್ಯಾಂಟಿನ್‌ಗಳ ಬಳಿ ತಂಬಾಕು ಉತ್ಪನ್ನಗಳ ಚೀಟಿಗಳು,  ಬೀಡಿ-ಸಿಗರೇಟ್ ತುಂಡುಗಳು‌, ಹೇರಳವಾಗಿ ಕಾಣಸಿಗುತ್ತದೆ, ಇನ್ನು ಆಸ್ಪತ್ರೆಯ ಹಿಂಭಾಗದಲ್ಲಿರುವ ಹಿರಿಯ ನಾಗರೀಕರ ವಾರ್ಡುಗಳ ಬಳಿ ಅಂತೂ ಕೆಟ್ಟ ದುರ್ವಾಸನೆಯೊಂದಿಗೆ ಆ ಸ್ಥಳಗಳಿಗೆ ಹೋಗಲೂ ಸಹ ಅಸಹ್ಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

 

 

ಇಷ್ಟು ಸಾಲದೆಂಬಂತೆ ಪೋಸ್ಟ್‌ ಮಾರ್ಟಮ್‌ ಸೆಂಟರ್‌ ಬಳಿ ಬಿದ್ದಿರುವ ಮೆಡಿಕಲ್‌ ವೇಸ್ಟ್‌ ನೋಡಿದರೇ ಸಾಕು ಬೆಚ್ಚಿಬೀಳುವಂತೆ ಆಗುತ್ತದೆ, ಜೊತೆಗೆ ಆಯುಷ್‌ ಬ್ಲಾಕ್‌ ಪಕ್ಕ, ಹೊಸದಾಗಿ ನಿರ್ಮಾಣವಾಗುತ್ತಿರುವ ನರ್ಸಿಂಗ್‌ ಕಾಲೇಜ್‌ ಬ್ಲಾಕ್‌ ಹತ್ತಿರ, ಮಕ್ಕಳ ಚುಚ್ಚುಮದ್ದು ಕೇಂದ್ರದ ಮುಂಭಾಗ, ಹೀಗೆ ಹೇಳುತ್ತಾ ಹೋದರೆ ಜಿಲ್ಲಾ ಆಸ್ಪತ್ರೆಯ ಪ್ರಾಂಗಣ ಪೂರಾ ಕಸದರಾಶಿ / ಮೆಡಿಕಲ್‌ ವೇಸ್ಟ್‌ ಗಳ ರಾಶಿ ರಾಶಿಗಳು ಕಾಣ ಸಿಗುತ್ತವೆ.

 

ಇನ್ನು ಈ ಆಸ್ಪತ್ರೆಗೆ ಸಚಿವರೋ, ಶಾಸಕರೋ, ಜಿಲ್ಲಾಧಿಕಾರಿಗಳೋ ಮುಂತಾದವರು ಭೇಟಿ ನೀಡುವ ಸುಳಿವು ಸಿಕ್ಕಿದರೆ ಸಾಕು ತಾರುತುರಿಯಲ್ಲಿ ಅವರುಗಳು ಓಡಾಡುವ ಜಾಗಗಳು ಮತ್ತು ಅಕ್ಕ-ಪಕ್ಕದ ಸ್ಥಳಗಳು ಮಾತ್ರ ಸ್ವಚ್ಛಗೊಳ್ಳುತ್ತವೆ, ಇನ್ನುಳಿದ ಭಾಗಗಳಿಗೆ ಮುಕ್ತಿಯೇ ಸಿಗುವುದಿಲ್ಲ. ಇಂತಹ ಅವ್ಯವಸ್ಥೆಯ ಸ್ಥಳದಲ್ಲಿ ಪಾಪ ಬಡವರು ಹೆಚ್ಚಿಗೆ ಹಣಕಾಸು ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಕಿತ್ಸೆ ಪಡೆಯಲು ಆಗದೇ, ಹೇಗೋ ಸರಿದೂಗಿಸಿಕೊಂಡು ಇಲ್ಲೇ ಚಿಕಿತ್ಸೆ ಪಡೆಯೋಣವೆಂದು ಸುಮ್ಮನಾಗುತ್ತಾರೆ, ಇಲ್ಲಿನ ಸಿಬ್ಬಂದಿಗಳಿಗೇ ಇದೇ ವರದಾನವಾಗಿರುವುದರಿಂದ ಶುಚಿತ್ವದ ಕಡೆ ಗಮನಹರಿಸಿದೇ, ತಮ್ಮ ಆಂತರಿಕ ಜೇಬುಗಳನ್ನು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

 

ಈ ಎಲ್ಲಾ ಆವಂತರಗಳಿಗೆ ಮುಕ್ತಿ ಸಿಗುವುದಾದರೂ ಎಂದು ಎಂಬುದೇ ಶ್ರೀಸಾಮಾನ್ಯನ ಬೇಡಿಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!