ತುಮಕೂರು: ತುಮಕೂರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸುವಲ್ಲಿ ಡಾ|| ರಫೀಕ್ ಅಹ್ಮದ್ ವಿಫಲರಾಗಿದ್ದಾರೆ ಎಂಬ ವಿಚಾರವಾಗಿ, ಗೋವಿಂದರಾಜು ನೀಡಿರುವ ಹೇಳಿಕೆಯನ್ನು ನೋಡಿದರೆ ಅವರಿಗೆ ಅಪ್ರಬುದ್ದತೆ ಕಾಡುತ್ತಿದೆ ಎಂದರೆ ತಪ್ಪಾಗಲಾರದು. ಕೇವಲ ಚುನಾವಣೆ ಸಮಯದಲ್ಲಿ ತುಮಕೂರಿನ ಜನತೆಗೆ ಮುಖ ತೋರಿಸುವ ಗೋವಿಂದರಾಜು ರವರಿಗೆ ನಗರದ ಯಾವ ವಾರ್ಡ್‌ನಲ್ಲಿ ಏನೇನು ಕೆಲಸಗಳಾಗಿವೆ ಎಂದು ತಿಳಿದಿಲ್ಲ. ನಗರಕ್ಕೆ ಗೋವಿಂದರಾಜು ರವರ ಕೊಡುಗೆ ಏನು ಎಂದು ಮಾಜಿ ಶಾಸಕರು ಪ್ರಶ್ನಿಸಿದ್ದಾರೆ. ಯಾರಿಗೆ ಯಾವ ಪ್ರಶ್ನೆ ಕೇಳಬೇಕು ಎಂಬ ಪರಿಜ್ಙಾನವಿಲ್ಲದವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಶಾಸಕರಾಗುವ ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಶಾಸಕ ಡಾ||ರಫೀಕ್ ಅಹ್ಮದ್ ಶಾಸಕರು ತೀವ್ರವಾಗಿ ಖಂಡಿಸಿದ್ದಾರೆ.
ನಾನು ಶಾಸಕನಾಗಿದ್ದಾಗ ತುಮಕೂರು ಜಿಲ್ಲಾಸ್ಪತ್ರೆ ನವೀಕರಣ ಮಾಡಿಸಿ, MRI, CTC, ಅಖಿಅ ಸ್ಕ್ಯಾನ್ ಸೆಂಟರ್ ಪ್ರಾರಂಭಿಸಿ, ಇನ್ನಿತರ ಮಿಷಿನರಿ ಒದಗಿಸಿ ಬಡ ಜನರಿಗೆ ಉಚಿತವಾದ ಸೌಲಭ್ಯ ಸಿಗುವಂತೆ ಮಾಡಿದ್ದೆನು. ಇನ್ನೂ ಹೆಚ್ಚಿನ ಸೌಲಭ್ಯ ಸಿಗುವಂತಾಗಲಿ ಎಂಬ ನಿಟ್ಟಿನಿಂದ ವೈದ್ಯಕೀಯ ಆಸ್ಪತ್ರೆ ಸ್ಥಾಪಿಸುವಂತೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸಿದ್ದರಾಮಯ್ಯ ರವರಿಗೆ ಹಲವು ಬಾರಿ ಮನವಿ ಮಾಡಿ, ಇದರ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ನನ್ನ ಸತತ ಪ್ರಯತ್ನದಿಂದ ತುಮಕೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಉದ್ದೇಶಿಸಲಾಗಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ವೈದ್ಯಕೀಯ ಕಾಲೇಜು ಸ್ಥಾಪಿಸುವುದು ತಡವಾಯಿತು. ಆದಷ್ಟು ಬೇಗ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಾನು ಪ್ರಶ್ನೆ ಕೇಳಿರುವುದೂ ಉಲ್ಲೇಖವಾಗಿದೆ. ಈ ವೇಳೆ ನನ್ನ ಒತ್ತಾಂiiದ ಮೇರೆಗೆ ಸುಮಾರು ೧೨೫ಕೋಟಿ ರೂಪಾಯಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದಾಗಿ ಸರ್ಕಾರ ತೀರ್ಮಾನ ತಗೆದುಕೊಂಡಿತು, ಅದರಂತೆ ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಡಾ||ರಫೀಕ್ ಅಹ್ಮದ್ ತಿಳಿಸಿದ್ದಾರೆ.
ಆದರೆ ತದನಂತರ ಬಿ.ಜೆ.ಪಿ ಸರ್ಕಾರ ಬಂದು ನಾಲ್ಕೂವರೆ ವರ್ಷಗಳಾದರೂ ವೈದ್ಯಕೀಯ ಕಾಲೇಜು ಮಂಜೂರಾಗಿಲ್ಲ, ಆಢಳಿತಾರೂಢ ಪಕ್ಷ, ಸಚಿವರು, ಶಾಸಕರನ್ನು ಪ್ರಶ್ನೆ ಮಾಡುವುದು ಬಿಟ್ಟು ನನ್ನನ್ನು ಪ್ರಶ್ನೆ ಮಾಡುವುದು ಗಮನಿಸಿದರೆ ಗೋವಿಂದರಾಜು ರವರ ಅಸಹಾಯಕತೆ ಮತ್ತು ಹತಾಶೆ ಮನೋಭಾವ ತೋರುತ್ತದೆ. ನಾನು ಶಾಸಕನಾಗಿದ್ದಾಗ ತುಮಕೂರು ನಗರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃಧ್ದಿ ಹೊಂದಿದ ನಗರವನ್ನಾಗಿ ಮಾಡಲು ಶ್ರಮಿಸಿದ್ದೇನೆ. ನಗರ ಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿ, ಎಲ್ಲಾ ವಾರ್ಡ್ ಗಳಿಗೂ ಸಮರ್ಪಕ ಅನುದಾನ ನೀಡಿ ಅಭಿವೃಧ್ದಿಗೊಳಿಸಿದ್ದಕ್ಕೆ ತುಮಕೂರು ನಗರ ಸ್ಮಾರ್ಟ್‌ಸಿಟಿಗೆ ಆಯ್ಕೆಯಾದದ್ದು. ನಾನು ಮಾಡಿದ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಈಗಲೂ ನಿಮ್ಮ ಕಣ್ಣ ಮುಂದಿವೆ ಎಂದು ಮಾಜಿ ಶಾಸಕರು ತಿಳಿಸಿದ್ದಾರೆ. ಹಣ ಹೆಂಡ ಹಂಚುವ ರಾಜಕೀಯ ಬಿಟ್ಟು ನಗರ ಪ್ರದಕ್ಷಿಣೆ ಹಾಕಿ, ನಾನು ಶಾಸಕನಾಗಿದ್ದಾಗ ಆಗಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ತಿಳಿದುಕೊಳ್ಳಿ ಎಂದು ಗೋವಿಂದರಾಜುರವರಿಗೆ ಡಾ.ರಫೀಕ್ ಅಹ್ಮದ್ ಸಲಹೆ ನೀಡಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದರಾಜು ರವರು ನಗರದ ಬಗ್ಗೆ ಕಾಳಜಿಯುಳ್ಳಬೇಕಾಗಿದ್ದವರು 2018-19 ರ ಸಾಲಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿದ್ದಾಗ ಹೆಚ್.ಡಿ.ಕುಮಾರಸ್ವಾಮಿ ರವರ ಗಮನ ಸೆಳೆದು ನಗರದ ಅಭಿವೃದ್ದಿಗಾಗಿ ಯಾವ ಅನುದಾನ ಪಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ಡಾ.ರಫೀಕ್ ಅಹ್ಮದ್ ಪ್ರಶ್ನಿಸಿದ್ದಾರೆ. ಇದೇ ಅವಧಿಯಲ್ಲಿ ಡಾ||ಜಿ.ಪರಮೇಶ್ವರ್ ರವರು ಉಪ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ನಾನು ಮನವಿ ಮಾಡಿದಾಗ ಮಹಾನಗರ ಪಾಲಿಕೆಗೆ 125 ಕೋಟಿ ಅನುದಾನ ನೀಡಿದ್ದರು ಎಂದು ಡಾ.ರಫೀಕ್ ಅಹ್ಮದ್ ಮಾಹಿತಿ ನೀಡಿದ್ದಾರೆ.